ಬಾಗಲಕೋಟೆ: ಮನುಷ್ಯ ಸತ್ತಾಗ ಗೌರವಯುತವಾಗಿ ಅಂತ್ಯ ಕ್ರಿಯೆ ಮಾಡಬೇಕು ಎನ್ನುವುದು ಲೋಕ ರೂಢಿಯ ಮಾತು. ಅದೆಷ್ಟೋ ಜನ ತಮ್ಮ ಅಂತ್ಯಕ್ರಿಯೆಗೆ ಅಂತ ಮೊದಲೇ ಹಣ ಜೋಡಿಸಿಡುವವರೂ ಇದ್ದಾರೆ. ಆದರೆ, ಕೆಲವರ ಪಾಲಿಗೆ ಅಂತ್ಯಕ್ರಿಯೆ ನಡೆಸಲು ಕನಿಷ್ಠ ಜಾಗವೂ ಇರುವುದಿಲ್ಲ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರಕಲಮಟ್ಟಿಯಲ್ಲಿ ಇಂಥಹುದೇ ಸಮಸ್ಯೆ ಎದುರಾಗಿದೆ. ಇಲ್ಲಿನ ಕಾಳಪ್ಪ ಕುಂಬಾರ ಎಂಬವರು ಮೃತಪಟ್ಟಿದ್ದಾರೆ. ಅವರಿಗೆ ಸ್ವಂತದ್ದು ಎನ್ನುವ ಜಾಗವಿಲ್ಲ. ಹೀಗಾಗಿ ಅವರ ಮೃತದೇಹವನ್ನು ಎಲ್ಲಾದರೂ ಸಾರ್ವಜನಿಕ ಸ್ಮಶಾನದಲ್ಲೇ ನಡೆಸಬೇಕು. ಆದರೆ, ಇಡೀ ಊರಿನಲ್ಲಿ ಸಾರ್ವಜನಿಕ ಸ್ಮಶಾನವೇ ಇಲ್ಲ.
ಇಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಈ ಹಿಂದಿನಿಂದಲೂ ಜನರಿಗೆ ಆಕ್ರೋಶವಿತ್ತು. ಕಾಳಪ್ಪ ಅವರ ಸಾವಿನ ಸಂದರ್ಭದಲ್ಲಿ ಇದು ಇನ್ನಷ್ಟು ಕೆರಳಿದೆ. ಅವರು ಇದನ್ನೇ ಸಂದರ್ಭ ಎಂದುಕೊಂಡು ಸ್ಥಳೀಯಾಡಳಿತಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಗ್ರಾಮದ ಜನರೆಲ್ಲ ಸೇರಿಕೊಂಡು ಶವವನ್ನು ನೇರವಾಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ತಂದಿದ್ದಾರೆ. ಬಿದಿರಿನ ಮೇಲೆ ಮಲಗಿಸಿದ ಸ್ಥಿತಿಯಲ್ಲಿ, ಬಿಳಿ ಬಟ್ಟೆ ಹಾಕಿ, ಇನ್ನೇನು ನೇರವಾಗಿ ಚಿತೆ ಏರಿಸುವ ಸ್ಥಿತಿಯಲ್ಲೇ ಮೃತದೇಹವನ್ನು ನೇರವಾಗಿ ಪಂಚಾಯಿತಿ ಕಚೇರಿ ಮುಂದೆ ತಂದಿದ್ದಾರೆ.
ಈ ನಡುವೆ, ಕೆಲವರು ಟ್ರ್ಯಾಕ್ಟರ್‌ನಲ್ಲಿ ಕಟ್ಟಿಗೆಯನ್ನೂ ತಂದಿದ್ದಾರೆ. ಅಷ್ಟು ಹೊತ್ತಿಗೆ ಕೆಲವರು ಚಿತೆ ನಿರ್ಮಾಣಕ್ಕೆ ಸಣ್ಣ ಗುಂಡಿ ತೋಡಲು ಆರಂಭಿಸಿದ್ದಾರೆ. ಯಾವ ಕಾರಣಕ್ಕೂ ಇವತ್ತು ಬೇರೆ ಕಡೆ ಶವ ತೆಗೆದುಕೊಂಡು ಹೋಗುವುದೇ ಇಲ್ಲ. ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಮೀನು ಇಲ್ಲದವರ ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಒದಗಿಸದ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಊರಿನ ಜನರ ಆಕ್ರೋಶಕ್ಕೆ ಪಂಚಾಯಿತಿ ಅಧಿಕಾರಿಗಳೇ ಬೆದರಿದ್ದಾರೆ. ಇಲ್ಲೇ ಸುಡುವುದು ಗ್ಯಾರಂಟಿ ಎಂದು ಹೇಳಿದ ಗ್ರಾಮಸ್ಥರನ್ನು ಕೊನೆಗೂ ಸಮಾಧಾನ ಮಾಡಲಾಗಿದೆ. ಹಾಲಿ ಶವದ ಸಂಸ್ಕಾರಕ್ಕೆ ಬೇರೆ ಜಾಗ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.
ಇದನ್ನೂ ಓದಿ | Elephant Attack | ಮಹಿಳೆ ಶವವಿಟ್ಟು ನಾಗರಿಕರ ಆಕ್ರೋಶ, ಸ್ಥಳದಲ್ಲಿ ಬಿಗುವಿನ ವಾತಾವರಣ