Site icon Vistara News

Accident News: ಸೆಕೆ ಎಂದು ಕೆರೆಗೆ ಜಿಗಿದ ವ್ಯಕ್ತಿ ಸಾವು; ವಿದ್ಯುತ್‌ ತಂತಿ ತುಳಿದು ಪ್ರಾಣಬಿಟ್ಟ ರೈತ

Accident News Drowned in water

ವಿಜಯಪುರ: ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದಲ್ಲಿ ಸ್ನೇಹಿತರ ಜತೆಗೆ ಕೆರೆಯಲ್ಲಿ (Drowned in water) ಈಜಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ (Accident News) ಮೃತಪಟ್ಟಿದ್ದಾರೆ. ರಾಜಶೇಖರ (37) ಮೃತ ದುರ್ದೈವಿ.

ವಿಜಯಪುರದಲ್ಲಿ ರಣ ಬಿಸಿಲಿನಿಂದ ಸೆಕೆ ಹೆಚ್ಚಾಗಿದ್ದಕ್ಕೆ ರಾಜಶೇಖರ ಮಖಣಾಪುರ ಗ್ರಾಮದಲ್ಲಿನ ಕೆರೆಯಲ್ಲಿ ಈಜಲು ಹೋಗಿದ್ದರು. ಎಂಟು ಮಂದಿ ಸ್ನೇಹಿತರ ಜತೆಯಾಗಿ ಕೆರೆಯಲ್ಲಿ ಈಜಲು ಹೋದಾಗ ಘಟನೆ ನಡೆದಿದೆ.

ಕೆರೆಗೆ ಇಳಿದಾಗ ನೀರಿನಿಂದ ಹೊರಬರಲು ಆಗದೆ ರಾಜಶೇಖರ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಜತೆಗೆ ಇದ್ದವರು ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಮೈಸೂರಲ್ಲಿ ವಿದ್ಯುತ್ ತಂತಿ ತುಳಿದು ರೈತ ಸಾವು

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ರೈತರಿಬ್ಬರು ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾರೆ. ರಾಚನಾಯಕ (70) ಮೃತ ದುರ್ದೈವಿ. ಮೇದಿನಿ ಗ್ರಾಮದ ನಿವಾಸಿ ರಾಚನಾಯಕ ಅವರು ಗದ್ದೆಗೆ ನೀರು ಹಾಯಿಸಲು ಹೋಗಿದ್ದರು.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತು. ಆದರೆ ಇದನ್ನು ಗಮನಿಸಿದ ರಾಚನಾಯಕ ವಿದ್ಯುತ್ ತುಳಿದಿದ್ದಾರೆ. ದಿಢೀರ್‌ ವಿದ್ಯುತ್‌ ಪ್ರವಹಿಸಿದ್ದು ಕ್ಷಣಾರ್ಧದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಲಕಾಡು ಪೊಲೀಸರು ಹಾಗೂ ಸೆಸ್ಕ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder case : ಪತಿ ಮೇಲಿನ ಸಿಟ್ಟಿಗೆ ಮೂಕ ಮಗುವನ್ನೇ ಕಾಲುವೆಗೆ ಎಸೆದಳು; ಮೊಸಳೆ ಬಾಯಲ್ಲಿತ್ತು ಮೃತದೇಹ!

ಸಡನ್‌ ಬ್ರೇಕ್‌ಗೆ ಸರಣಿ ಅಪಘಾತ

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 5 ಕಾರುಗಳು ಜಖಂಗೊಂಡಿವೆ. ಕಾರೊಂದು ಸಡನ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬಂದ ನಾಲ್ಕು ಕಾರುಗಳು ಪರಸ್ಪರ ಡಿಕ್ಕಿಯಾಗಿವೆ. ಸರಣಿ ಅಪಘಾತದಿಂದ 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

accident News

ಹೆದ್ದಾರಿಯಲ್ಲಿ ಪಲ್ಟಿಯೊಡೆದ ಪೆಟ್ರೋಲ್ ಟ್ಯಾಂಕರ್

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಮುಗುಚಿ ಬಿದ್ದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಟ್ಯಾಂಕರ್ ಮಗುಚಿ ಬೀಳುತ್ತಿದ್ದಂತೆ ಪೆಟ್ರೋಲ್ ಸೋರಿಕೆಯಾಗಿತ್ತು.

ಕೂಡಲೇ ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಸಿಬ್ಬಂದಿ ಮಗುಚಿ ಬಿದ್ದ ಟ್ಯಾಂಕರ್ ಕ್ರೈನ್ ಮೂಲಕ ಮೇಲೆತ್ತಿದ್ದರು. ಇನ್ನೂ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಸೋರಿಕೆಯಾಗಿದ್ದ ಪೆಟ್ರೋಲ್ ತೆರವು ಮಾಡಲಾಯಿತು. ಮಂಗಳೂರಿನಿಂದ ಅತ್ತಿಬೆಲೆ ಕಡೆಗೆ ಬರುತ್ತಿದ್ದ ಟ್ಯಾಂಕರ್‌ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version