Site icon Vistara News

Vims Bellary | ವಿಮ್ಸ್‌ ಐಸಿಯು ಪವರ್‌ ಕಟ್‌; ತನಿಖೆ ಚುರುಕು, ಸರ್ಕಾರಕ್ಕೆ ಶೀಘ್ರ ವರದಿ?

bellary vims

ಬಳ್ಳಾರಿ: ವಿಮ್ಸ್‌ನಲ್ಲಿ ಐಸಿಯುವಿನಲ್ಲಿ (Vims Bellary) ಕೆಲವು ರೋಗಿಗಳು ಮೃತಪಟ್ಟಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಕೇಬಲ್ ಬ್ಲಾಸ್ಟ್‌ ಆಗಿ ಐಸಿಯುನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದೇ ಸಾವಿಗೆ ಕಾರಣ ಎಂಬ ಒಂದು ವಾದವಿದ್ದರೆ, ತೀವ್ರ ಅನಾರೋಗ್ಯವೇ ಕಾರಣ ಎಂಬ ಆಸ್ಪತ್ರೆ ಕಾರಣವೂ ಸದ್ದು ಮಾಡುತ್ತಿದೆ. ಈಗ ಡಾ.ಸ್ಮಿತಾ ನೇತೃತ್ವದ ತನಿಖಾ ತಂಡವು ನೀಡುವ ವರದಿಯಲ್ಲಿ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.

ಬುಧವಾರ ಬೆಳಗ್ಗೆ ವಿಮ್ಸ್‌ನಲ್ಲಿ ಐಸಿಯುಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್ ಬ್ಲಾಸ್ಟ್ ಆಗಿರುವ ಪರಿಣಾಮ ಐಸಿಯುನಲ್ಲಿ ದಾಖಲಾದ ಕೆಲ ರೋಗಿಗಳು ಮೃತ ಪಟ್ಟಿದ್ದಾರೆಂಬ ಆರೋಪವು ವಿಧಾನಸಭೆಯ ಎರಡು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಅಂದು ಬೆಳಗ್ಗೆ ಚಿಟ್ಟೆಮ್ಮ, ಮೌಲಾ ಹುಸೇನ್, ಚಂದ್ರಮ್ಮ ಎನ್ನುವವರು ಮೃತಪಟ್ಟಿದರು. ಮೃತರ ಕುಟುಂಬದ ಯಾರೊಬ್ಬರೂ ವಿದ್ಯುತ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆಂದು ಆರೋಪ ಮಾಡಿರಲಿಲ್ಲ. ದೂರನ್ನೂ ಕೊಟ್ಟಿರಲಿಲ್ಲ.

ವಿಡಿಯೊಗಳು ಸೃಷ್ಟಿಸಿರುವ ಅವಾಂತರ
ಇದೇ ವೇಳೆ ವಿಮ್ಸ್‌ ಐಸಿಯುನಲ್ಲಿ ವಿದ್ಯುತ್ ಸರಬರಾಜಿನ ವ್ಯತ್ಯಯದಿಂದಾಗಿ ಮೂವರು ಮೃತಪಟ್ಟಿದ್ದಾರೆಂದೂ, ಈ ಸಾವಿಗೆ ವಿದ್ಯುತ್ ವ್ಯತ್ಯಯವೇ ಕಾರಣ ಎಂದೂ ಹೇಳಿರುವುದರ ಜತೆಗೆ ಮೃತಪಟ್ಟವರ ಹೆಸರನ್ನೂ ಪ್ರಸ್ತಾಪ ಮಾಡಲಾಗಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ಸಂಪೂರ್ಣ ಗೊಂದಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ವಿಮ್ಸ್ ಸ್ವಷ್ಟನೆ ನೀಡಿ ಸಾವಿಗೆ ಕರೆಂಟ್ ಸಮಸ್ಯೆ ಕಾರಣವಲ್ಲ, ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕರೆಂಟ್ ಕಟ್ ಆಗಿರುವುದಕ್ಕೂ ಇದಕ್ಕೆ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿತ್ತು.

ತನಿಖಾ ತಂಡ ರಚನೆ
ಐಸಿಯುನಲ್ಲಿ ವಿದ್ಯುತ್ ಸಮಸ್ಯೆಯಾಗಿರುವುದು ಖಚಿತವೆಂದು ವಿಮ್ಸ್ ಹೇಳಿದ್ದರೂ, ಇದರಿಂದ ಯಾರೂ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ವಿಚಾರ ವಿಧಾನಸೌಧಲ್ಲಿ ಗದ್ದಲ್ಲಕ್ಕೆ ಕಾರಣವಾಗಿದ್ದರಿಂದ ಬೆಂಗಳೂರಿನ ಬಿಎಂಸಿಯ ಪ್ರಾಧ್ಯಾಪಕಿ ಡಾ.ಸ್ಜಿತಾ ಅಧ್ಯಕ್ಷತೆಯಲ್ಲಿ ಐದು ಜನರನ್ನೊಳಗೊಂಡ ತಂಡವನ್ನು ರಚನೆ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ | Bellary Accident | ಕಾಲುವೆಗೆ ರಿಕ್ಷಾ ಪಲ್ಟಿ ಪ್ರಕರಣ; ನಾಪತ್ತೆಯಾಗಿದ್ದ ಹುಲಿಗೆಮ್ಮ ಮೃತದೇಹ ಪತ್ತೆ

ತಡವಾಗಿ ತಲೆ ಎತ್ತಿದ ಎರಡು ಪ್ರಕರಣಗಳು
ನಮ್ಮ ಹುಡುಗನು ಕರೆಂಟ್ ಸಮಸ್ಯೆಯಿಂದಲೇ ಮೃತಪಟ್ಟಿದ್ದಾನೆಂದು ಬುಧವಾರ ರಾತ್ರಿ ವಿಮ್ಸ್‌ನಲ್ಲಿ ಮೃತಪಟ್ಟಿರುವ 17 ವರ್ಷದ ಮನೋಜ್ ಕುಮಾರ್ ಪೋಷಕರು ಆರೋಪಿಸಿದರು. ಚೇಳು ಕಡಿಸಿಕೊಂಡಿದ್ದ ಮನೋಜ್‌ನನ್ನು ಸೆ.6ರಂದು ವಿಮ್ಸ್‌ಗೆ ದಾಖಲಿಸಲಾಗಿತ್ತು. ನಂತರದಲ್ಲಿ ಈರಮ್ಮ ಎನ್ನುವ ಮಹಿಳೆಯು ಬುಧವಾರ ಬೆಳಗ್ಗೆ ಕರೆಂಟ್ ಸಮಸ್ಯೆಯಿಂದ ಡೆಂಗ್ಯೂನಿಂದ ನಮ್ಮ ಮಗ 8 ವರ್ಷದ ನಿಖಿಲ್ ಮೃತಪಟ್ಟಿದ್ದಾನೆಂದು ಗುರುವಾರ ರಾತ್ರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

ತನಿಖಾ ತಂಡದಿಂದ ತನಿಖೆ
ಶುಕ್ರವಾರ ಬೆಳಗ್ಗೆ ವಿಮ್ಸ್‌ನಲ್ಲಿ ಕೇಬಲ್ ಬ್ಲಾಸ್ಟ್ ಆಗಿರುವ ಕಡೆಗಳಲ್ಲಿ ಹೊಸ ಕೇಬಲ್ ಅಳವಡಿಸುವ ಕಾರ್ಯವು ವಿಮ್ಸ್‌ನಲ್ಲಿ ನಡೆದಿತ್ತು. ಡಾ.ಸ್ಮಿತಾ ನೇತೃತ್ವದ ತಂಡವು ಶುಕ್ರವಾರ ಬೆಳಗ್ಗೆ 11.45ಕ್ಕೆ ಆಗಮಿಸಿ ವಿಮ್ಸ್ ನಿರ್ದೇಶಕರ ಚೇಂಬರ್‌ನಲ್ಲಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ನಂತರದಲ್ಲಿ ಬ್ಲಾಸ್ಟ್ ಆಗಿರುವ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸುಮಾರು ಒಂದೂವರೆ ತಾಸು ಐಸಿಯು ಮತ್ತು ಹೃದಯ ರೋಗದ ತುರ್ತು ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಕೇಬಲ್‌ಗಳು ಹೊರ ಬಂದಿರುವ ಕಡೆಗಳಲ್ಲಿ ಫೋಟೊಗಳನ್ನು ತಂಡ ತೆಗೆದುಕೊಂಡಿದೆ. ಇನ್ನು ಮೃತಪಟ್ಟವರ ವೈದ್ಯಕೀಯ ದಾಖಲಾತಿಗಳನ್ನು ಸಹ ತಂಡವು ಪರಿಶೀಲನೆ ನಡೆಸಿದೆ. ಮೃತರ ಪೋಷಕರಿಂದಲೂ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ- ಡಾ. ಸ್ಮಿತಾ
ತನಿಖಾ ತಂಡದ ಮುಖ್ಯಸ್ಥೆ ಡಾ.ಸ್ಮಿತಾ ಮಾತನಾಡಿ, ತನಿಖೆಗೆ ಆಗಮಿಸಿದ್ದು, ತನಿಖೆ ನಡೆಯುತ್ತಿದೆ. ಪರಿಶೀಲನೆ ನಂತರದಲ್ಲಿ ವರದಿಯನ್ನು ಸಿದ್ಧಪಡಿಸಿ ಆದಷ್ಟು ಬೇಗನೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ‌

ಬೆಂಗಳೂರಿನ ಬಿಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಾ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸಿದ್ದಿಕಿ ಅಹಮದ್, ಬಿಎಂಸಿಯ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಯೋಗೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉಮಾ ಕೆ.ಎ. ಅವರನ್ನೊಳಗೊಂಡ ತಂಡವು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ | Vims Bellary | ರೋಗಿಗಳ ಸಾವು ಪ್ರಕರಣ; ವಿಮ್ಸ್‌ಗೆ ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ಆಗಮನ

Exit mobile version