ವಿಜಯಪುರ: ರಾಜ್ಯಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದು ಫಲಿತಾಂಶ ದಿನ ಗೊತ್ತಾಗುತ್ತದೆ. ಬಿಜೆಪಿ ಮೂರನೇ ಅಭ್ಯರ್ಥಿಯೂ ಖಂಡಿತಾ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಯುವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಶುಕ್ರವಾರ ಪ್ರಚಾರ ನಡೆಸಿದ ಸಂದರ್ಭ ಮಾತನಾಡಿದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ 2ನೇ ಅಭ್ಯರ್ಥಿಯ ನಾಮಪತ್ರವನ್ನು ಹಿಂಪಡೆದಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ | ವಿಧಾನ ಪರಿಷತ್ 7 ಅಭ್ಯರ್ಥಿಗಳ ಅರ್ಜಿ ಸ್ವೀಕೃತ
ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ, ಹನುಮಂತ ನಿರಾಣಿ ಪರವಾಗಿ ನಗರದ ಬಿಡಿಇ ಸಂಸ್ಥೆ ಸಭಾಂಗಣದಲ್ಲಿ ಪ್ರಚಾರ ನಡೆಸಿದರು. ಬೆಳಗಾವಿ ಯಾವಾಗಲೂ ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸಿಗಲಿದೆ. ಹೀಗಾಗಿ ವಾಯವ್ಯ ಪದವೀಧರ, ಶಿಕ್ಷಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕ ಕ್ಷೇತ್ರದ ಅರುಣ್ ಶಹಾಪುರ ಮತ್ತೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಪಠ್ಯ ಪರಿಷ್ಕರಣೆಯಲ್ಲಿ ಬಸವಣ್ಣ ಅವರಿಗೆ ಅಪಮಾನ ಆಗಿದೆ ಎಂಬ ಆರೋಪಕ್ಕೆ ಸ್ಪಂದಿಸಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ಸಚಿವರಿಂದ ವರದಿ ಕೇಳಿದ್ದಾರೆ. ಈ ವಿವಾದ ಇತ್ಯರ್ಥ ಮಾಡುವ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ವಾದ ವಿವಾದಗಳು ಬರುವುದು ಸಾಮಾನ್ಯ. ಯಾರ ಮನಸ್ಸಿಗೂ ನೋವು ಆಗದಂತೆ ಸರ್ಕಾರ ನಿರ್ಧಾರ ಮಾಡುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!