ವಿಜಯಪುರ: ವಿವಾಹ ಪೂರ್ವದಲ್ಲಿ ಜನನವಾದ ಮಕ್ಕಳ ಸಾಗಾಣಿಕೆ ದಂಧೆ ಆರೋಪದಲ್ಲಿ ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಜಯಮಾಲಾ ವಿರುದ್ಧ ದೂರು ದಾಖಲಾಗಿದೆ. ಒಟ್ಟು ಐದು ಮಕ್ಕಳನ್ನು ಈಕೆ ವಿವಿಧೆಡೆ ಸಾಕುತ್ತಿದ್ದಳು ಎಂದು ತಿಳಿದುಬಂದಿದ್ದು, ಇದೀಗ ನಾಲ್ಕು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿರುವ ಜಯಮಾಲಾ ವಿಜಯಪುರ ನಗರದ ಅಥಣಿ ಗಲ್ಲಿಯ ನಿವಾಸಿ. ಅನುಮಾನದ ಮೇಲೆ ಆಕೆಯನ್ನು ಬಂಧಿಸಿದ ನಂತರ ಅನೇಕ ವಿಚಾರಗಳನ್ನು ಬಾಯಿಬಿಟ್ಟಿದ್ದಾಳೆ. ಮನೆಯಲ್ಲಿ ಹಾಗೂ ಇತರರ ಬಳಿ ಒಟ್ಟು ಐದು ಮಕ್ಕಳನ್ನು ಅನಧಿಕೃತವಾಗಿ ಸಾಕುತ್ತಿರುವುದಾಗಿ ಆಕೆ ಹೇಳಿದ್ದಾಳೆ. 5 ವರ್ಷದ ಗಂಡು ಮಗು 3 ವರ್ಷದ ಹೆಣ್ಣು ಮಗುವನ್ನು ತನ್ನ ಮನೆಯಲ್ಲೇ ಜಯಮಾಲ ಸಾಕಿಕೊಂಡಿದ್ದಳು. ಇದೀಗ ಒಟ್ಟು ನಾಲ್ಕು ಮಕ್ಕಳನ್ನು ರಕ್ಷಣೆ ಮಾಡಿ ಸಿದ್ದೇಶ್ವರ ದತ್ತು ಕೇಂದ್ರಕ್ಕೆ ಪೊಲೀಸರು ಒಪ್ಪಿಸಿದ್ದಾರೆ. 5 ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಹಿಳೆ ಸಾಕುತ್ತಿದ್ದು, ಆ ಮಗುವಿನ ರಕ್ಷಣೆಗೆ ಪೊಲೀಸರು ತೆರಳಿದ್ದಾರೆ.
ಇದನ್ನೂ ಓದಿ | ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಆಯಿಲ್ ಮಾರಾಟ: ಖಾಕಿಗೇ ಚಳ್ಳೆಹಣ್ಣು ತಿನ್ನಿಸಿದ ದಂಧೆಕೋರ!
ಮಹಿಳೆ ಇಷ್ಟು ಮಕ್ಕಳನ್ನು ಏಕೆ ಸಾಕುತ್ತಿದ್ದಳು ಎಂಬ ಅನುಮಾಣ ಮೂಡಿದೆ. ಅನಧಿಕೃತವಾಗಿ ಮಕ್ಕಳ ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಳಾ ಎಂಬ ಸಂಶಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ವಿಜಯಪುರ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಯಿಂದ ಮತ್ತಷ್ಟು ರಹಸ್ಯಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ | ಬಟ್ಟೆ ಒಣಗಲು ಹಾಕುವಾಗ ವಿದ್ಯುತ್ ಸ್ಪರ್ಶ, ತಾಯಿ, ಇಬ್ಬರು ಮಕ್ಕಳು ದಾರುಣ ಮರಣ