ಉಡುಪಿ: ಇಲ್ಲಿನ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರ ವರ್ತನೆಗೆ ಪಂಚಾಯತ್ ಸದಸ್ಯರು ಕಿಡಿಕಾರಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂದು ಶಿಕ್ಷಕರು ಪತ್ರವೊಂದನ್ನು ಬರೆದಿದ್ದರು. ಹೀಗಾಗಿ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಶಾಲೆಗೆ ನೀರಿನ ಟ್ಯಾಂಕರ್ ಅನ್ನು ಕಳಿಸಿದ್ದರು. ಆದರೆ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನಿಗೆ ಅವಾಜ್ ಹಾಕಿ ನೀರು ಕೊಡಬೇಡ ಬಾ ಎಂದು ವಾಪಸ್ ಕರೆಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆಡಿಯೊವೊಂದು ಬಹಿರಂಗಗೊಂಡಿದ್ದು, ವೈರಲ್ (Viral news) ಆಗಿದೆ.
ಟ್ಯಾಂಕರ್ ಚಾಲಕನ ತರಾಟೆ ತೆಗೆದುಕೊಂಡ ಪಂಚಾಯತ್ ಸದಸ್ಯ
ಶಾಲೆಗೆ ನೀರು ತಲುಪಿಸದ ಹಿನ್ನೆಲೆಯಲ್ಲಿ ಚಾಲಕನಿಗೆ ಫೋನ್ ಮೂಲಕ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಗೆ ಯಾಕೆ ನೀರು ಪೂರೈಸಿಲ್ಲ ಎಂದು ಪಂಚಾಯತ್ ಸದಸ್ಯ ಕೇಳಿದಾಗ, ಅಧ್ಯಕ್ಷರು ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದಿದ್ದಾರೆ. ಹೀಗಿರುವಾಗ ನಾನೇನು ಮಾಡಲಿ ಸರ್ ಎಂದು ಅಸಹಾಯಕತೆ ತೋರಿದ್ದಾನೆ. ಚಾಲಕ ಹಾಗೂ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪಂಚಾಯತ್ ಸದಸ್ಯ
ವಂಡ್ಸೆ ವ್ಯಾಪ್ತಿಗೆ ಬರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಶಾಲೆಯ ಶಿಕ್ಷಕರು ಶಾಲೆಗೆ ನೀರು ಬೇಕೆಂದು ಗ್ರಾಮ ಪಂಚಾಯತ್‌ಗೆ ಪತ್ರವೊಂದನ್ನು ಬರೆದಿದ್ದರು.
ಶಿಕ್ಷಕರ ಲಿಖಿತ ಪತ್ರಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಪಂಚಾಯತ್ ವತಿಯಿಂದ ಕಳೆದ ಜೂ 7ರಂದು ಮಧ್ಯಾಹ್ನ 12:30ರ ಸುಮಾರಿಗೆ ಶಾಲೆಗೆ ನೀರಿನ ಟ್ಯಾಂಕರ್ ಕಳುಹಿಸಿದ್ದರು. ಆದರೆ, ಪಂಚಾಯತ್ ಅಧ್ಯಕ್ಷ ಟ್ಯಾಂಕರ್ ಚಾಲಕನಿಗೆ ಫೋನ್ ಮಾಡಿ ʻನೀರು ಕೊಡಬೇಡ ವಾಪಸ್ ಬಾʼ ಎಂದು ತಿಳಿಸಿದ್ದರಂತೆ.
ಹೀಗಾಗಿ ಚಾಲಕ ಶಾಲಾ ಆವರಣದಲ್ಲೇ 2,750 ಲೀಟರ್ ಬ್ಯಾರಲ್ ಇರಿಸಿ ವಾಪಸ್ ಆಗಿದ್ದಾನೆ. ಬಳಿಕ ಜೂನ್ 8ರ ಬೆಳಗ್ಗೆ ಪುನಃ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನನ್ನು ಕರೆಸಿ, ಶಾಲೆಗೆ ನೀರು ಕೊಡುವುದು ಬೇಡ, ನೀರು ಕೊಟ್ಟಲ್ಲಿ ನೀರಿನ ಬಿಲ್ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
ಹೀಗಾಗಿ ಪಂಚಾಯತ್ ಅಧ್ಯಕ್ಷರ ಬೇಜವಾಬ್ದಾರಿಗೆ ಬೇಸತ್ತಿರುವ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡದಂತೆ ಪಿಡಿಒ ಮತ್ತು ನೀರಿನ ಚಾಲಕನಿಗೆ ಧ್ಕಮಿ ಹಾಕಿದ್ದಾರೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜತೆಗೆ ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ