Site icon Vistara News

Sexual harrassment | ಮುಖ್ಯ ಶಿಕ್ಷಕರ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ಆರೋಪ: ಗ್ರಾಮಸ್ಥರ ಆಕ್ಷೇಪ, ದೂರು ಕೊಟ್ಟವರ ಪತ್ತೆಗೆ ಆಗ್ರಹ

Sexual harrassment sagara

ಸಾಗರ: ತಾಲೂಕಿನ ಆವಿನಹಳ್ಳಿ ಸಮೀಪದ, ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಲೈಂಗಿಕ ಕಿರುಕುಳದ (Sexual harrassment) ಸುಳ್ಳು ಆರೋಪ ಹೊರಿಸಿದ್ದರಿಂದ ಗ್ರಾಮಸ್ಥರು ಗರಂ ಆಗಿದ್ದಾರೆ.

ಮುಖ್ಯ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಯಾರೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿಸಿದ್ದರ ಬಗ್ಗೆ ತನಿಖೆ ನಡೆಸಲು ಬುಧವಾರ ಡಿಡಿಪಿಐ ಶಾಲೆಗೆ ಆಗಮಿಸಿದಾಗ ವಿದ್ಯಾರ್ಥಿಗಳ ಪೋಷಕರೆಲ್ಲ ಒಂದಾಗಿ ನಿಂತರು. ಡಿಡಿಪಿಐಗೆ ದಿಗ್ಬಂಧನ ಹಾಕಿರುವ ಕಾಗೆಹಳ್ಳದ ಜನರು, ದೂರುದಾರರನ್ನು ಸ್ಥಳಕ್ಕೆ ಕರೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಖ್ಯ ಶಿಕ್ಷಕ ರಫೀಕ್ ಅಹಮದ್ ಅವರು ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು. ಆದರೆ ಮುಖ್ಯ ಶಿಕ್ಷಕರು ಯಾವ ಮಕ್ಕಳಿಗೂ ಕಿರುಕುಳ ಕೊಟ್ಟಿಲ್ಲ. ಇಂತಹ ಸುದ್ದಿ ಹರಡಿಸುವ ಮಾಡುವ ಮೂಲಕ ನಮ್ಮ ಹಾಗೂ ನಮ್ಮ ಮಕ್ಕಳ ಮಾನಹಾನಿ ಮಾಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿ ಹರಡಿಸಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು ಎಂದು ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಆಗ್ರಹ ಮಾಡಿದರು.

ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ ಬುಧವಾರ ಮಧ್ಯಾಹ್ನ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ ಸಂದರ್ಭದಲ್ಲಿ ದೂರು ನೀಡಿದವರನ್ನು ಕರೆಯಿಸಬೇಕೆಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ದೂರುದಾರರು ಬರುವ ತನಕ ಡಿಡಿಪಿಐ ಅವರನ್ನು ಹೊರ ಕಳುಹಿಸುವುದಿಲ್ಲ ಎಂದು ಘೋಷಿಸಿದ ಪೋಷಕರು, ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರು, ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳದಲ್ಲೇ ಲಿಖಿತ ದೂರು ಕೊಟ್ಟ ಗ್ರಾಮಸ್ಥರು ಕ್ರಮಕ್ಕೆ ಆಗ್ರಹಿಸಿದಾಗ ಠಾಣೆಗೆ ಆಗಮಿಸಿ ದೂರು ನೀಡುವಂತೆ ಹೇಳಿದರು. ಇದರಿಂದ ಇನ್ನಷ್ಟು ಕೆರಳಿದ ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವವರೆಗೂ ಕದಲುವುದಿಲ್ಲ. ಇತ್ಯರ್ಥವಾಗುವವರೆಗೆ ಡಿಡಿಪಿಐ ಅವರನ್ನು ಬಿಡೋದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮಸ್ಥರು ಶಾಲಾವರಣದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ | Sexual Harrassment | ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅಮಾನತು

Exit mobile version