Site icon Vistara News

ಆಡುಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ಮುಟ್ಟದ ಕ್ಷೇತ್ರವೇ ಇಲ್ಲ: ತಂದೆಯನ್ನು ವಿಜಯೇಂದ್ರ ಹಾಡಿ ಹೊಗಳಿದ್ದೇಕೆ?

yeddiyurappa

ಹಾಸನ : ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಧೀಮಂತ ಜನ ನಾಯಕ ಎಂದು ಕರೆಯುತ್ತಾರೆ. ಬೇರೆ ಯಾರನ್ನೂ ಹಾಗೇ ಕರೆಯೋದಿಲ್ಲ ಅಂತಹ ನಾಯಕ ಅವರು ಎಂದು ಯಡಿಯೂರಪ್ಪರನ್ನ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಡಿ ಹೊಗಳಿದ್ದಾರೆ.

ಇಂದು (ಬುಧವಾರ) ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ ತಂದೆ ಮಾಜಿ ಸಿಎಂ ಯಡಿಯೂಪ್ಪರನ್ನ ಗುಣಗಾನ ಮಾಡಿದ್ದಾರೆ. “ಅದೆಷ್ಟು ಪಾದಯಾತ್ರೆ, ಅದೆಷ್ಟು ಸೈಕಲ್‌ ಜಾಥಾ ಹೋರಾಟ ಮಾಡಿದ್ದಾರೆ. ಇವೆಲ್ಲಾ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಮಾಡಿದ್ದಲ್ಲ. ಜನರ ನೋವಿಗೆ ಸ್ಪಂದಿಸಲು ನೆರವಾಗಲು ಹೋರಾಟ ಮಾಡಿದ್ದು. ಅವರು ಕೊಟ್ಟ ಯೋಜನೆಯನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆಡುಮುಟ್ಟದ ಸೊಪ್ಪಿಲ್ಲ ಎನ್ನೊ ರೀತಿಯಲ್ಲಿ ಯಡಿಯೂರಪ್ಪ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಹೀಗೆ ಅವರು ಎಲ್ಲರಿಗೂ ಅನುಕೂಲ ಆಗೊ ಕೆಲಸ ಮಾಡಿದ್ದಾರೆ. ಹಿಂದೆ ಬಿಜೆಪಿ ಎಂದರೆ ನಗರಕ್ಕೆ ಮಾತ್ರ ಸೀಮಿತ ಎಂದು ವಿಪಕ್ಷಗಳು ಮಾತನಾಡುತ್ತಿದ್ದರು. ಆದರೆ ಈಗ ಹಳ್ಳಿ, ಗಲ್ಲಿಯಲ್ಲೂ ಬಿಜೆಪಿ ಬೆಳೆದು ನಿಂತಿದೆ,” ಎಂದಿದ್ದಾರೆ.

ಇದನ್ನು ಓದಿ| ಯಡಿಯೂರಪ್ಪ ಸರ್ಜಿಕಲ್‌ ಸ್ಟ್ರೈಕ್‌ ಫೇಲ್‌: ಬಿಜೆಪಿಯಲ್ಲಿ ಸಂತೋಷ್‌ ಮೇಲುಗೈ

“ಬಿಜೆಪಿ ಅಧಿಕಾರಕ್ಕೆ ಬರೋದು ಕನಸು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಬಿಜೆಪಿ ಇವತ್ತು ಕರ್ನಾಟಕದಿಂದ ಕಾಶ್ಮೀರದವರೆಗೆ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಆದರೆ ಈಗ ಕಾಂಗ್ರೆಸ್ ಸ್ಥಿತಿ ಏನಾಗಿದೆ. ಅತಿ ಹೆಚ್ಚು ಸಂಸತ್ ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ ಕೇವಲ 42ಕ್ಕೆ ಕುಸಿದಿದೆ. ಪ್ರತಿ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳೋ ರಾಹುಲ್ ಗಾಂಧಿ ಅವರ ಕುಟುಂಬ ಸದಾಕಾಲ ನಿಲ್ಲುತ್ತಿದ್ದ ಕ್ಷೇತ್ರವನ್ನು ಬಿಟ್ಟು ಕೇರಳದಲ್ಲಿ ಹೋಗಿ ಚುನಾವಣೆಗೆ ನಿಂತರು. ಆದರೀಗ ಕಾಂಗ್ರೆಸ್ ದೇಶದ ಎಲ್ಲಿಯೂ ಚುನಾವಣೆಗೆ ನಿಲ್ಲಲಾಗದ ಸ್ಥಿತಿ ತಲುಪಿದೆ,” ಎಂದು ಕಾಂಗ್ರೆಸ್‌ ಪಕ್ಷವನ್ನ ಲೇವಡಿ ಮಾಡಿದ್ದಾರೆ.

ಇಷ್ಟೇ ಅಲ್ಲದೆ ನಮ್ಮ ಪ್ರಧಾನಿ ಭವಿಷ್ಯದ ಭಾರತ ಹೇಗಿರಬೇಕು ಎಂದು ಯೋಚನೆ ಮಾಡುತ್ತಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ಇಲ್ಲದೆ ಸರ್ಕಾರ ನಡೆದಿದೆ. ಭ್ರಷ್ಟಾಚಾರ ರಹಿತವಾಗಿ ಸರ್ಕಾರ ನಡೆಸಬಹುದು ಎಂದು ನಮ್ಮ ಪ್ರಧಾನಿ ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರಂತ ದಿಟ್ಟ ನಾಯಕರಿಂದ ಮಾತ್ರ ಇದು ಸಾಧ್ಯ ಎನ್ನೋದು ಅರ್ಥವಾಗಿದೆ ಎಂದು ಪ್ರಧಾನಿ ಮೋದಿ ಅವರನ್ನ ಹಾಡಿ ಹೊಗಳಿದ್ದಾರೆ.

ವಿಪಕ್ಷಗಳು ಏನೇ ಬೊಬ್ಬೆ ಹೊಡೆಯಲಿ, ಮುಂದೆ ವಿಪಕ್ಷಗಳಿಗೆ ಸೆಡ್ಡು ಹೊಡೆಯೊ ರೀತಿಯಲ್ಲಿ ಪಕ್ಷ ಬೆಳೆಯಲಿದೆ. ಯಡಿಯೂರಪ್ಪರಿಗೆ ಯಾರೇ ಬೆನ್ನ ಹಿಂದೆ ಚೂರಿ ಹಾಕಿದರೂ ಸಹ ಅವರು ಎಂದೂ ಹಿಂದೆ ತಿರುಗಿ ನೋಡದೆ ಪಕ್ಷವನ್ನ ಬೆಳೆಸಿದ್ದರು. ಯಡಿಯೂರಪ್ಪ ಒಂದು ಸವಾಲು ಹಾಕಿದರೆ, ಗುರಿ ಇಟ್ಟರೆ ಅವರು ಸುಮ್ಮನೆ ಕೂರಲ್ಲ, ಇದು ವಿಪಕ್ಷಗಳಿಗೂ ಕೂಡ ಗೊತ್ತಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ| CM ಬಸವರಾಜ ಬೊಮ್ಮಾಯಿ ತಲೆ ಮೇಲೆ ಜೂನ್‌ 27ರ ತೂಗುಗತ್ತಿ !

Exit mobile version