Site icon Vistara News

Vims Bellary | ಶವಪರೀಕ್ಷೆ ವರದಿ ಪರಿವೀಕ್ಷಣೆ, ಪ್ರತ್ಯೇಕ ವಿಚಾರಣೆ, ಸತತ 9 ತಾಸು ತನಿಖೆ; ಅಸಲಿ ಸತ್ಯವೇನು?

vims investigation 2

ಶಶಿಧರ ಮೇಟಿ, ಬಳ್ಳಾರಿ
ವಿಮ್ಸ್‌ ಐಸಿಯುವಿನಲ್ಲಿ (Vims Bellary) ವಿದ್ಯುತ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆನ್ನಲಾಗಿರುವ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ವರದಿಯನ್ನು ತನಿಖಾ ತಂಡವು ಪಡೆದುಕೊಂಡಿದೆ. ಈಗಾಗಲೇ ಪರ-ವಿರೋಧ ಆರೋಪಗಳು ಕೇಳಿಬಂದಿರುವುದರಿಂದ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದ್ದು, ಸಂಬಂಧಪಟ್ಟವರ ಪ್ರತ್ಯೇಕ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.

ಈವರೆಗೂ ಮೃತ ಕುಟುಂಬದ ಯಾರೊಬ್ಬರೂ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಇದೂ ಸೇರಿದಂತೆ ಇನ್ನಿತರ ಮಾಹಿತಿಯನ್ನು ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಯೊಂದು ರೋಗಿಯ ಮಾಹಿತಿ
ವಿಮ್ಸ್‌ನಲ್ಲಿ ವಿದ್ಯುತ್‌ ಸಮಸ್ಯೆಯಿಂದಲೇ ರೋಗಿಗಳು ಮೃತಪಟ್ಟಿದ್ದಾರೆಂಬ ಆರೋಪಕ್ಕೆ ಸಂಬಂಧಪಟ್ಟಂತೆ ದೀರ್ಘವಾಗಿ ತನಿಖಾ ತಂಡ ತನಿಖೆಗೆ ಮಾಡಿದೆ. ಅಂದು ಯಾವ ಸಮಯಕ್ಕೆ ವಿದ್ಯುತ್‌ ವ್ಯತ್ಯಯವಾಗಿದೆ. ಎಷ್ಟು ಸಮಯ ಬ್ಯಾಟರಿ ಬ್ಯಾಕಪ್ ಇತ್ತು? ಆಗ ಐಸಿಯುನಲ್ಲಿ ಎಷ್ಟು ಜನ ರೋಗಿಗಳು ಇದ್ದರು? ಅವರ ಆರೋಗ್ಯ ಸ್ಥಿತಿ ಏನಿತ್ತು? ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದವರು ಯಾರ್ಯಾರು ಎಂಬಿತ್ಯಾದಿ ಮಾಹಿತಿಯನ್ನು ತನಿಖಾ ತಂಡವು ಟ್ರಿಟ್ಮೆಂಟ್‌ ಕೇಸ್‌ಶೀಟ್‌ ಮೂಲಕ ಪರಿಶೀಲಿಸಿ, ಸಂಗ್ರಹಿಸಿದೆ. ಇನ್ನು ಅಲ್ಲಿದ್ದ ರೋಗಿಗಳನ್ನು ಎಷ್ಟೊತ್ತಿಗೆ ಟ್ರಾಮಾಕೇರ್ ಸೆಂಟರ್ ಸೇರಿದಂತೆ ಇತರ ವೆಂಟಿಲೇಟರ್ ವಾರ್ಡ್‌ಗೆ ಸ್ಥಳಾಂತರಿಸಿದೆ ಎಂಬ ಮಾಹಿತಿಯನ್ನು ಪರಿಶೀಲಿಸಿದೆ.

Vims Bellary | ವಿಮ್ಸ್ ದುರಂತ; ಸುಧಾಕರ್‌ ಮೇಲೆ ರೆಡ್ಡಿ ಕಿಡಿ, ಕಾಂಗ್ರೆಸ್‌ ಸಿಡಿಮಿಡಿ, ಡೈರೆಕ್ಟರ್‌ ದೂರು ಕೊಡಲು ರೆಡಿ

ಮರಣೋತ್ತರ ಪರೀಕ್ಷೆ ವರದಿ ಸಂಗ್ರಹ
ಬುಧವಾರ ವಿದ್ಯುತ್‌ ವ್ಯತ್ಯಯದಿಂದ ಐದು ಜನರು ಮೃತಪಟ್ಟಿದ್ದಾರೆಂಬ ಆರೋಪ ಇದೆ. ಆದರೆ, ಇದರಲ್ಲಿ ಚೇಳು ಕಳಿಸಿಕೊಂಡಿರುವ ಮನೋಜ್ ಕುಮಾರ್ ಮತ್ತು ಹಾವು ಕಡಿಸಿಕೊಂಡಿರುವ ಇನ್ನೊಬ್ಬರು ಮಾತ್ರ ಶವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ವರದಿಯನ್ನು ತನಿಖಾ ತಂಡವು ತರಿಸಿಕೊಂಡು ಪರಿಶೀಲನೆ ಮಾಡಿದೆ. ಮೃತರ ಫೋಷಕರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆಂದು ಹೇಳಲಾಗುತ್ತಿದೆ.

Vims Bellary

ಪ್ರತಿಯೊಬ್ಬರನ್ನು ಪತ್ಯೇಕ ವಿಚಾರಣೆ
ಐಸಿಯುನಲ್ಲಿ ಕರೆಂಟ್ ಸಮಸ್ಯೆಯಾದಾಗ ಕರ್ತವ್ಯ ನಿರ್ವಹಿಸಿದ ವೈದ್ಯರು, ಪಿಜಿಗಳು, ನರ್ಸ್ ಸೇರಿದಂತೆ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಕರೆದು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರು ಇರಲಿಲ್ಲ. ಘಟನೆಯ ವಾಸ್ತವತೆ ತಿಳಿಯುವ ಎಲ್ಲ ಪ್ರಯತ್ನವನ್ನು ತಂಡ ಮಾಡಿದೆ. ಶುಕ್ರವಾರ ಬೆಳಗ್ಗೆ 11.45ಕ್ಕೆ ಆಗಮಿಸಿ ತಂಡವು ರಾತ್ರಿ 9 ಗಂಟೆವೆರೆಗೆ ನಿರಂತರವಾದ ತನಿಖೆಯನ್ನು ಮಾಡಿದೆ. ಇಲ್ಲಿನ ಐಸಿಯುನಲ್ಲಿರುವ ರೋಗಿಗಳನ್ನು ಟ್ರಾಮಾಕೇರ್‌ ಸೆಂಟರ್, ನ್ಯೂ ಐಸಿಯು ವಾರ್ಡ್ ಶಿಫ್ಟ್‌ ಮಾಡಿರುವುದರಿಂದ ಅಲ್ಲಿಗೂ ಹೋಗಿ ತಂಡವು ಪರಿಶೀಲನೆ ನಡೆಸಿದೆ.

ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹ!
ವಿಮ್ಸ್‌ನಲ್ಲಿ ಮಾಹಿತಿ ಸಂಗ್ರಹಿಸುವ ಜತೆಗೆ ಜಿಲ್ಲಾಡಳಿತ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳನ್ನು ವೈದ್ಯರನ್ನು ಭೇಟಿ ಮಾಡಿ ವಾಸ್ತವ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪವನ್ ಕುಮಾರ್ ಅವರು ಗುರುವಾರ ವಿಮ್ಸ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ರೋಗಿಗಳಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದರು. ಕಳೆದ ಮೂರು ದಿನಗಳ ಅವಧಿಯಲ್ಲಿ ವಿಮ್ಸ್‌ನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ತಂಡವು ದಾಖಲಿಸಿಕೊಂಡಿದೆ.

ವಿಮ್ಸ್‌ನಲ್ಲಿ ಐಸಿಯುಗೆ ಸರಬರಾಜಾಗಿರುವ ಕೇಬಲ್ ಬ್ಲಾಸ್ಟ್‌ನಿಂದ, ಐಸಿಯುನಲ್ಲಿನ ರೋಗಿಗಳಿಗೆ ಸಮಸ್ಯೆಯಾಗಿದೆ ಎಂಬ ಸುದ್ದಿಯು ರಾಜ್ಯಾದ್ಯಂತ ಸದ್ದು ಮಾಡಿತ್ತು. ಶುಕ್ರವಾರ ಆಗಮಿಸಿದ ತನಿಖಾ ತಂಡವು ಈ ವಿಚಾರದ ಗ್ರೌಂಡ್ ರಿಪೋರ್ಟ್ ತೆಗೆದುಕೊಳ್ಳುವ ಎಲ್ಲ ಪ್ರಯತ್ನ ಮಾಡಿದೆ. ತನಿಖಾ ತಂಡದ ವರದಿಯ ಆಧಾರದ ಮೇಲೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ | Vims Bellary | ಸಚಿವ ಸುಧಾಕರ್‌ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ; ಸೋಮಶೇಖರ ರೆಡ್ಡಿ ವಾಗ್ದಾಳಿ

Exit mobile version