ವಿಜಯಪುರ: ಜಮೀನಿನ ದಾರಿ ವಿಚಾರವಾಗಿ ಉಂಟಾಗಿದ್ದ ದಾಯಾದಿಗಳಲ್ಲಿ ಕಲಹ, ಹಳೇ ದ್ವೇಷ ಮತ್ತಷ್ಟು ಉಲ್ಬಣವಾಗಿ ಅಶೋಕ ಕುಂಬಾರ ಕೊಲೆಯಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದ ಬಳಿ ನಡೆದಿದೆ.
ಬುಧವಾರ ಬೆಳಗ್ಗೆ ದ್ರಾಕ್ಷೀಯ ತೋಟದಲ್ಲಿ ಜಮೀನಿಗೆ ಹೋಗುವ ದಾರಿ ವಿಚಾರಕ್ಕೆ ಅಶೋಕ ಕುಂಬಾರನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇವರ ಸಂಬಂಧಿ ಮಹಾದೇವಪ್ಪ ಕುಂಬಾರ ಹಾಗೂ ಸಹಚರರು ಸೇರಿಯೇ ಕೊಲೆ ಮಾಡಿದ್ದಾರೆ ಎಂದು ಕೊಲೆಗೀಡಾದ ಅಶೋಕ ಕುಟುಂಬಸ್ಥರ ಆರೋಪವಾಗಿದೆ.
ಮೃತ ಅಶೋಕ ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಸಂಬಂಧಿ ಮಹಾದೇವಪ್ಪ ಎಂಬಾತನ ಮೇಲೆ ಹಲ್ಲೆ ಮಾಡಿ, ಅವರ ಮಕ್ಕಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಹೊಡೆದು ಕಾಲು ಮುರಿದಿದ್ದೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ | ಮಕ್ಕಳನ್ನು ಕದ್ದು ಮಾರುತ್ತಿದ್ದಳ ಸ್ಟಾಫ್ ನರ್ಸ್?: ನಾಲ್ಕು ಮಕ್ಕಳ ರಕ್ಷಣೆ
ಬಳಿಕ ಅವರು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೂರು ದಾಖಲಾಗಿ ಜೈಲು ಸೇರಿದ್ದ. ಕಳೆದ ಒಂದು ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರ ಬಂದಿದ್ದ. ಬುಧವಾರ ಬೆಳಗ್ಗೆ ಅಶೋಕ ತಮ್ಮ ಜಮೀನಿಗೆ ಹೋಗುವ ಸಂದರ್ಭದಲ್ಲಿ ಹಳೆಯ ಸಿಟ್ಟಿನಿಂದ ದಾರಿಯಲ್ಲೆ ಕೊಲೆ ನಡೆದಿದೆ ಎಂದು ಅಶೋಕನ ತಂದೆ ತಿಳಿಸಿದ್ದಾರೆ.
ದಾಯಾದಿಗಳ ಮಧ್ಯೆ ಗಲಾಟೆ ಹಲವು ವರ್ಷಗಳಿಂದ ನಡೆಯುತ್ತಿತ್ತು. ಇದೆಲ್ಲದಕ್ಕೂ ಪ್ರಮುಖ ಕಾರಣವೇ ತಮ್ಮ ತಮ್ಮ ಜಮೀನಿನ ದಾರಿ ಸಮಸ್ಯೆ. ಅದೇ ಗಲಾಟೆ ಇಂದು ಕೊಲೆಯಲ್ಲಿ ಅಂತ್ಯವಾಗುವ ಹಾಗೆ ಆಗಿದೆ. ಅಶೋಕ ಕುಂಬಾರ ಮೃತ ಪಟ್ಟ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನ ಸಾವಿಗೆ ನ್ಯಾಯ ಬೇಕು ಎಂದು ಮೃತನ ಕುಟುಂಬಸ್ಥರು ಕಣ್ಣೀರು ಹಾಕಿದರು.
ಜಮೀನಿನ ದಾರಿಯ ವಿಚಾರವಾಗಿ ಕೊಲೆ ನಡೆದಿರುವಂತ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ಈ ಹಿಂದೆಯೂ ನಡೆದಿವೆ. ಇದೆಲ್ಲದಕ್ಕೂ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳುವಂತಾಗಬೇಕು ಎಂದು ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ.
ಜಿಲ್ಲಾ ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ‘ವೈ ಗಿವ್ ದ ಬ್ಯಾಡ್ ರಿಪೋರ್ಟ್’ ಎಂದು ಅರಚಿದ ಕಿಂಗ್‌ಪಿನ್ ಸ್ಟಾಫ್ ನರ್ಸ್!