ವಿಜಯಪುರ: ಕಾರ್ಯಕರ್ತರು ಹಾಗೂ ಮತದಾರರು ನೀವೇ ಅಭ್ಯರ್ಥಿಗಳು ಎಂದು ಭಾವಿಸಿ ಮತ ಚಲಾಯಿಸಿ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಹನುಮಂತ ನಿರಾಣಿ ಹಾಗೂ ಅರುಣ್ ಶಹಾಪುರ ಇಬ್ಬರೂ ಅಭ್ಯರ್ಥಿಗಳು ಹೆಚ್ಚು ಅಂತರದಿಂದ ನಿಸ್ಸಂಶಯವಾಗಿ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ನಾಯಕರು, ಮತದಾರರ ಸಭೆ ಮಾತನಾಡಿದರು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ದೇಶದ ಶ್ರೇಯಸ್ಸಿಗೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕೈ ಬಲಪಡಿಸಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ. ಇನ್ನೂ ಹತ್ತು ವರ್ಷ ಕಾಲ ನಾನು ಇದೇ ರೀತಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಭಾಷಣ ಮಾಡಲಿದ್ದೇನೆ. ವಯಸ್ಸಾಗಿದೆ ಎಂದು ಭಾವಿಸಬೇಡಿ ಎಂದು ಮಾರ್ಮಿಕವಾಗಿ ನುಡಿದರು.
ವಾಯವ್ಯ ಪದವೀಧರ ಮತ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆ ಬಯಸಿ ಮಾತನಾಡಿದ ಅಭ್ಯರ್ಥಿ ಹನುಮಂತ ನಿರಾಣಿ, ಕಳೆದ ಆರು ವರ್ಷಗಳ ಕಾಲ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ, ಮತದಾರರು ಆಶೀರ್ವದಿಸಿದಲ್ಲಿ ಮುಂದೆಯೂ ಪದವೀಧರರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಇದನ್ನೂ ಓದಿ | ಬಿಜೆಪಿ, ಶ್ರೀರಾಮ ಸೇನೆ ಮುಖಂಡರ ಹತ್ಯೆಗೆ ₹20 ಲಕ್ಷ ಬಹುಮಾನ, ದೂರು ದಾಖಲು
ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ ಅವರು ಮಾತನಾಡಿ, ಮೈಸೂರು ಮಹಾರಾಜರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಉತ್ತರ ಕರ್ನಾಟಕಕ್ಕಿಂತ, ದಕ್ಷಿಣ ಕರ್ನಾಟಕ ಮುಂದುವರಿಯಲು ಕಾರಣವಾಯಿತು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೂರನೇ ಬಾರಿ ತಮಗೆ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ಸಚಿವ ಮುರುಗೇಶ ನಿರಾಣಿ ಮಾತನಾಡಿ, ಹನುಮಂತ ನಿರಾಣಿ ಹಾಗೂ ಅರುಣ್ ಶಹಾಪುರ ಅವರು ಇವೇ ಕ್ಷೇತ್ರಗಳಿಂದ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ತಮ್ಮೆಲ್ಲ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದು ಮತದಾರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾಂಗ್ರೆಸ್‌ನವರ ಚಡ್ಡಿಯನ್ನು ಜನತೆ ಕಳಚುವ ಭಯದಲ್ಲಿ ಈಗ ಆರ್‌ಎಸ್‌ಎಸ್ ಚಡ್ಡಿ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕುರುಡುಗಣ್ಣಿನಿಂದ ನೋಡುತ್ತಿದೆ ಎಂದು ಕಿಡಿ ಕಾರಿದರು. ಸಚಿವ ಗೋವಿಂದ ಕಾರಜೋಳ ಮಾತನಾಡಿ, ಪದವೀಧರರಿಗೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಆಭ್ಯರ್ಥಿಗಳು ಮಾಡಿದ್ದಾರೆ. ಮೈಸೂರು ಮಹಾರಾಜರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗಿಲ್ಲ ಆತ್ಮಸಾಕ್ಷಿ
ಆತ್ಮಸಾಕ್ಷಿ ಅನ್ನೋ ಶಬ್ದಕ್ಕೆ ಮತ್ತು ಸಿದ್ದರಾಮಯ್ಯ ಅವರಿಗೆ ಸಂಬಂಧವೇ ಇಲ್ಲ, ಈ ರೀತಿ ಹೇಳಿಕೆ ಕೊಡುವುದರ ಮೂಲಕ ಪ್ರಚಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಾಗಲ್ಲ. ನೂರಕ್ಕೆ ನೂರರಷ್ಟು ಲೆಹರ್ ಸಿಂಗ್ ಸೇರಿ ನಮ್ಮ ಮೂರು ಅಭ್ಯರ್ಥಿಗಳು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ವಿಜಯೇಂದ್ರ ಭವಿಷ್ಯದ ಸಿಎಂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಆ ಥರಾ ಮಾತನಾಡಿಲ್ಲ. ಯಾರೋ ಅವರ ಸ್ನೇಹಿತರು, ಆತ್ಮೀಯರು ಹೇಳಿದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡುವುದಿಲ್ಲ, ವಿಜಯೇಂದ್ರನಿಗೆ ಒಳ್ಳೆಯ ಭವಿಷ್ಯವಿದೆ, ಕೆಲಸ ಮಾಡುತ್ತಿದ್ದಾನೆ ಎಂದರು.
ಇದನ್ನೂ ಓದಿ | ನೂಪುರ್ ಶರ್ಮಾಗೆ ಸಂಕಷ್ಟ; ರಕ್ಷಿಸಿ ಎಂದು ದೆಹಲಿ ಪೊಲೀಸ್ ಮೊರೆ ಹೋದ ಬಿಜೆಪಿ ಮಾಜಿ ವಕ್ತಾರೆ