ವಿಜಯಪುರ: ಕುಸ್ತಿ ಅಂದ್ರೆ ತಾಕತ್ತಿನ ಕ್ರೀಡೆ. ಸಖತ್ ಆಗಿ ಕಸರತ್ತು ಮಾಡಿದಾಗ ಮಾತ್ರ ಎದುರಾಳಿಯನ್ನು ನೆಲಕ್ಕುರುಳಿಸಲು ಸಾಧ್ಯ. ಹೀಗೆ ಸಿದ್ಧತೆ ನಡೆಸಿದ ವಿಜಯಪುರದ ಕುಸ್ತಿಪಟು ವಿದೇಶದಲ್ಲೂ ಬಿಗಿ ಪಟ್ಟು ಹಾಕಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಮೂಲಕ ಜಿಲ್ಲೆ ಮಾತ್ರವಲ್ಲದೇ ನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಹೀಗೆ ಬಂಗಾರದ ಪದಕ, ಪ್ರಶಸ್ತಿಯೊಂದಿಗೆ ನಾಡಿಗೆ ಕೀರ್ತಿ ತಂದವರು ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಮಕಣಾಪುರ ಗ್ರಾಮದ ಮಲ್ಕಪ್ಪಾ ಎಂಬ ಬಡ ರೈತನ ಮಗ ಅಮಗೊಂಡ ನಿರವಾಣಿ. ಮಲ್ಕಪ್ಪಾ ಕೂಡ ಪ್ರತಿಭಾವಂತ ಕುಸ್ತಿ ಪಟುವಾಗಿದ್ದರು.
ಅಮಗೊಂಡ ಕಳೆದ ತಿಂಗಳು ಮೇ 25 ರಿಂದ 28 ರವೆರೆಗೆ ಥೈಲ್ಯಾಂಡ್‌ನಲ್ಲಿ ನಡೆದ ʼಸೌತ್ ಏಷಿಯನ್ ಗೇಮ್ಸ್’ನ ಕುಸ್ತಿ ವಿಭಾಗದಲ್ಲಿ ಬಂಗಾರದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಭಾರತದಿಂದ ತೆರಳಿದ್ದ ಒಟ್ಟು 14 ಜನರಲ್ಲಿ 4 ಜನರು ಬಂಗಾರದ ಪದಕ ಗಳಿಸಿದ್ದಾರೆ. ಅವರಲ್ಲಿ ನಮ್ಮ ರಾಜ್ಯದ ಕುಸ್ತಿಪಟು ಅಮಗೊಂಡ ಸಹ ಇರುವುದು ಹೆಮ್ಮೆಯ ಸಂಗತಿ. ಅಮಗೊಂಡ 125 ಕೆಜಿ ತೂಕದ ಕುಸ್ತಿಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ಇದೇ ರೀತಿ ಬೇರೆ ಬೇರೆ ವಿಭಾಗದ ಕುಸ್ತಿ ಸ್ಪರ್ಧೆ ಯಲ್ಲಿ ಒಟ್ಟು 4 ಬಂಗಾರದ ಪದಕಗಳು ಭಾರತ ಗೆದ್ದಿದೆ.
ʼʼಕುಸ್ತಿ ತರಬೇತಿ ಪಡೆಯುವುದಕ್ಕೆ ಹಳ್ಳಿಯಿಂದ ವಿಜಯಪುರಕ್ಕೆ ಬರುವುದಕ್ಕೆ ಕಷ್ಟವಾಗುತ್ತಿತ್ತು. ನನಗೆ ವಿಜಯಪುರದಲ್ಲಿ ಉಳಿದುಕೊಳ್ಳಲು ಕ್ರೀಡಾ ಇಲಾಖೆಯವರು ಸಹಾಯ ಮಾಡಲಿಲ್ಲ. ಇಂತಹ ಸಂಗತಿಗಳನ್ನೆಲ್ಲಾ ಬದಿಗಿರಿಸಿ ಸಾಧನೆಯತ್ತ ಮುಖ ಮಾಡಿದ ಪರಿಣಾಮ ಇದೀಗ ಬಂಗಾರ ಪದಕ ಗೆದ್ದೆ. ಇದರಿಂದ ಖುಷಿ ಆಗಿದೆʼʼ ಎಂದು ಅಮಗೊಂಡ ನಿರವಾಣಿ ತಮ್ಮ ಈ ಸಾಧನೆ ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ 2020 ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ 125 ಕೆಜಿ ತೂಕದ ಕುಸ್ತಿ ಸ್ಪರ್ಧೆಯಲ್ಲಿ ಜಯಗಳಿಸಿದ್ದ ಅಮಗೊಂಡ ಥೈಲ್ಯಾಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆ ಆಗಿದ್ದರು. 64 ಸಾವಿರ ರೂ. ಕಟ್ಟಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಬಡ ಕುಟುಂಬವಾದ ಕಾರಣ ಈ ಹಣ ಹೊಂದಿಸೋದು ಕಷ್ಟವಾಗಿತ್ತು. ಆಗ ಕುಸ್ತಿಪಟು ಅಮಗೊಂಡನಿಗೆ ಜನಪ್ರತಿನಿಧಿಗಳು ಧನ ಸಹಾಯ ಮಾಡಿದ್ದರು.
ಶಾಸಕ ದೇವಾನಂದ ಚವ್ಹಾಣ 20 ಸಾವಿರ, ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಅನೇಕರು ಧನ ಸಹಾಯ ಮಾಡಿದ ಕಾರಣದಿಂದಾಗಿ ಅಮಗೊಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಾಗಿತ್ತು.
ಈಗ ಮಗನ ಸಾಧನೆಯಿಂದಾಗಿ ಪೋಷಕರು ಕಷ್ಟ ಕಾಲದಲ್ಲಿ ನೆರವಾದವರನ್ನು ನೆನೆಯುತ್ತಿದ್ದಾರೆ. ಈವರೆಗೆ ಅಮಗೊಂಡ 12 ರಾಜ್ಯ ಪ್ರಶಸ್ತಿ, ಕರ್ನಾಟಕ ಹಂಪಿ ವೀರ ಕೇಸರಿ ಪ್ರಶಸ್ತಿ, ಕರ್ನಾಟಕ ಕುಸ್ತಿ ಹಬ್ಬ ಧಾರವಾಡದಲ್ಲಿ ಚಿನ್ನದ ಪದಕ, 12 ರಾಷ್ಟ್ರ ಪ್ರಶಸ್ತಿ, ಸೌತ್ ಇಂಡಿಯನ್ ಸೀನಿಯರ್ ನ್ಯಾಷನಲ್ ಪ್ರಶಸ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅಮಗೊಂಡನ ಈ ಸಾಧನೆಯಿಂದ ಕುಟುಂಬಸ್ಥರ ಸಂತಸ ಮುಗಿಲು ಮುಟ್ಟಿದೆ. ಕುಸ್ತಿ ವರ್ಕೌಟ್ ಗೆ ಪ್ರತಿ ತಿಂಗಳು 25 ಸಾವಿರ ಖರ್ಚಾಗುತ್ತಿದೆ.
ವಿಜಯಪುರದಲ್ಲಿ ಉತ್ತಮವಾದ ಕುಸ್ತಿ ಗರಡಿಮನೆಯಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿಪಟುಗಳಿದ್ದು, ಸರ್ಕಾರ ಜಿಲ್ಲಾಡಳಿತ ಗರಡಿ ಮನೆ ನಿರ್ಮಾಣಕ್ಕೆ ಒತ್ತು ಕೊಡಬೇಕು, ಕುಸ್ತಿ ಕ್ರೀಡೆ ಉಳಿಸಿ, ಬೆಳೆಸಬೇಕು ಎಂದು ಅಮಗೊಂಡ ತಂದೆ ಮಲ್ಕಪ್ಪ ನಿರವಾಣಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ| ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ: ಕ್ರೀಡಾ ಸಚಿವ ನಾರಾಯಣಗೌಡ