ವಿಜಯಪುರ: ರಾಜ್ಯದಲ್ಲಿ ಭೀಕರ (Drought in Karnataka) ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿ ಹಲವಾರು ಹಳ್ಳಿಗಳಲ್ಲೂ ಈಗ ನೀರಿಗೆ ಹಾಹಾಕಾರ (Water Crisis) ಎದುರಾಗಿದೆ. ನೀರು ಪೂರೈಕೆ (Water Supply) ಮಾಡಲು ಕಷ್ಟಪಡುತ್ತಿರುವ ಸ್ಥಳೀಯ ಆಡಳಿತಗಳು ಹೈರಾಣಾಗಿವೆ. ಈ ವೇಳೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ್ದಾನೆ. ಅರೆಬೆತ್ತಲೆಯಾಗಿ ಕೂಗಾಡಿದ್ದಾನೆ. ನನ್ನ ಗ್ರಾಮಕ್ಕೆ ಕುಡಿಯುವ (Drinking Water) ನೀರಿಲ್ಲ. ಪಿಡಿಒ, ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪ ಮಾಡಿದ್ದಾನೆ.
ಇಂಡಿ ಬಸವೇಶ್ವರ ಸರ್ಕಲ್‌ನಲ್ಲಿರುವ ಜಿಯೋ ಟವರ್ ಅನ್ನು ಯುವಕ ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ ಕಡಣಿ ಎಂಬಾತನೇ ಟವರ್ ಏರಿರುವುದು ಎಂದು ತಿಳಿದುಬಂದಿದೆ. 250 ಅಡಿ ಎತ್ತರದ ಟವರ್‌ನ ತುದಿಗೆ ಯುವಕ ಏರಿದ್ದಾನೆ.
ಕುಡಿಯುವ ನೀರಿಗಾಗಿ ಟವರ್ ಏರಿದ ಭೂಪ!
ಸತೀಶ್ ಚಂದ್ರಶೇಖರ ಕಡಣಿ ಬಿಎಸ್ಎನ್ಎಲ್ ಟವರ್ ಹತ್ತಿದ್ದು, ನೀರಿಗಾಗಿ ಆಗ್ರಹಿಸುತ್ತಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಯುವಕನನ್ನು ಕೆಳಗೆ ಇಳಿಸಲು ಹರಸಾಹಸಪಡುತ್ತಿದ್ದಾರೆ.
ಯುವಕನ ಬೇಡಿಕೆ ಏನು?
ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಹಾಹಾಕಾರವಿದೆ. ಹಲವು ಬಾರಿ ಪಿಡಿಒ ಮತ್ತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಹಿಸಿಲ್ಲ. ನಮ್ಮ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಪರಿಹರಿಸಿದರೆ ಮಾತ್ರವೇ ನಾನು ಟವರ್‌ನಿಂದ ಇಳಿಯುತ್ತೇನೆ ಎಂದು ಯುವಕ ಪಟ್ಟುಹಿಡಿದು ಕುಳಿತಿದ್ದ.
ಕೆಳಗಿಳಿಸುವಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿ
ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಯುವಕ ಟವರ್ ಹತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ, ತನ್ನ ಶರ್ಟ್ ತೆಗೆದು ತನ್ನ ಪ್ರತಿಭಟನೆಯನ್ನು ತೋರಿದ್ದಾನೆ. ಕೆಳಗೆ ಸೇರಿದ್ದ ಜನರು, ಕೆಳಗೆ ಬರವಂತೆ ಎಷ್ಟೇ ಮನವಿ ಮಾಡಿದರೂ ಆತ ಕೆಳಗಿಳಿಯಲು ಸುತಾರಾಂ ಇಷ್ಟಪಡುತ್ತಿಲ್ಲ. ನನಗೆ ನನ್ನೂರಿನ ಸಮಸ್ಯೆ ಬಗೆಹರಿಯಬೇಕು. ಸಂಬಂಧಪಟ್ಟವರು ಇಲ್ಲಿಗೆ ಬಂದು ಭರವಸೆ ಕೊಡಬೇಕು. ಆಗ ಮಾತ್ರ ಇಳಿಯುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಟವರ್ ಹತ್ತಿ ಆತನನ್ನು ಕಾಪಾಡಲು ಮುಂದಾದರೆ, ಟವರ್‌ನಿಂದ ಹಾರಿ ಬಿಡುವುದಾಗಿ ಬೆದರಿಸಿದ್ದಾನೆ. ಇದು ಉಳಿದವರ ಭಯಕ್ಕೆ ಕಾರಣವಾಗಿತ್ತು. ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: Bangalore Water Crisis: ಬೆಂಗಳೂರಿನ ಜಲದಾಹ ನೀಗಿಸಲು ತ್ಯಾಜ್ಯ ನೀರಿನ ಮರುಬಳಕೆ: ಸಿದ್ದರಾಮಯ್ಯ
ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಳಿಕ ಯುವಕನ ಮನವೊಲಿಕೆಗೆ ಪ್ರಯತ್ನಪಟ್ಟಿದ್ದಾರೆ. ಆದರೆ, ಮೊದ ಮೊದಲಿಗೆ ಯುವಕ ಒಪ್ಪಲೇ ಇಲ್ಲ. ಬಳಿಕ ನಾಜಾಕಾಗಿ ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ, ಆತನ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.