ಧಾರವಾಡ: ನಾಮಪತ್ರ ತಿರಸ್ಕಾರಗೊಳ್ಳುವ ಭೀತಿಯಲ್ಲಿ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರೂ ನಾಮಪತ್ರ ಸಲ್ಲಿಸಿದಂತೆ, ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ (Vinay Kulkarni) ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರೂ ಕೊನೇ ಕ್ಷಣದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ವಿನಯ್ ಕುಲಕರ್ಣಿ ಕೂಡ ಡಿಕೆಶಿ ನಡೆಯನ್ನೇ ಅನುಸರಿಸಿದಂತಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇತ್ತ, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗಾಗಿ, ಚುನಾವಣೆಯಲ್ಲಿ ನಾಮಪತ್ರ ತಿರಸ್ಕಾರಗೊಂಡರೆ ಎಂಬ ಭೀತಿಯಿಂದಾಗಿ ವಿನಯ್ ಕುಲಕರ್ಣಿ ಅವರು ಪತ್ನಿಯೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಯಕರ್ತರಿಗೆ ಭಾವುಕ ಸಂದೇಶ
ಧಾರವಾಡಕ್ಕೆ ತೆರಳಲು ವಿನಯ್ ಕುಲಕರ್ಣಿ ಅವರಿಗೆ ಕೋರ್ಟ್ ಅನುಮತಿ ನೀಡದ ಕಾರಣ ಅವರ ಪರವಾಗಿ ಪತ್ನಿ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಪಾರ ಕಾರ್ಯಕರ್ತರು ಬೆಂಬಲ ನೀಡಿದ ಕಾರಣ ವಿನಯ್ ಕುಲಕರ್ಣಿ ಅವರು ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ವಿಡಿಯೊ ಸಂದೇಶ ರವಾನಿಸಿದ್ದಾರೆ. ಬೆಂಗಳೂರಿನಲ್ಲಿರುವ ವಿನಯ್ ಕುಲಕರ್ಣಿ ಅವರು ವಿಡಿಯೊ ಮೂಲಕ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ
“ಸಂಕಷ್ಟದ ಕಾಲದಲ್ಲಿ ಕ್ಷೇತ್ರದ ಜನ, ಕಾರ್ಯಕರ್ತರು ನನ್ನೊಂದಿಗೆ ನಿಂತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನೀವು ನೀಡಿದ ಬೆಂಬಲ ಕಂಡು ಸಂತೋಷವಾಗಿದೆ. ನಾನು ನಿಮ್ಮ ಪ್ರೀತಿ-ಅಭಿಮಾನವನ್ನು ಎಂದಿಗೂ ಮರೆಯುವುದಿಲ್ಲ. ಬಿಸಿಲನ್ನೂ ಲೆಕ್ಕಿಸದೆ ನೀವು ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡಿದ್ದೀರಿ. ನನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ನಾಮಪತ್ರ ಸಲ್ಲಿಸಿ, ಅವರಿಗೆ ಶಕ್ತಿ ನೀಡಿದ್ದೀರಿ. ಇಷ್ಟೆಲ್ಲ ಮಾಡಿದ ನಿಮಗೆ ನನ್ನ ಜೀವನವನ್ನೇ ಮುಡಿಪಾಗಿಟ್ಟಿರುತ್ತೇನೆ” ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 50 ದಿನ ಧಾರವಾಡಕ್ಕೆ ತೆರಳಲು ಅನುಮತಿ ಕೋರಿ ವಿನಯ್ ಕುಲಕರ್ಣಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ, ಅವರ ಪರವಾಗಿ ಪತ್ನಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: Inside Story: ಸಿಎಂ ಬೊಮ್ಮಾಯಿ ಚೆಕ್‌ಮೇಟ್‌ಗೆ ವಿನಯ್ ಕುಲಕರ್ಣಿ ಗಲಿಬಿಲಿ: ಬಿಸಿ ತುಪ್ಪವಾಯಿತು ಶಿಗ್ಗಾಂವಿ ಟಿಕೆಟ್