ಹೊಸಪೇಟೆ : ಹಂಪಿ ಉತ್ಸವದ ( Hampi Utsava 2023) ಎರೆಡನೇ ದಿನವಾದ ಶನಿವಾರ, ಗಾಯಿತ್ರಿ ಮುಖ್ಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ (Raghu Dixit) ನೇತೃತ್ವದ ಬಹುಭಾಷಾ ಜನಪದ ಸಂಗೀತ ಕಲಾತಂಡ ನಡೆಸಿಕೊಟ್ಟ ಸಂಗೀತ ರಸಮಂಜರಿಯ ಮೋಡಿಗೆ ಹಂಪಿ ಜನತೆ ಬೆರಗಾದರು. ತತ್ವ ಹಾಗೂ ಜಾನಪದ ಗೀತೆಗಳಿಗೆ ದೇಶಿ- ವಿದೇಶಿ ಸಂಗೀತ ಸಮ್ಮಿಳಿಸಿದ ಗಾನಸುಧೆಯ ರಸದೌತಣ ಪ್ರೇಕ್ಷಕರನ್ನು ಹರ್ಷದ ಮುಗಿಲಲ್ಲಿ ತೇಲಿಸಿತು. “ಕಂಡೇ ಕಂಡೇ ನಾ ಪರಶಿವನಾ” ಎಂಬ ಜನಪದ ಸಂಗೀತದೊಂದಿಗೆ ರಘು ದೀಕ್ಷಿತ್ ರಸಮಂಜರಿ ಮೂಲಕ ಜನರನ್ನು ರಂಜಿಸಿದರು.
ಶಿಶುನಾಳರ ತತ್ವಪದಕ್ಕೆ ಹಿಪ್ಪೀ ಹಾಗೂ ರಾಕ್ ಸಂಗೀತ
ಶಿಶುನಾಳ ಶರೀಫರ ‘ಕೋಡಗನಾ ಕೋಳಿ ನುಗಿತ್ತಾ’ ತತ್ವ ಪದವನ್ನು ನವಮಾದರಿ ಹಿಪ್ಪಿ ಹಾಗೂ ರಾಕ್ ಸಂಗೀತದ ರಾಗ ಸಂಯೋಜನೆಯಲ್ಲಿ ರಘುದೀಕ್ಷಿತ್ ಹಾಡಿದರು. ಇದಕ್ಕೆ ಪೇಕ್ಷಕರು ಹುಚ್ಚೆದ್ದು ಕೂಗಿ ಸಂಭ್ರಮಿಸಿದರು. ಬಳಿಕ ಶರೀಫರ ‘ಓ ಲೋಕದಾ ಕಳಾಜಿ ಮಾಡಿತ್ತೀನಂತಿ ನಿಂಗ್ಯಾರ ಬ್ಯಾಂಡಾಂತರ ಮಾಡಪ್ಪ ಚಿಂತಿ’ ಗೀತೆಯನ್ನು ಹಾಡಿದರು. ‘ಗುಡುಗುಡಿಯಾ ಸೇದಿ ನೋಡೋ ಒಡಲೊಳಗಿನ ರೋಗ ತೊರೆದು ಇಟ್ಟಾಡೋ’ ಹಾಡು ಕೇಳುಗರಿಗೆ ಮುದ ನೀಡಿತು.
ಸೈಕೋ ಚಿತ್ರದ ‘ತನವು ನಿನ್ನದೇ ನಿನ್ನಾಣೆ, ಮನವು ನಿನ್ನದೇ ನಿನ್ನಾಣೆ’, ‘ನಿನ್ನಾ ಪೂಜೆಗೆ ಬಂದೇ ಮಾದೇಶ್ವರ’ ಹಾಗೂ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ‘ಮುಂಜಾನೆ ಮಂಜಲ್ಲಿ, ಮುಸ್ಸಂಜೆ ತಿಳಿ ತಂಪಲ್ಲಿ’ ಹಾಡು ಜನಮನ ಸೂರೆಗೊಂಡಿತು.
ಸಂಭ್ರಮದ ಹೊನಲು ಹರಡಿದ ಗಿಟಾರ್ ವಾದನ
ರಘು ದೀಕ್ಷಿತ್, ನರೇಶ್, ರಮನ್, ಹೆಬಾರ್ ಸಂಜಯ್ ಕುಮಾರ್ ಅವರ ಕೈಯಲ್ಲಿನ ಗಿಟಾರ್ ಒಂದುವರೆ ತಾಸಿಗೂ ಅಧಿಕ ಸಮಯ ಸಂಭ್ರಮದ ಹೊನಲನ್ನು ಗಾಯಿತ್ರಿ ವೇದಿಕೆಯಲ್ಲಿ ಹರಡಿತು. ಅಕ್ಷಯ್ ಗಣೇಶ್ ತಮ್ಮ ವೈಯಲಿನ್ ತಂತಿಗಳ ಮೇಲೆ ವೈಯಲಿನ್ ಬಿಲ್ಲನ್ನು ಪ್ರಯೋಗಿಸಿ ತಾರಕ ಸ್ವರಗಳನ್ನು ಹೊರಡಿಸಿದರು. ಜೋ ಜೇಕಬ್ ಅವರು ಡ್ರಮ್ಸ್ ಮೂಲಕ ಜನರನ್ನು ಹುಚ್ಚೆಬ್ಬಿಸಿದರು. ಕೊಳಲು ವಾದನದ ಮೂಲಕ ಗೌತಮ್ ವಿನೋದ್ ಜನರ ಮನಸೂರೆಗೊಂಡರು. ಪಾರ್ಕೆಷನ್ ರಾಹುಲ್ ರೇಜಶ್, ವಿನೋದ್ ಬಂಗೇರ ಸೌಂಡ್ ಇಂಜಿನಿಯರ್, ಲೈಟಿಂಗ್ ಜ್ಞಾನದೇವ್ ಸಿಂಗ್ ತಂಡಕ್ಕೆ ಸಾಥ್ ನೀಡಿದರು. ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ ವೆಂಕಟೇಶ್.ಟಿ ಹಾಗೂ ಜಿ.ಪಂ.ಸಿಇಓ ಬೋಯರ್ ಹರ್ಷಲ್ ನಾರಾಯಣರಾವ್ ರಘು ದೀಕ್ಷಿತ್ ತಂಡವನ್ನು ಸನ್ಮಾನಿಸಿದರು.
ಹಂಪಿ ಉತ್ಸವದ ಸಮಾರೋಪ ಸಮಾರಂಭ ಇಂದು
ವಿಶ್ವ ವಿಖ್ಯಾತ ಹಂಪಿ ಉತ್ಸವದ ಸಮಾರೋಪ ಸಮಾರಂಭ ಇಂದು ನಡೆಯಲಿದೆ. ಕಳೆದ 27ನೇ ತಾರೀಖಿನಿಂದ ಹಂಪಿ ಉತ್ಸವ ಶುರು ಆಗಿತ್ತು. ಭಾನುವಾರ ಸಂಜೆ 6ಕ್ಕೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ. ಸಚಿವ ಆನಂದ್ ಸಿಂಗ್ ಉತ್ಸವದ ಅಧ್ಯಕ್ಷತೆ ವಹಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಸಚಿವರಾದ ಶ್ರೀರಾಮುಲು, ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಟಿ ಸೋಮಶೇಖರ್, ಕೆ.ಸಿ ನಾರಾಯಣ ಗೌಡ, ವಿ. ಸುನೀಲ್ ಕುಮಾರ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ, ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಮಾಜಿ ಸಚಿವರು ಭಾಗಿ ಆಗಲಿದ್ದಾರೆ.
ಸಮಾರೋಪ ಅರಂಭದಲ್ಲಿ ಅನನ್ಯ ಭಟ್ ಹಾಗೂ ತಂಡದಿಂದ ಸಂಗೀತ ರಸಸಂಜೆ, ಎಕ್ಸ್ ಒನ್ ಎಕ್ಸ್ ತಂಡದಿಂದ ಬಾಲಿವುಡ್ ನೃತ್ಯ, ವಿಜಯನಗರ ಪ್ರಕಾಶ್ ತಂಡದಿಂದ ರಸಮಂಜರಿ, ಕೈಲಾಸ್ ಖೇರ್ ರಿಂದ ಬಾಲಿವುಡ್ ರಸಮಂಜರಿ ಸೇರಿ ಹತ್ತು ಹಲವು ಕಾರ್ಯಕ್ರಮಗಳು ಇರಲಿವೆ.
ಇನ್ನು, ಉತ್ಸವದ ಕೊನೆಯ ದಿನವಾದ ವಿರೂಪಾಕ್ಷೇಶ್ವರ ದೇಗುಲ, ಎದುರು ಬಸವಣ್ಣ ದೇಗುಲ ಹಾಗೂ ಸಾಸಿವೆಕಾಳು ಗಣಪ ಎದುರಿನ ವೇದಿಕೆಗಳಲ್ಲಿ ದೊಡ್ಡಾಟ, ಭಜನ ಭರತ ನಾಟ್ಯ, ಬಯಲಾಟ, ಲಂಬಾಣಿ ನೃತ್ಯ ಹಾಗೂ ಶರಣರ ವಚನಗಳು ಸೇರಿ 30 ರಿಂದ 40ಕ್ಕೂ ಅಧಿಕ ಸಂಗೀತ ಕಾರ್ಯಕ್ರಮಗಳು ಇರಲಿವೆ. ಕೊನೆಯ ದಿನವಾದ ಇಂದು ಹಂಪಿಯಲ್ಲಿ ವ್ಯಾಪಕ ಬಿಗಿಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.