ಬಳ್ಳಾರಿ: ವಿಮ್ಸ್ ಐಸಿಯುವಿನಲ್ಲಿ (Vims Bellary) ಕೆಲವು ರೋಗಿಗಳು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದೆ. “ಅವಿವೇಕಿ ನಿರ್ದೇಶಕರಲ್ಲ, ಇದು ಅವಿವೇಕಿ ಸರ್ಕಾರ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಒಬ್ಬ ಅವಿವೇಕಿ, ಘಟನೆಯ ಹೊಣೆ ಹೊತ್ತುಕೊಂಡು ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಆಗ್ರಹಿಸಿದ್ದಾರೆ.
ಬಡವರ ಜೀವ ಕಾಪಾಡುವುದಕ್ಕೆ ಆಗಿಲ್ಲವೆಂದಾದರೆ ಶಾಸಕರಾಗಿ ಏಕಿರಬೇಕು? ಮಂತ್ರಿಗಳಾಗಿ ಏಕಿರಬೇಕು? ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಸಚಿವ ಸುಧಾಕರ್ ದೊಡ್ಡದಾಗಿ ಬಿಂಬಿಸಿಕೊಂಡು ಓಡಾಡುತ್ತಿದ್ದಾರೆ. ಇಲ್ಲಿ ಬಡ ಜನರು ಸಾಯಿಸುತ್ತಿದ್ದಾರೆ. ತಾಯಿಯನ್ನು ಕಳೆದುಕೊಂಡು ಮೂರು ವರ್ಷದ ಮಗು ಅಳುತ್ತಿದೆ. ದುಡ್ಡು ಹೊಡೆಯಲಿಕ್ಕೆ ಯಾರು ಯಾರನ್ನು ತಂದು ಅಧಿಕಾರದಲ್ಲಿ ಕೂರಿಸುತ್ತಿದ್ದಾರೆ? ಇದನ್ನು ನಾವು ಕೊಲೆಗಡುಕ ಸರ್ಕಾರ ಎಂದು ತೀರ್ಮಾನಿಸಿದ್ದೇವೆ ಎಂದು ನಾಗೇಂದ್ರ ಕಿಡಿಕಾರಿದರು.
ವಿಮ್ಸ್‌ನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಿದ್ದಾರೆ. ತಮ್ಮ ಸ್ವಾರ್ಥ, ಪ್ರತಿಷ್ಠೆಗೆ ವಿಮ್ಸ್‌ನಲ್ಲಿ ಅಧಿಕಾರಿಗಳನ್ನು ಬದಲು ಮಾಡುತ್ತಿದ್ದಾರೆ. ಈ ವಿಚಾರವಾಗಿ ಪ್ರಧಾನ ಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಪತ್ರ ಚಳವಳಿ ಮಾಡುತ್ತೇವೆ. ಮೃತ ಕುಟುಂಬಗಳಿಗೆ 25 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿತ್ತು. ಆದರೆ, ಕೇವಲ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಈ ಕಾರಣಕ್ಕೆ ಪರಿಹಾರ ಹೆಚ್ಚಿಗೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಭಾನುವಾರವೂ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ನಾಗೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಮುಖಂಡರಾದ ನಾರಾ ಭರತರೆಡ್ಡಿ, ಆಂಜಿನೇಯಲು, ರಾಮ್‌ಪ್ರಸಾದ್, ವೆಂಕರರಮಣ, ಅಸುಂಡಿ ವನ್ನೂರಪ್ಪ, ಬೆಣಕಲ್ ಬಸವರಾಜ್, ಸುನೀಲ್ ರಾವೂರ್, ಸೂರಿ, ಮಂಜುಳಾ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ | Vims Bellary | ಸಚಿವ ಸುಧಾಕರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ; ಸೋಮಶೇಖರ ರೆಡ್ಡಿ ವಾಗ್ದಾಳಿ