ವಿಜಯಪುರ: ವಿಜಯಪುರ ಜಿಲ್ಲೆ (Vijayapura District) ಇಂಡಿ ತಾಲೂಕಿನ ಲಚ್ಯಾಣ (Lachyan) ಗ್ರಾಮ ಮಾತ್ರವಲ್ಲ, ಇಡೀ ರಾಜ್ಯವೇ ಒಂದು ಸಲ ನಿಟ್ಟುಸಿರು ಬಿಟ್ಟಿತ್ತು. ಕೊಳವೆಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಸಾತ್ವಿಕ್‌ನನ್ನು ಸತತ ಕಾರ್ಯಾಚರಣೆ (Borewell Tragedy) ಮೂಲಕ ಹೊರತೆಗೆಯಲಾಗಿತ್ತು. ಕೊಳವೆಬಾವಿಯಲ್ಲಿ ಸಿಲುಕಿದ ಕಾರಣಕ್ಕೆ ಸಾತ್ವಿಕ್‌ಗೆ ದೇಹದ ಮೇಲೆ ಯಾವುದೇ ಸಣ್ಣ-ಪುಟ್ಟ ಗಾಯಗಳಾಗಿಲ್ಲ. ಆದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ ದೇಹದೊಳಗೆ ಏನಾದರೂ ಹಾನಿಯಾಗಿದೆಯೇ ಎಂಬುದನ್ನು ತಿಳಿಯಲು ಇಂಡಿ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ರವಾನೆ ಮಾಡಲಾಗಿದೆ.
ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಸಾತ್ವಿಕ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಗು ಆರೋಗ್ಯವಾಗಿದೆ. ಯಾವುದೇ ರೀತಿಯ ಮೂಳೆ ಮುರಿತ ಮತ್ತು ಗಾಯಗಳಿಲ್ಲ. ನಿಗಾವಹಿಸುವಿಕೆ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾಹಿತಿ ನೀಡಿದ್ದಾರೆ.
ಮಗು ಬದುಕಿ ಬಂದಿದ್ದು ಒಂದು ರೀತಿಯ ಪವಾಡ ಎಂದು ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಭಾವೋದ್ವೆಗಕ್ಕೊಳಗಾದರು. ಮಗು ಹೊರಗೆ ಬರುತ್ತಿದ್ದಂತೆ ನಗುತ್ತಲೇ ಇತ್ತು. ಮಗುವಿನ ಹೃದಯದ ಬಡಿತ ನರ್ಮಲ್ ಆಗಿದೆ. ತುಂಬಾ ಧೈರ್ಯದಿಂದ 18 ತಾಸು ಕುಳಿತಿದೆ. ಸದ್ಯ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತಲೆ ಕೆಳಗಾಗಿ ಬಿದ್ದ ಕಾರಣ ಮೆದುಳಿಗೆ ಪೆಟ್ಟು ಬಿದ್ದಿರಬಹುದು ಎಂಬ ಅನುಮಾನವಿದೆ. ಹೀಗಾಗಿ ಬ್ರೇನ್ ಸ್ಕ್ಯಾನಿಂಗ್ ಮಾಡಬೇಕಿದೆ. ಸ್ಕ್ಯಾನಿಂಗ್ ಬಳಿಕ ಮತ್ತೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.
ಇದನ್ನೂ ಓದಿ: Borewell Tragedy: ಸಾವು ಗೆದ್ದು ತಾಯಿ ಮಡಿಲು ಸೇರಿದ ಸಾತ್ವಿಕ್; ಈಗ ಹೇಗಿದೆ ಆರೋಗ್ಯ?
ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುತ್ತಿರುವುದು ಬೇಸರ- ಸಿಎಂ ಸಿದ್ದರಾಮಯ್ಯ
ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ. ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ – ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋಟಿ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಸ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ, ಮಗುವನ್ನು ರಕ್ಷಣಾ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರತೆಗೆದಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಸಚಿವರು, ಕೋಟಿ ಕೋಟಿ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ. ದೇವರ ದಯೆಯಿಂದ, ರಕ್ಷಣಾ ಸಿಬ್ಬಂದಿಯ ಶ್ರಮದಿಂದ ಮಗು ಸುರಕ್ಷಿತವಾಗಿ ಹೊರಗೆ ಬಂದಿದೆ. ನಮ್ಮೆಲ್ಲರ ಆತಂಕ ದೂರವಾಗಿದೆ. ರಕ್ಷಣಾ ಸಿಬ್ಬಂದಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಸಾತ್ವಿಕ್ ಚೇತರಿಸಿಕೊಳ್ಳಲಿ- ಮಾಜಿ ಸಿಎಂ ಕುಮಾರಸ್ವಾಮಿ
ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಮೃತ್ಯುಂಜಯನಾಗಿ ಹೊರಬಂದ ಸಾತ್ವಿಕ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಎಚ್‌ಡಿ ಕುಮಾರ್‌ಸ್ವಾಮಿ ಟ್ವೀಟ್ ಮಾಡಿದರು. ಅತ್ಯಂತ ಕಠಿಣ ಮತ್ತು ಸವಾಲಿನದ್ದು ಆಗಿದ್ದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಮಗುವಿನ ಜೀವ ಉಳಿದಿದ್ದು ನನಗೆ ಅತೀವ ಸಂತಸ ಉಂಟು ಮಾಡಿದೆ. ಮಗುವನ್ನು ರಕ್ಷಣೆ ಮಾಡಿದ ಎಲ್ಲಾ NDRF, SDRF, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗೆ ಅವರ ಪೋಷಕರು ಮಾತ್ರವಲ್ಲ, ಇಡೀ ನಾಡಿಗೆ ನಾಡೇ ಋಣಿಯಾಗಿದೆ ಎಂದು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಇನ್ನೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಸಾತ್ವಿಕ್ ಸುರಕ್ಷಿತವಾಗಿ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಕೊಳವೆ ಬಾವಿಯಲ್ಲಿ ಸಿಲುಕಿದ್ದ ಮಗುವನ್ನ ರಕ್ಷಣೆ ಮಾಡಿದ ಸಿಬ್ಬಂದಿ ಧನ್ಯವಾದ ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ