ವಿಜಯನಗರ: ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರುವ ಸಿಗುವ ಕಾಲುವೆ ಬಳಿ ಇಂದು ಜನಸಾಗರವೇ ಸೇರಿತ್ತು. ಎಲ್ಲರ ಮುಖದಲ್ಲೂ ಆತಂಕ, ಗಾಬರಿ ಇತ್ತು. ಕಣ್ಣೇದುರಿಗೆ ಮೂಕಜೀವಿಗಳು ರೋಧಿಸುತ್ತಿದ್ದವು. ಪ್ರಾಣವನ್ನು ಪಟಕ್ಕಿಟ್ಟ ಕೆಲ ಯುವಕರು ಒಬ್ಬರ ಹಿಂದೆ ಒಬ್ಬರು ಬಟ್ಟೆ ಕಳಚಿ ಕಾಲುವೆಯ ನೀರಿಗೆ ಜಿಗಿಯುತ್ತಿದ್ದರು. ಕಾಲುವೆಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳನ್ನು (Saved Buffaloes) ಒಂದೆಡೆ ಎಳೆದು ತರುತ್ತಿದ್ದರು. ಇದೆನ್ನೆಲ್ಲ ಸುತ್ತಮುತ್ತ ನಿಂತಿದ್ದವರು ಮೊಬೈಲ್‌ನಲ್ಲಿ ವಿಡಿಯೊ (Viral News) ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.
ಇತ್ತ ಜನರ ಕೂಗಾಟ, ದಟ್ಟಣೆಗೆ ಬೆಚ್ಚಿ ಬಿದ್ದ ಎಮ್ಮೆಗಳು ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿದ್ದವು. ಅಷ್ಟರಲ್ಲಿ ಸ್ಥಳೀಯರು ಕಾಲುವೆಗೆ ಎಮ್ಮೆಗಳು ಬಿದ್ದ ವಿಷಯವನ್ನು ಅಗ್ನಿಶಾಮಕ ದಳ ಸಿಬ್ಬಂದಿಗೆ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ ಎಮ್ಮೆಗಳನ್ನು ರಕ್ಷಣೆ ಮಾಡಿದ ಘಟನೆ ಶನಿವಾರ ನಡೆದಿದೆ.
5 ಎಮ್ಮೆಗಳು ಒಟ್ಟಿಗೆ ಮೇಯುತ್ತಾ ಕಾಲುವೆ ಬಳಿ ಬಂದಿದ್ದವು. ನೀರು ಕುಡಿಯಲು ಕಾಲುವೆ ಇಳಿದಿದ್ದವು. ಆದರೆ ನೀರಿನ ಹರಿವು ಹೆಚ್ಚಾಗಿ ಇದ್ದ ಕಾರಣಕ್ಕೆ ಎಮ್ಮೆಗಳು ಕೊಚ್ಚಿ ಹೋಗುತ್ತಿದ್ದವು. ಇದನ್ನೂ ಕಂಡ ಸ್ಥಳೀಯರು ಕೂಡಲೇ ಎಮ್ಮೆಗಳ ರಕ್ಷಣೆಗೆ ಮುಂದಾದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ದಾರಗಳನ್ನು ಹಾಕಿ ಎಮ್ಮೆಗಳು ಮೇಲೆತ್ತುವ ಕೆಲಸ ಮಾಡಿದರು.
ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಇಲ್ಲಿದೆ ನೋಡಿ
ಕಳ್ಳನಿಂದ ತಪ್ಪಿಸಿಕೊಂಡು ಮರಳಿ ಮಾಲೀಕನ ಮನೆ ಸೇರಿದ `ಜಾಣ ಎತ್ತುಗಳು’
ಯಾದಗಿರಿ: ಆ ರೈತನಿಗೆ ತಾನು ಸಾಕಿದ ಎತ್ತುಗಳೆಂದರೆ ಅಚ್ಚು ಮೆಚ್ಚು. ಕೃಷಿಗೆ ಬೆನ್ನೆಲುಬಾಗಿದ್ದ ಎತ್ತುಗಳು ಕಾಣದೆ ಇದ್ದಾಗ ಆ ರೈತನಿಗೆ ಬರ ಸಿಡಿಲು ಬಡಿದಂಗೆ ಆಗಿತ್ತು. ಎತ್ತುಗಳು ಕಳುವು (Theft Case) ಆಗಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕುಸಿದು ಬಿದ್ದಿದ್ದ. ಪ್ರೀತಿಗೆ ಪಾತ್ರವಾದ ಎತ್ತುಗಳ ಇರಲಾರದೆ ಬದುಕಿಲ್ಲವೆಂದು ಕಣ್ಣೀರು ಹಾಕುವ ದೃಶ್ಯ ಎಂತಹವರಿಗೂ ಕರುಳು ಚುರುಕ್ ಎನ್ನುವಂತಿತ್ತು. ಆದರೆ ಆ ಜಾಣ ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಮರಳಿ ಮಾಲೀಕನ ಮನೆ ಸೇರಿದ ಅಪರೂಪದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ರೈತ ತಿರುಪತಿ ಎಂಬಾತ 10 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದರು. ಜತೆಗೆ ಎರಡು ಎತ್ತುಗಳು ಆತನ ಬದುಕಿಗೆ ಆಶ್ರಯವಾಗಿತ್ತು. ತಡರಾತ್ರಿ ತಿರುಪತಿ ಅವರ ಎರಡು ಎತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದರು.
ತಿರುಪತಿ ಇಂದು ನಸುಕಿನ ಜಾವ ಎತ್ತುಗಳಿಗೆ ಮೇವು, ನೀರು ಹಾಕಲು ತೆರಳಿದ್ದರು. ಆದರೆ ಎಲ್ಲಿ ಹುಡುಕಾಡಿದರೂ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಕಾಣಲಿಲ್ಲ. ಎತ್ತುಗಳು ಕಳ್ಳತನವಾಗಿರುವುದು ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿದ್ದರು. ಎತ್ತುಗಳಿಗೆ ರೋಧಿಸುತ್ತಾ, ಅಳುತ್ತಾ ಊಟ ನೀರು ಬಿಟ್ಟು ಕುಳಿತಿದ್ದರು.
ಇತ್ತ ಎತ್ತುಗಳು ಕಳೆದು ಹೋದ ಸುದ್ದಿ ತಿಳಿದು ಗ್ರಾಮಸ್ಥರು ತಿರುಪತಿಯನ್ನು ಸಮಾಧಾನ ಮಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
10 ಕಿ.ಮೀ ದೂರದಿಂದ ಓಡೋಡಿ ಬಂದ ಎತ್ತುಗಳು
ಕಳ್ಳರಿಂದ ತಪ್ಪಿಸಿಕೊಂಡ ಎತ್ತುಗಳು ಸುಮಾರು 10 ಕಿಮೀ ದೂರದಿಂದ ಓಡಿ ಬಂದಿವೆ. ಮಾಲೀಕ ತಿರುಪತಿಯನ್ನು ಹುಡುಕುತ್ತಾ ಎತ್ತುಗಳು ಬಂದಿವೆ. ಗ್ರಾಮಕ್ಕೆ ಎತ್ತುಗಳು ಬಂದಿರುವ ವಿಷಯ ತಿಳಿಯುತ್ತಿದ್ದಂತೆ ತಿರುಪತಿ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ.
ವಾಪಸ್ ಬಂದ ಎತ್ತುಗಳನ್ನು ಕಂಡೊಡನೆ ತಿರುಪತಿ ಅವುಗಳ ಮೈ ಸವರಿ, ತಬ್ಬಿಕೊಂಡು ಮುತ್ತಿಟ್ಟು ಪ್ರೀತಿ ತೋರಿದ್ದಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳು ಕಳ್ಳತನ ಘಟನೆ ನಡೆಯುತ್ತಿದ್ದು ಪೊಲೀಸರು ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಲೀಕನ ಕಣ್ಣೀರು ಒರೆಸಿದ ಶ್ವಾನ
ತಿರುಪತಿಗೆ ಮೂಕ ಪ್ರಾಣಿಗಳೆಂದರೆ ಅದೇನೊ ವಿಶೇಷ ಪ್ರೀತಿ. ಜಾನುವಾರುಗಳ ಜತೆ ಶ್ವಾನ ಕೂಡ ಸಾಕಿದ್ದಾರೆ. ಎತ್ತುಗಳು, ಶ್ವಾನ ತಿರುಪತಿಯ ನೆಚ್ಚಿನ ಗೆಳೆಯರು. ಎತ್ತುಗಳು ಕಳೆದು ಹೋದವು ಎಂದು ತಿರುಪತಿ ಕಣ್ಣೀರು ಹಾಕುತ್ತಿದ್ದಾಗ ಶ್ವಾನ ಆತನಿಗೆ ಸಮಾಧಾನಪಡಿಸಿದೆ. ಶ್ವಾನವು ತಿರುಪತಿಯ ಕೈ ಹಿಡಿಯುವುದು, ಕಣ್ಣೀರು ಒರೆಸಿದ ದೃಶ್ಯವು ಕಂಡು ಬಂತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ