ಹುಬ್ಬಳ್ಳಿ: ಜೂನ್ ಪ್ರಾರಂಭದ ವೇಳೆಗೆ ಮಳೆ ಆಗಲಿಲ್ಲವೆಂದರೆ ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಕಡೆ ಮಳೆಗಾಗಿ ದೇವರಲ್ಲಿ ಮೊರೆ ಹೋಗಲಾಗುತ್ತದೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ವಿಶಿಷ್ಟ ಆಚರಣೆಯೊಂದನ್ನು ಮಾಡಿದ್ದು, ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ. ಈ ಮದುವೆಯ ವಿಡಿಯೊ, ಫೋಟೊಗಳು ವೈರಲ್ (Viral News) ಆಗಿವೆ.
ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಮಳೆ ಬಾರದಿರುವ ಸಂಕಟದ ಮಧ್ಯೆ ಮಳೆ ಬರಲಿ, ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮೈ ತೊಪ್ಪೆಯಾಗುವಷ್ಟು ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಇದನ್ನೂ ಓದಿ: Rain News: ಇನ್ನೆರಡು ದಿನ ಬಿರು ಮಳೆ; ನೆಲಕ್ಕುರಿಳಿದ ಮರಗಳು, ವಿದ್ಯುತ್ ಕಂಬಗಳು, ಕೊಚ್ಚಿ ಹೋದ ಸೇತುವೆ
ಮುಂಗಾರು ಆರಂಭಕ್ಕೆ ವಿಳಂಬವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ತಮ್ಮ ಪೂರ್ವಜರ ಆಚರಣೆಯಂತೆ ಕಪ್ಪೆಗಳಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ ಕಪ್ಪೆಗಳನ್ನು ಹಿಡಿದುಕೊಂಡು ಬರುವುದೂ ಒಂದು ಸಂಭ್ರಮವಾಗಿತ್ತು. ಹೀಗೆ ಮದುವೆ ಮಾಡಿಸಲು ಎರಡು ಕಪ್ಪೆಗಳು ಬೇಕಿದೆ. ವಧು- ವರ ಕಪ್ಪೆಗಳನ್ನು ಆರಿಸಬೇಕಿದೆ. ಒಂದಕ್ಕೊಂದು ಒಪ್ಪುವಂತಹ ಕಪ್ಪೆಗಳನ್ನು ಆರಿಸಬೇಕು. ಹೀಗಾಗಿ ಮೊದಲಿಗೆ ಕಪ್ಪೆಗಳನ್ನು ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಹೀಗೆ ಒಟ್ಟಾರೆಯಾಗಿ ಕಪ್ಪೆಗಳನ್ನು ಹಿಡಿದು ಅದರಲ್ಲಿ 2 ಕಪ್ಪೆಗಳನ್ನು ಅಂತಿಮಗೊಳಿಸಲಾಗುತ್ತದೆ.
ಶುರುವಾಗುತ್ತದೆ ಮದುವೆ ಸಂಭ್ರಮ
ಕಪ್ಪೆಗಳ ಮದುವೆ ಎಂದು ಸುಮ್ಮನೆ ಮಾಡಿಬಿಡುವುದಿಲ್ಲ. ಇದನ್ನೂ ಎಂದಿನಂತೆ ಮನುಷ್ಯರಿಗೆ ಮಾಡುವ ಮದುವೆ ರೀತಿಯಲ್ಲಿಯೇ ಮಾಡಲಾಗುತ್ತದೆ. ಇದಕ್ಕೂ ಹಲವು ಶಾಸ್ತ್ರಗಳಿವೆ. ಉಡಿ ತುಂಬಬೇಕು, ಅರಿಶಿಣ ಶಾಸ್ತ್ರ ಮಾಡಬೇಕು, ವಾದ್ಯ ಮೇಳಗಳು ಇರಬೇಕು. ಮೆರವಣಿಗೆ ಸಾಗಬೇಕು, ಹೀಗೆ ಹಲವಾರು ಸಂಪ್ರದಾಯಬದ್ಧ ಆಚರಣೆಯನ್ನು ಇಲ್ಲಿ ಮಾಡಲಾಗುತ್ತದೆ.
ಹೇಗೆ ಮಾಡಿದರು ಕಪ್ಪೆಗಳ ಮದುವೆ?
ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮೊದಲಿಗೆ ಮುತ್ತೈದೆಯರು ಉಡಿ ತುಂಬಿದರು. ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೆರೆದು ಸಂಪ್ರದಾಯವನ್ನು ನೆರವೇರಿಸಲಾಯಿತು. ಬಳಿಕ ಹಾಸಕ್ಕಿ ಹಾಕಿ, ಕಪ್ಪೆಗಳಿಗೆ ಗ್ರಾಮಸ್ಥರು ತಾಳಿ ಕಟ್ಟಿದರು. ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲೆಲ್ಲ ಕಪ್ಪೆ ಜೋಡಿಯ ಮೆರವಣಿಗೆಯನ್ನೂ ಮಾಡಲಾಯಿತು.
ಇದನ್ನೂ ಓದಿ: Housing Scheme: ʼಆಶ್ರಯʼಕ್ಕಾಗಿ ಇದ್ದ ಮನೆ ಕೆಡವಿದ; ಗ್ರಾಪಂ ಕಳ್ಳಾಟಕ್ಕೆ ಬಡವ ಕಂಗಾಲು, ಈಗ ಬಯಲೇ ಆಲಯ!
ಭರ್ಜರಿ ಔತಣಕೂಟ
ಗ್ರಾಮಸ್ಥರಿಗೆಲ್ಲ ಕಪ್ಪೆಗಳ ಮದುವೆಯ ಭರ್ಜರಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಎಲ್ಲರೂ ಸೇರಿ ಊಟ ಮಾಡಿ, “ಮಳೆರಾಯ ಬೇಗ ಬಾ” ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.