ವಿಜಯಪುರ : ವಿಜಯಪುರದ ಸೈನಿಕ ಶಾಲೆಯ ಪ್ರಾಚಾರ್ಯರಾಗಿ ಭಾರತೀಯ ವಾಯುದಳದ ಹಿರಿಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಇವರು ಸೈನಿಕ ಶಾಲೆಯ ಪ್ರಾಚಾರ್ಯರಾಗಿ ನೇಮಕಗೊಂಡಿರುವ ಪ್ರಥಮ ಮಹಿಳಾ ಅಧಿಕಾರಿ. ಸೈನಿಕ ಶಾಲೆಯ ಆರು ದಶಕಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಪ್ರಾಚಾರ್ಯರಾಗಿ ಹುದ್ದೆಗೇರಿದ್ದಾರೆ.
ಭಾರತದಲ್ಲಿ 25ಕ್ಕೂ ಹೆಚ್ಚು ಸೈನಿಕ ಶಾಲೆಗಳಿವೆ. 13ನೇ ಶಾಲೆಯಾಗಿ ಆರಂಭವಾದುದು ವಿಜಯಪುರದ ಸೈನಿಕ ಶಾಲೆ. ಕರ್ನಾಟಕದ ಮಾಜಿ ಸಚಿವ ಎಸ್.ಆರ್. ಕಂಠಿ ಅವರ ಕನಸಿನ ಕೂಸು ಈ ಸೈನಿಕ ಶಾಲೆ. ಕಂಠಿ ಅವರ ಸತತ ಪ್ರಯತ್ನ ಮತ್ತು ರಕ್ಷಣಾ ಖಾತೆಯ ಸಹಯೋಗದೊಂದಿಗೆ 1963ರಲ್ಲಿ ವಿಜಯಪುರದ ವಿಜಯಾ ಕಾಲೇಜು ಆವರಣದಲ್ಲಿ ಶುರುವಾಗಿತ್ತು. ಮೂರು ವರ್ಷಗಳ ನಂತರ 1966ರ ಡಿಸೆಂಬರ್ 17ರಂದು 406 ಎಕರೆ ಪ್ರದೇಶದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ಭಾರತದ ಅಂದಿನ ಉಪರಾಷ್ಟ್ರಪತಿ ಡಾ. ಝಾಕಿರ್ ಹುಸೇನ್ ಅವರು ಉದ್ಘಾಟಿಸಿದರು. ಅಂದಿನಿಂದ ನಾಲ್ಕೂವರೆ ದಶಕಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸೈನಿಕರನ್ನು ದೇಶಕ್ಕೆ ಸೈನಿಕ ಶಾಲೆ ಅರ್ಪಣೆ ಮಾಡಿದೆ.
ಸೈನಿಕ ಶಾಲೆಯಲ್ಲಿ ಈವರೆಗೆ ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆಗಳ ಹಿರಿಯ ಪುರುಷ ಅಧಿಕಾರಿಗಳು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಮಹಿಳಾ ಅಧಿಕಾರಿಯೊಬ್ಬರು ಸೈನಿಕ ಶಾಲೆಯ ಪ್ರಾಚಾರ್ಯರಾಗಿ ನೇಮಕಗೊಂಡಿರುವುದು ಪ್ರಥಮ. ಅಲ್ಲದೆ, ಸೈನಿಕ ಶಾಲೆಯ ಉಪ ಪ್ರಾಚಾರ್ಯರಾಗಿ ಕಮಾಂಡರ್ ಸುರುಚಿ ಗೌರ್ ನೇಮಕವಾಗಿರುವುದೂ ಇನ್ನೂ ವಿಶೇಷ.
ಇದನ್ನೂ ಓದಿ : ಜಿನದತ್ತ ದೇಸಾಯಿ, ಮೊಗಸಾಲೆ, ಸರಸ್ವತಿ ಚಿಮ್ಮಲಗಿ ಸೇರಿ 15 ಸಾಧಕರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ವಾಯು ಪಡೆಯ ಉನ್ನತ ಅಧಿಕಾರಿಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ತಮ್ಮ 22 ವರ್ಷದ ಸೇವಾವಧಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವಾಯು ಪಡೆಯ ಶೈಕ್ಷಣಿಕ ವಿಭಾಗದ ಡೆಪ್ಯೂಟಿ ಕಮಾಂಡ್ ಜಾಯಿಂಟ್ ಡೈರೆಕ್ಟರ್ ಮತ್ತು ಕೊಯಮತ್ತೂರಿನ ವಾಯು ಪಡೆಯ ಎಡ್ಮಿನಿಸ್ಟ್ರೇಷನ್ ಕಾಲೇಜಿನ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಪ್ರತಿ ವರ್ಷವೂ ಸೈನಿಕ ಶಾಲೆಗೆ ಹತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಈ ಸೈನಿಕ ಶಾಲೆಯಲ್ಲಿ ಸುಮಾರು 30 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯ ಸಹಭಾಗಿತ್ವದ ಹಿನ್ನೆಲೆಯಲ್ಲಿ ಈ ಎಲ್ಲ ಅಂಶಗಳು ಗಮನ ಸೆಳೆದಿವೆ.
ಇದನ್ನೂ ಓದಿ : ಆರ್. ರಾಜು, ಸುಭಾಷ್ ಚಂದ್ರ ಸೇರಿ ಆರು ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ