Site icon Vistara News

ಲೋಕಾಯುಕ್ತಕ್ಕೆ ಹಲ್ಲಿದೆಯೇ, ಇಲ್ಲವೇ ನೀವೇ ನಿರ್ಧಾರ ಮಾಡಿ: ನ್ಯಾಯಮೂರ್ತಿ ಉತ್ತರ

ಲೋಕಾಯುಕ್ತ ಬಿ.ಎಸ್‌.ಪಾಟೀಲ್‌

ವಿಜಯಪುರ: ಲೋಕಾಯುಕ್ತ ಸಂಸ್ಥೆಗೆ ಹಲ್ಲಿದೆಯೇ ಇಲ್ಲವೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್‌ ಶುಕ್ರವಾರ ತಿಳಿಸಿದರು. ಗುರುವಾರದಿಂದ (ಜೂನ್‌ 23) ಮೂರು ದಿನಗಳ ಕಾಲ ವಿಜಯಪುರದ ಪ್ರವಾಸ ಕೈಗೊಂಡಿರುವ ಲೋಕಾಯುಕ್ತರು, ವಿಜಯಪುರದ ಲೋಕಾಯುಕ್ತ ಎಸ್ಪಿ ಹಾಗೂ ಬಾಗಲಕೋಟೆ ಎಸ್ಪಿ, ಎರಡೂ ಜಿಲ್ಲೆಗಳ ಲೋಕಾಯುಕ್ತ ಡಿವೈಎಸ್ಪಿ, ಇನ್ಸಪೆಕ್ಟರುಗಳೊಂದಿಗೆ ಸಭೆ ನಡೆಸಿ ಮುಂದಿನ ಕೆಲಸ ಕಾರ್ಯಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಇದನ್ನೂ ಓದಿ | ನೂತನ ಲೋಕಾಯುಕ್ತ ನ್ಯಾ.ಬಿ.ಎಸ್.‌ ಪಾಟೀಲ್‌ ಪ್ರಮಾಣ ವಚನ ಸ್ವೀಕಾರ, ರಾಜಭವನದಲ್ಲಾಯ್ತು ಕಾರ್ಯಕ್ರಮ

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯು ಜನರ ಸಮಸ್ಯೆಗಳನ್ನ ಆಲಿಸಬೇಕು, ಆ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು. ಅದು ಯಾವುದೇ ಇಲಾಖೆಯಿರಲಿ, ಕಂದಾಯ, ಪಂಚಾಯತ್‌ರಾಜ್‌, ಆರೋಗ್ಯ, ಆಸ್ಪತ್ರೆಗಳು, ಸಾರಿಗೆ ಇಲಾಖೆ ಹಾಗೂ ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಜನರಿಗೆ ನ್ಯಾಯಯುತವಾಗಿ ತಲುಪಬೇಕಾದ ಸೌಲಭ್ಯಗಳನ್ನ ತಲುಪುವಂತೆ ನೆರವಾಗಬೇಕೆಂದು ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಕುರಿತು ಜನರಿಂದ ದೂರು ಕೇಳಿ ಬಂದಲ್ಲಿ, ತಕ್ಷಣ ಸಂಬಂಧಿತ ಅಧಿಕಾರಿಗಳನ್ನ ಸಂಪರ್ಕಿಸಿ ನ್ಯಾಯ ದೊರಕಿಸಿಕೊಡಲು ಸಾಧ್ಯವಿದ್ದರೆ ಪ್ರಯತ್ನಿಸಬೇಕು, ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಸುಮೋಟೊ ಕೇಸ್‌ ದಾಖಲು

ರಾಜ್ಯದಲ್ಲಿಯೇ ಅರಣ್ಯ ಪ್ರದೇಶ ಅತ್ಯಂತ ಕಡಿಮೆ ಹೊಂದಿರುವ ಜಿಲ್ಲೆ ಎಂದರೆ ವಿಜಯಪುರ ಜಿಲ್ಲೆ. ನಿಯಮದಂತೆ ಸರಾಸರಿ 33% ಅರಣ್ಯ ಪ್ರದೇಶವಿರಬೇಕು. ಆದರೆ 0.17% ಅರಣ್ಯ ಪ್ರದೇಶವಿರುವುದು ತೀರಾ ಶೋಚನೀಯ. ಜಿಲ್ಲೆಯಲ್ಲಿ ನೀರಾವರಿಯಾಗಿದ್ದು, ಅನ್ಯ ಜಿಲ್ಲೆಗಿಂತ ಈ ಜಿಲ್ಲೆಗೆ ಹೆಚ್ಚಿನ ಸಸಿಗಳನ್ನ ವಿತರಣೆ ಮಾಡಬೇಕು. ಜಿಲ್ಲೆಯಲ್ಲಿ ಹಸಿರು ಪ್ರದೇಶ ವೃದ್ಧಿಯಾಗಬೇಕು. ಆ ಕಾರಣಕ್ಕಾಗಿ ಜಿಲ್ಲೆಯಲ್ಲಿನ ಅರಣ್ಯ ವಿಭಾಗದ ಅಧಿಕಾರಿಗಳನ್ನ ಅಥವಾ ಅವರ ರಾಜ್ಯಮಟ್ಟದ ಅಧಿಕಾರಿಗಳನ್ನ ಒಳಗೊಂಡಂತೆ ನಾವೇ ಒಂದು ಸುಮೋಟೋ (ಸ್ವಯಂ ಪ್ರೇರಿತ ದೂರು) ಕೇಸ್‌ ದಾಖಲಿಸಲಿದ್ದೇವೆ ಎಂದರು.

ಮಂದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು

ಕೆಲವು ಅಧಿಕಾರಿಗಳು ಚುರುಕಾಗಿರುತ್ತಾರೆ, ಕೆಲವು ಅಧಿಕಾರಿಗಳು ಚುರುಕಾಗಿರದೇ ಮಂದ ಇರುತ್ತಾರೆ. ಅಂಥವರನ್ನ ಚುರುಕು ಮಾಡಬೇಕಾಗುತ್ತದೆ. ಆಗ ಆಡಳಿತ ವ್ಯವಸ್ಥೆ ಚುರುಕಾಗುತ್ತದೆ. ಲೋಕಾಯುಕ್ತ ಇಲಾಖೆಯನ್ನ ಹುಟ್ಟುಹಾಕಿರುವುದು ಈ ಕಾರಣಕ್ಕಾಗಿ. ಆಡಳಿತ ವ್ಯವಸ್ಥೆ ಚುರುಕಾಗಿರಬೇಕೆಂದರೆ ಎಲ್ಲಾ ಅಧಿಕಾರಿಗಳು ಸಮರ್ಥರಾಗಿ ಚಾಕಚಕ್ಯತೆಯಿಂದ ಚುರುಕಾಗಿ ಕೆಲಸ ಮಾಡಬೇಕು. ಜನತೆ ಸಹ ಇಂತಹ ಪ್ರಕರಣಗಳ ಕುರಿತು ತಮಗಾದ ಸಮಸ್ಯೆಗಳ ಕುರಿತು ಹೇಳಿಕೊಳ್ಳಲು, ನಮಗೆ ತಿಳಿಸಲು, ದೂರು ದಾಖಲಿಸಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಯಾವ್ಯಾವ ಅಧಿಕಾರಿಗಳಿಂದ ಸಮಸ್ಯೆಯಾಗಿದೆ ಎಂದು ನಮ್ಮ ಮುಂದೆ ಮೌಖಿಕವಾಗಿ ಅಥವಾ ಲಿಖಿತವಾಗಿ ತಿಳಿಸಬೇಕು.

ಹಲ್ಲಿಲ್ಲದ ಹಾವು ಲೋಕಾಯುಕ್ತ

ಮಾಧ್ಯಮದವರು ಲೋಕಾಯುಕ್ತ ಎನ್ನುವುದು ಹಲ್ಲಿಲ್ಲದ ಹಾವಾಗಿದೆ ಎಂಬ ಮಾತಿಗೆ ಲೋಕಾಯುಕ್ತರು ಸ್ವಲ್ಪ ಸಿಡಿಮಿಡಿಗೊಂಡರು. ಹಲ್ಲಿಲ್ಲದ, ಹಲ್ಲಿದ್ದದ್ದು ಎಂದು ನೀವು ಏನು ಬೇಕಾದರೂ ಅನ್ನಬಹುದು, ಅದಕ್ಕೆ ನೀವು ಸ್ವತಂತ್ರರು. ಆದರೆ ಈಗ ಜಿಲ್ಲಾಸ್ಪತ್ರೆ, ಹುನಗುಂದ ಇಲಕಲ್ಲ ಆಸ್ಪತ್ರೆ, ಸಾರಿಗೆ ಇಲಾಖೆ, ಪಂಚಾಯತಿಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಮಾಡುವ ಪ್ರಕರಣಗಳನ್ನ ದಾಖಲಿಸಲಾಗಿದೆ. ಈಗ ಲೋಕಾಯುಕ್ತ ಎನ್ನುವುದು ಏನು ಎಂದು ವ್ಯಾಖ್ಯಾನಿಸಿ ಎಂದರು.

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಲೋಕಾಯುಕ್ತರ ದಿಢೀರ್‌ ಭೇಟಿ

ಲೋಕಾಯುಕ್ತ ಬಿ.ಎಸ್.ಪಾಟೀಲ್‌ ಸಭೆ ನಡೆಸಿದ ಬಳಿಕ ದಿಢೀರ್‌ ವಿಜಯಪುರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆರ್.ಟಿ.ಓ ಕಚೇರಿ ನಿರ್ವಹಣೆ ಬಗ್ಗೆ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಆರ್.ಟಿ.ಓ ಕಚೇರಿ ಎನ್ನುವುದು ರಾಜ್ಯದಲ್ಲಿ ಮಾದರಿ ಆಗಬೇಕು. ಮುಂದಿನ ಬಾರಿ ನಾನು ಕಚೇರಿಗೆ ಭೇಟಿ ನೀಡಿದಾಗ ಉತ್ತಮ ಆಡಳಿತದ ವಾತಾವರಣ ಇರಬೇಕು. ಜಿಲ್ಲೆಯ ಝಳಕಿ ಚೆಕ್‌ಪೋಸ್ಟ್‌ ಕುರಿತಾಗಿ, ಅಲ್ಲಿನ ಸಮಸ್ಯೆ ಕುರಿತಾಗಿ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಕುರಿತು ದೂರುಗಳು ಮತ್ತೆ ಕೇಳಿಬಂದರೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೇಕಾಬಿಟ್ಟಿಯಾಗಿ ಅಧಿಕಾರಿಗಳು ಬರುವುದು, ಹೋಗುವುದು ಮಾಡುವಂತಿಲ್ಲ.ಕಡ್ಡಾಯ ಹಾಜರಾತಿ ಇರಬೇಕೆಂದ ಅವರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ ಹಾಗೂ ಇತರೆ ಅಧಿಕಾರಿಗಳಿಗೆ ಹಾಜರಾತಿ ವಿವರ ತರಿಸಿ ಕ್ಲಾಸ್‌ ತೆಗೆದುಕೊಂಡರು. ವಾಹನ ನೋಂದಣಿಗೆ ಕೃಷಿಕರನ್ನು ಅಲೆದಾಡಿಸದಂತೆ ಮತ್ತು ಜನಸ್ನೇಹಿ ಆಡಳಿತ ನೀಡುವಂತೆ ತಾಕೀತು ಮಾಡಿದರು.

ಇದನ್ನೂ ಓದಿ | ಕರ್ನಾಟಕ ಲೋಕಾಯುಕ್ತರಾಗಿ ನ್ಯಾ.ಬಿ.ಎಸ್‌. ಪಾಟೀಲ್‌ ನೇಮಕ

Exit mobile version