Site icon Vistara News

Viral News: ಚಿಕನ್ ತಿನ್ನಲ್ಲ, ಮಟನ್ ಮುಟ್ಟಲ್ಲ,‌ ರೊಟ್ಟಿಯಂತೂ ತಟ್ಟಂಗಿಲ್ಲ; ಮಳೆಗಾಗಿ ಊರೇ ಬಂದ್‌!

Rain News

ಬೆಳಗಾವಿ: ಮಳೆಯಿಲ್ಲದೆ (Southwest monsoon) ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಕಡೆ ಮಳೆಗಾಗಿ (Rain News) ಜನರು ದೇವರ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಬೆಳಗಾವಿ ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆಯೊಂದನ್ನು ಮಾಡಿದ್ದು ವಿಡಿಯೊ, ಫೋಟೊಗಳು ವೈರಲ್‌ (Viral News) ಆಗಿವೆ.

ಅಂಗಡಿ ಮುಂಗಟ್ಟು ಬಂದ್‌ ಮಾಡಿದ ಮೂಡಲಗಿ ಗ್ರಾಮಸ್ಥರು

ಬೆಳಗಾವಿಯ ಮೂಡಲಗಿ, ಹಳ್ಳೂರು ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಮಳೆಗಾಗಿ ಜನರು ಊರಿಗೂರಿಗೆ ದಿಗ್ಬಂಧನ ಹಾಕಿದ್ದಾರೆ. ಮಾತ್ರವಲ್ಲ ಗ್ರಾಮಸ್ಥರು ಚಿಕನ್ ತಿನ್ನುವಂತಿಲ್ಲ, ಮಟನ್ ಮುಟ್ಟುವಂತಿಲ್ಲ, ‌ಮನೆಯಲ್ಲಿ ರೊಟ್ಟಿ ತಟ್ಟಂಗಿಲ್ಲ, ಒಗ್ಗರಣೆಯಂತೂ ಹಾಕುವಂತಿಲ್ಲ.

ಬಹಳ ಹಿಂದಿನಿಂದಲೂ ಸಹ ಬೆಳಗಾವಿ ಜಿಲ್ಲೆಯಲ್ಲಿ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಸಂಪ್ರದಾಯಕ್ಕೆ ವಾರ ಬಿಡುವುದು ಎಂದು ಹೆಸರಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕೆಲಸಕ್ಕೂ ಸಹ ಹೋಗದೆ ಮನೆಯಲ್ಲಿಯೇ ಜನರು ಉಳಿಯುತ್ತಾರೆ. ಐದು ಶುಕ್ರವಾರ, ಒಂದು ಮಂಗಳವಾರ ವಾರದಂದು ಈ ಆಚರಣೆ ಮಾಡಲಾಗುತ್ತದೆ.

ಈ ರೀತಿಯಲ್ಲಿ ಒಂದು ತಿಂಗಳ ಆಚರಣೆಯನ್ನು ‌ಮಾಡಿ ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತಾರೆ.

ಸೂರ್ಯ ನಾರಾಯಣನಿಗೆ ಕೃತಕ ಜಲದಿಗ್ಬಂಧನ

ಬೆಳಗಾವಿಯ ‌ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದಲ್ಲೂ ಇನ್ನೊಂದು ರೀತಿಯ ವಿಚಿತ್ರ ಸಂಪ್ರದಾಯವಿದೆ. ವರುಣ ಕೈಕೊಟ್ಟಿದ್ದಕ್ಕೆ ಗ್ರಾಮಸ್ಥರು ಸೂರ್ಯ ನಾರಾಯಣನಿಗೆ ಕೃತಕ ಜಲದಿಗ್ಬಂಧನ ಹಾಕಿದ್ದಾರೆ. ಮೊದಲಿಗೆ ಗ್ರಾಮದ ಜನರು ಶುದ್ಧಿಯಾಗಿ ಸ್ವಚ್ಛವಾದ ಕೊಡದಿಂದ ಮಲಪ್ರಭಾ ನದಿಯಿಂದ ನೀರು ತರುತ್ತಾರೆ.

ಮಲಪ್ರಭಾ ನದಿಯಿಂದ ನೀರು ಹೊತ್ತು ತರುತ್ತಿರುವ ಗ್ರಾಮಸ್ಥರು

ದೇಗುಲದ ಗರ್ಭಗುಡಿಯಲ್ಲಿರುವ ಸೂರ್ಯನಾರಾಯಣನಿಗೆ ಜಲದಿಗ್ಬಂಧನ ಹಾಕಿ ಬಾಗಿಲು ಮುಚ್ಚುತ್ತಾರೆ. ಮಳೆಯಾಗುವವರೆಗೆ ದೇಗುಲದ ಬಾಗಿಲು ತೆರೆಯುವುದಿಲ್ಲ ಎಂದು ಸಂಕಲ್ಪ ತೊಡುತ್ತಾರೆ. ಮಳೆ ಬಾರದೆ ಇದ್ದಾಗ ಪೂರ್ವಜರು ಇದೇ ರೀತಿ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

ಕಳೆದ 2019ರಲ್ಲೂ ಸ್ಥಳೀಯರು ಸೂರ್ಯನಾರಾಯಣನಿಗೆ ಜಲದಿಗ್ಬಂಧನ ಹಾಕಿದ್ದರು. ಜಲದಿಗ್ಬಂಧನ ಹಾಕಿದ ನಾಲ್ಕೇ ದಿನಕ್ಕೆ ಆಶ್ಚರ್ಯಕರ ರೀತಿಯಲ್ಲಿ ಮಳೆಯಾಗಿತ್ತು. ಇದೀಗ ಮತ್ತೆ ಮಳೆಗಾಗಿ ಜಲದಿಗ್ಬಂಧನ ಹಾಕಲಾಗಿದೆ.

ಇದನ್ನೂ ಓದಿ: Assault Case: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್‌ ಮೇಲೆ ಮಚ್ಚು ಬೀಸಿದ ಪುಂಡರು

ಮಳೆಗಾಗಿ ಗುರ್ಜಿ ಪೂಜೆ ವೃದ್ಧೆ

ಮಳೆಗಾಗಿ ಗುರ್ಜಿ ಪೂಜೆ ಮಾಡಿದ ವೃದ್ಧೆ

ಧಾರವಾಡದಲ್ಲೂ ಮುಂಗಾರು ಮಳೆ‌ ವಿಳಂಬ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಮಳೆಗಾಗಿ ಗುರ್ಜಿ ಪೂಜೆ ಮಾಡಿದ್ದಾರೆ. ಮನಸೂರ ಗ್ರಾಮದ ವೃದ್ಧೆ ರುದ್ರಮ್ಮ ಎಂಬುವವರು ಗುರ್ಜಿಪೂಜೆ ಮಾಡಿ, ಹಾಡು ಹೇಳಿ ಮಳೆ ಬರಲೆಂದು ಪ್ರಾರ್ಥಿಸಿದ್ದಾರೆ. ಬಡವರ ಮಕ್ಕಳಿಗೆ ಅನ್ನ ಹಾಕಪ್ಪಾ ಎಂದು ಮಳೆರಾಯನನ್ನು ಬೇಡಿಕೊಂಡಿದ್ದಾರೆ. ಇನ್ನು ಮೂರು ದಿನದಲ್ಲಿ ಮಳೆ ಬರಲಿದೆ ಎಂದು ವೃದ್ಧೆ ಹೇಳಿದ್ದು, ಇದಕ್ಕೆ ಪೂರಕ ಎಂಬಂತೆ ಹವಾಮಾನ ಇಲಾಖೆಯು ಧಾರವಾಡಕ್ಕೆ ಮಳೆ ಅಲರ್ಟ್‌ ನೀಡಿದೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version