ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕೆಲಸ ಬೇಕಾದರೂ ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು. ಆದರೆ, ಬಾಡಿಗೆ ಮನೆಯ ಮಾಲೀಕರ ಷರತ್ತುಗಳನ್ನು ಪೂರೈಸಿ ಮನೆ ಗಿಟ್ಟಿಸಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿಬಿಟ್ಟಿದೆ. ತಮಗೆ ಬೇಕಾದ ರೀತಿಯ ಬಾಡಿಗೆ ಮನೆ, ಅಪಾರ್ಟ್‌ಮೆಂಟ್ ಸಿಗುವುದು ಅಷ್ಟು ಸುಲಭದ ಮಾತಲ್ಲ.
ಅದರಲ್ಲೂ ನಾವು ಕೆಲಸ ಮಾಡುವ ಏರಿಯಾದಲ್ಲೇ, ನಮಗೆ ಬೇಕೆನ್ನಿಸುವ ಮನೆಗಳನ್ನು ಹುಡುಕಿ, ಬಳಿಕ ಮನೆ ಮಾಲೀಕರು ಹಾಕುವ ನೂರೆಂಟು ಷರತ್ತುಗಳಿಗೂ ತಲೆಯಲ್ಲಾಡಿಸಿ, ಅವರ ಎಲ್ಲಾ ನಿಯಮಗಳಿಗೂ ಓಕೆ ಅಂದ ಮೇಲೆ ನಮ್ಮ ಪೂರ್ವಾಪರಗಳನ್ನು ವಿಚಾರಿಸಿದ ನಂತರವೇ ಬಾಡಿಗೆ ಮನೆ ಸಿಗುವುದು.
ಸದ್ಯ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ, ವ್ಯಕ್ತಿಯೊಬ್ಬನಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಗಳಿಸಿಲ್ಲ ಎಂಬ ಕಾರಣಕ್ಕೆ ಮಾಲೀಕರು ಫ್ಲ್ಯಾಟ್ ಅನ್ನು ಬಾಡಿಗೆಗೆ ನೀಡಲು ನಿರಾಕರಿಸಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಶುಭ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪರೀಕ್ಷೆಯ ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಫ್ಲ್ಯಾಟ್ ಬೇಕು ಎಂದರೆ ಪರೀಕ್ಷೆಯಲ್ಲಿ ಪಡೆದ ಅಂಕಗಳು ಫ್ಲ್ಯಾಟ್ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ನನ್ನ ಸೋದರ ಸಂಬಂಧಿಯೊಬ್ಬನಿಗೆ ಫ್ಲ್ಯಾಟ್ ನೀಡಲು ಮಾಲೀಕರು ನಿರಾಕರಿಸಿದ್ದಾರೆ.
ಇದನ್ನೂ ಓದಿ: Fake Marks Card: ಸ್ಟಡಿ ಸೆಂಟರ್ ಹೆಸರಲ್ಲಿ SSLC, PUC ನಕಲಿ ಅಂಕಪಟ್ಟಿ ಮಾರಾಟ; ಮೂವರ ಸೆರೆ
ಇದಕ್ಕೆ ಕಾರಣ ಆತ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಪಡೆದಿಲ್ಲ. ಹೀಗಾಗಿ ಆತನಿಗೆ ಫ್ಲ್ಯಾಟ್ ಸಿಕ್ಕಿಲ್ಲ ಎಂದು ವಾಟ್ಸ್ ಆ್ಯಪ್‌ನಲ್ಲಿ ಮಾಡಿರುವ ಚಾಟ್ಸ್ ಸಮೇತ ಪೋಸ್ಟ್ ಮಾಡಿದ್ದಾರೆ. ಇದರ ಜತೆಗೆ ಲಿಂಕ್‌ಡ್ ಇನ್ ಪ್ರೊಫೈಲ್, ಟ್ವಿಟರ್ ಅಕೌಂಟ್, ಕಂಪನಿಯಲ್ಲಿ ಜಾಬ್ ಸಿಕ್ಕಿದ ಜಾಯಿನಿಂಗ್ ಸರ್ಟಿಫಿಕೆಟ್ ಕೂಡಾ ಕೇಳಿದ್ದಾರೆ.
ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ. ಬಾಡಿಗೆ ಮನೆ ನೀಡುವವರು ಒಳ್ಳೆಯವರು, ವಿದ್ಯಾವಂತರು, ಯಾವುದೇ ದುಶ್ಚಟಗಳಿಲ್ಲದವರು, ಉತ್ತಮ ಸ್ವಭಾವ ಹೊಂದಿದವರು ಬಾಡಿಗೆದಾರರಾಗಿ ಬರಬೇಕು ಎನ್ನುವ ಹುಡುಕಾಟದಲ್ಲಿ ಮಾಲೀಕರು ಇಂಥ ಚಿತ್ರ ವಿಚಿತ್ರ ಕಂಡಿಷನ್‌ಗಳನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ.