Site icon Vistara News

BY Vijayendra: ಚಿಕ್ಕಬಳ್ಳಾಪುರದಲ್ಲಿ ವಿಜಯೇಂದ್ರಗೆ ಕಮಲದ ಪೇಟ ತೊಡಿಸಿ ಸನ್ಮಾನ

BY Vijayendra felicitated

ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿ.ವೈ. ವಿಜಯೇಂದ್ರ ಅವರು ಮೊದಲ ಬಾರಿ ಚಿಕ್ಕಬಳ್ಳಾಪುರಕ್ಕೆ ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಲಭಿಸಿತು. ತಾಲೂಕಿನ ದಿಬ್ಬೂರಿನಲ್ಲಿ ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಲು ತೆರಳಿದ್ದ ವೇಳೆ ಅವರನ್ನು ಪೂರ್ಣಕುಂಭ ಕಳಸಗಳೊಂದಿಗೆ ಗ್ರಾಮದ ಮಹಿಳೆಯರು ಸ್ವಾಗತಿಸಿದರು. ನಂತರ ಕಾರ್ಯಕ್ರಮದ ಸ್ಥಳದವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ವಿಜಯೇಂದ್ರ ಅವರನ್ನು ಕರೆದೊಯ್ಯಲಾಗಿದೆ. ವೇದಿಕೆಯಲ್ಲಿ ಕಮಲದ ಪೇಟ ತೊಡಿಸಿ, ಬೃಹತ್‌ ಕೇಸರಿ ಮತ್ತು ಹಸಿರು ಬಣ್ಣದ ಹಾರ ಹಾಕುವ ಮೂಲಕ ಕಾರ್ಯಕರ್ತರು ಸನ್ಮಾನಿಸಿದರು.

ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಗ್ಯಾರಂಟಿ ಅಂತ ಹೇಳಿ ಕಾಂಗ್ರೆಸ್‌ನವರು ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ. ಕಾಂಗ್ರೆಸ್‌ನವರು ಕೊಡೋದಕ್ಕೂ ಮುಂಚೆ ನರೇಂದ್ರ ಮೋದಿ ಹತ್ತು ಕೆ.ಜಿ. ಹಕ್ಕಿ ಕೊಡುತ್ತಿದ್ದರು. ಬಡವರ ಬಗ್ಗೆ ಕಾಳಜಿ ಇರುವ ಪ್ರಧಾನ ಮಂತ್ರಿ ಈ ದೇಶದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರ ಪಂಪ್‌ ಸೆಟ್‌ಗಳಿಗೆ ಏಳು ತಾಸು ವಿದ್ಯುತ್ ಕೊಡದೇ ವಂಚನೆ ಮಾಡಿದೆ. ಇವರ ಯೋಗ್ಯತೆಗೆ ಕೇವಲ ಎರಡು ಮೂರು ತಾಸು ಕೊಡೋದಕ್ಕೂ ಆಗಿಲ್ಲ. ವಿದ್ಯುತ್ ಇಲ್ಲದೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka Budget Session 2024: ಬರಪೀಡಿತ ರೈತರಿಗೆ ಕೊಡಲು ಇಲ್ಲದ ಹಣ, ಸಂಪುಟ ದರ್ಜೆ ಭಾಗ್ಯಕ್ಕಿದೆ: ಎಚ್‌ಡಿಕೆ ಕಿಡಿ

ಕಾಂಗ್ರೆಸ್ ಸರ್ಕಾರ ಬಹಳಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬಂದು ಎಂಟು, ಒಂಬತ್ತು ತಿಂಗಳಾದರೂ ಒಂದು ಹೊಸ ಯೋಜನೆ ನೀಡಿಲ್ಲ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಯಾವ ರೀತಿ ಯೋಜನೆಗಳನ್ನು ನೀಡಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಖಜಾನೆ ಖಾಲಿಯಾಗಿರುವ ಸಂದರ್ಭದಲ್ಲಿ, ಆರ್ಥಿಕ ಸಂದಿಗ್ಧ ಪರಿಸ್ಥಿತಿ ಮುಚ್ಚಿ ಹಾಕಲು ನರೇಂದ್ರಮೋದಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಹದಿನಾರು ಬಾರಿ ಬಜೆಟ್ ಮಂಡನೇ‌ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಕಡಿಮೆ ಆಗಿವೆ ಅಂತೇಳಿ ರಾಜ್ಯಪಾಲರಿಂದ ಹೇಳಿಸುತ್ತಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಯಡಿಯೂರಪ್ಪ ಹಾಲಿಗೆ ಪ್ರೋತ್ಸಾಹಧನ ಕೊಟ್ಟಿದ್ದರು. ಆದರೆ, ಈ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Enilla.. Enilla! : ಏನಿಲ್ಲ ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ.. ಹಾಡು ಬಳಸಿ ಸಿದ್ದರಾಮಯ್ಯ ಟ್ರೋಲ್‌ !

ವಿಜಯೇಂದ್ರರನ್ನು ಹಾಡಿ ಹೊಗಳಿದ ಮಾಜಿ ಸಚಿವ ಡಾ.ಕೆ‌. ಸುಧಾಕರ್

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು, ಬಿ.ವೈ. ವಿಜಯೇಂದ್ರ ಅತಿ ಚಿಕ್ಕವಯಸ್ಸಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಬಿ.ವೈ. ವಿಜಯೇಂದ್ರಗೆ ಯೋಗವೂ ಇದೆ, ಯೋಗ್ಯತೆಯೂ ಇದೆ. ಅವರಿಗೆ ರಾಜಕೀಯ ರಕ್ತಗತವಾಗಿ ಹರಿದುಬಂದಿದೆ. ಯಡಿಯೂರಪ್ಪನವರ ರಕ್ತ ಯಥಾವತ್ತಾಗಿ ಹರಿದು ಬಂದಿದೆ ಎಂದು ಬಿ.ವೈ. ವಿಜಯೇಂದ್ರರನ್ನು ಹಾಡಿ ಹೊಗಳಿದರು.

Exit mobile version