Site icon Vistara News

Viral video | ತಡೆಗೋಡೆಯನ್ನೇ ದಾಟಿ ಕಾಡಿನಿಂದ ನಾಡಿನತ್ತ ಹೊರಟ ಒಂಟಿ ಸಲಗ; ಗೋಡೆ ಹಾರಿದ್ದೇ ರೋಚಕ

elephant

ರಾಮನಗರ: ಕಾಡಾನೆ ಹಾವಳಿಯಿಂದ ನಿತ್ಯ ಕಾಡಂಚಿನ ಜನರು ಭೀತಿಯಲ್ಲಿ ಓಡಾಡುವಂತಾಗಿದೆ. ಇದೀಗ ರಾಮನಗರದ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಹರಿಹರ ಚೆಕ್ ಪೋಸ್ಟ್‌ ಬಳಿ ಒಂಟಿ ಸಲಗವೊಂದು (Viral video) ಕಾಣಿಸಿಕೊಂಡಿದೆ.

ಕಾವೇರಿ ವನ್ಯಜೀವಿ ವಿಭಾಗದ ಹರಿಹರ ಚೆಕ್ ಪೋಸ್ಟ್ ಬಳಿ ರೈಲ್ವೆ ಕಂಬಿ ತಡೆಗೋಡೆ ದಾಟಿ ಕಾಡಿನಿಂದ ನಾಡಿನತ್ತ ಒಂಟಿ ಸಲಗವೊಂದು ಹೊರಟಿದೆ. ಆನೆ‌ ದಾಟುವ ದೃಶ್ಯವನ್ನು ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.

ತಡೆಗೋಡೆ ಹಾರಲು ತಿಣುಕಾಡಿತು
ಈ ಒಂಟಿ ಸಲಗವು ತಡೆಗೋಡೆ ಬಳಿ ಬಂದು ಹಾಗೇ ಗಮನಿಸಿದೆ, ಅದು ಸ್ವಲ್ಪ ಎತ್ತರದಲ್ಲಿಯೇ ಇರುವುದನ್ನು ಕಂಡುಕೊಂಡಿದೆ. ಆದರೆ, ತಾನು ದಾಟಲೇಬೇಕೆಂದು ಹಠ ಹೊತ್ತ ಆನೆಯು, ಮೊದಲು ತಡೆಗೋಡೆಯ ಸರಳಿನ ಮೇಲೆ ಕಾಲಿಟ್ಟಿದೆ. ಬಳಿಕ ಹಾಗೂಹೀಗೂ ತನ್ನ ಎರಡು ಕಾಲುಗಳನ್ನು ಸರಳಿನ ಆಚೆ ಹಾಕಿದೆ. ಆಗ ಅದರ ಹೊಟ್ಟೆ ಭಾಗವು ತಡೆಗೋಡೆಯ ಮೇಲ್ಭಾಗದಲ್ಲಿ ಸಿಲುಕಿ ಒದ್ದಾಡುವಂತಾಯಿತು. ಮುಂದಿನ ಕಾಲುಗಳು ಸಹ ನೆಲಕ್ಕೆ ಮುಟ್ಟಲು ಕಷ್ಟವಾದರೆ, ಹಿಂದಿನ ಕಾಲುಗಳು ಆಗಲೇ ನೆಲದಿಂದ ಮೇಲಕ್ಕೆ ಇದ್ದವು. ಆದರೂ ತಿಣುಕಾಡಿ, ಕಷ್ಟಪಟ್ಟು ಆ ಸರಳನ್ನು ದಾಡಿ ನಿರಮ್ಮಳವಾಗಿ ನಡೆದು ಸಾಗಿದೆ.

ಓಬಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಓಬಟ್ಟಿ ಗ್ರಾಮದ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು, ಈಗಾಗಲೇ ಎರಡು ಕುರಿಗಳನ್ನು ತಿಂದು ಹಾಕಿದೆ. ಹೀಗಾಗಿ ಗ್ರಾಮಸ್ಥರು ಹೊರಗೆ ಓಡಾಡಲು ಭಯಪಡುವಂತಾಗಿದೆ. ಅರಣ್ಯ ಇಲಾಖೆಯವರು ಚಿರತೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Injured Elephant | ಬೇಲೂರಲ್ಲಿ ಗಾಯಗೊಂಡ ಒಂಟಿ ಸಲಗ ಪತ್ತೆ; ಚಿಕಿತ್ಸೆ ಕೊಡಿಸದೆ ನೋಡುತ್ತ ನಿಂತ ಅರಣ್ಯ ಇಲಾಖೆ ಸಿಬ್ಬಂದಿ

Exit mobile version