ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಂಭವಿಸಿದ ಕೊಳವೆಬಾವಿ ದುರಂತದ (Borewell Tragedy) ರಕ್ಷಣಾ ಕಾರ್ಯಾಚರಣೆಯು ಕೊನೆಯ ಹಂತಕ್ಕೆ ಬಂದಿದೆ. ಎರಡು ವರ್ಷದ ಕಂದಮ್ಮ ಸಾತ್ವಿಕ್ ರಕ್ಷಣೆಗೆ ಕೈಗೊಂಡ ಕಾರ್ಯಾಚರಣೆಯು (Rescue Operation) ಇನ್ನೇನು ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಗಲಿದೆ. ಕೊಳವೆಬಾವಿಯಲ್ಲಿಯೇ ಉಸಿರಾಡುತ್ತಿರುವ ಸಾತ್ವಿಕ್ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ (SDRF) ಕಾರ್ಯಾಚರಣೆ ಮುಂದುವರಿದಿದ್ದು, ಇನ್ನು ಅರ್ಧ ಅಡಿಯಷ್ಟೇ ಕೊರೆಯುವುದು ಬಾಕಿ ಉಳಿದಿದೆ. ಸುಮಾರು 20 ಅಡಿ ಆಳದಲ್ಲಿ ಬುಧವಾರ (ಏಪ್ರಿಲ್ 3) ಸಂಜೆ 5.30ರ ಸುಮಾರಿಗೆ ಸಾತ್ವಿಕ್ ಕೊಳವೆಬಾವಿಗೆ ಬಿದ್ದಿದ್ದು, ಕೊಳವೆಬಾವಿ ಪಕ್ಕ 5 ಅಡಿಯ ಸುರಂಗ ಕೊರೆದು, ಜೆಸಿಬಿಯಿಂದ ಅಗೆಸಿ ರಾತ್ರಿಯಿಡೀ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಾಗಾಗಿ, ರಕ್ಷಣಾ ಕಾರ್ಯಾಚರಣೆಯು ಇನ್ನೇನು ಯಶಸ್ವಿಯಾಗಲಿದೆ.
ಪೂಜೆ ಪುನಸ್ಕಾರ
ಸಾತ್ವೀಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿದೆ. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದರು.
ನೋವು ಹಂಚಿಕೊಂಡ ಚಿಕ್ಕಪ್ಪ
ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಪ್ರಕರಣದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಬಾಲಕ ಸಾತ್ವಿಕ್ ಚಿಕ್ಕಪ್ಪ ನೋವು ಹಂಚಿಕೊಂಡಿದ್ದಾರೆ. “ಮನೆ ಬಳಿ ಆಟ ಆಡುತ್ತಿದ್ದ ಸಾತ್ವಿಕ್, ತಂದೆ ಸತೀಶ್ ಜಮೀನಿಗೆ ನೀರು ಬಿಡಲು ಬೊರವೆಲ್ ಆನ್ ಮಾಡಲು ಹೋದಾಗ ತಂದೆಯ ಹಿಂದಿನಿಂದಲೇ ಹೋಗಿದ್ದಾನೆ. ಸತೀಶ್ ಇದನ್ನು ಗಮನಿಸಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.
ತಾತ ಕೊರೆಸಿದ ಬಾವಿ
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಬುಧವಾರ (ಏಪ್ರಿಲ್ 3) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲೇ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿದ್ದಾರೆ. ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು ಎನ್ನಲಾಗಿದೆ. ಈಗ ಅವರ ಮೊಮ್ಮಗನೇ ಈ ಕೊಳವೆ ಬಾವಿಗೆ ಬದ್ದಿದ್ದಾನೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೊಳವೆಬಾವಿ ದುರಂತಗಳಿಗೆ ಕೊನೆಯೇ ಇಲ್ಲವೆ?
ಕೊಳವೆ ಬಾವಿಗೆ ಬಿದ್ದು 2000 ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ ಸಾವು, 2007 ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್ ಸಾವು, 2014 ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ ಸಾವು, 2017 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ