Site icon Vistara News

ಶಿಕ್ಷಣದಲ್ಲಿ ಭಾರತೀಯತೆ ರೂಪಿಸಲು ಎಲ್ಲರ ಸಹಕಾರ ಬೇಕು: ವಿಶ್ವದರ್ಶನ ಸಂಭ್ರಮದಲ್ಲಿ ಸಚಿವ ಬಿ. ಸಿ. ನಾಗೇಶ್

ಯಲ್ಲಾಪುರ: ಸ್ವಾವಲಂಬಿಯನ್ನು ಪರಾವಲಂಬಿಯಾಗಿ ಮಾಡುವ ಶಿಕ್ಷಣ ವ್ಯವಸ್ಥೆ ಬ್ರಿಟಿಷರಿಂದ ನಮ್ಮ ದೇಶದಲ್ಲಿ ಬಂದಿದೆ. ಇಂತಹ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ, ಮತ್ತೆ ಸಂಸ್ಕಾರಯುತ, ವ್ಯಕ್ತಿ ನಿರ್ಮಾಣ, ನೈತಿಕತೆಯ ಶಿಕ್ಷಣ ನೀಡುವುದಕ್ಕಾಗಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಶನಿವಾರ ಹೇಳಿದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ʼವಿಶ್ವದರ್ಶನ ಸಂಭ್ರಮ ಹಾಗೂ ಪಿ.ಯು ಕಾಲೇಜು ಉದ್ಘಾಟನಾ ಸಮಾರಂಭʼದಲ್ಲಿ ಮಾತನಾಡಿದರು.

ಭಾರತದಲ್ಲಿ ಈ ಹಿಂದೆ 28 ಮಕ್ಕಳಿಗೆ ಒಂದು ವಿದ್ಯಾ ಕೇಂದ್ರ ಇತ್ತು. ಇಲ್ಲಿನ ಶಿಕ್ಷಣ ವ್ಯವಸ್ಥೆ ಅಷ್ಟು ಉತ್ತಮವಾಗಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಇಂದು ನೀಡುತ್ತಿರುವ ಶಿಕ್ಷಣ ತನ್ನ ಉದ್ದೇಶ ಈಡೇರಿಸುತ್ತಿದೆಯೇ ಎಂಬ ಅನುಮಾನವೂ ಇದೆ. ದೇಶದ ಎಲ್ಲರಿಗೂ ಶಿಕ್ಷಣ ಸಿಕ್ಕರೆ ಭ್ರಷ್ಟಾಚಾರ ಸರಿಯಾಗುತ್ತದೆ, ದೌರ್ಜನ್ಯ ಹೋಗುತ್ತದೆ ಎಂದು ಒಂದು ಕಾರ್ಯಕ್ರಮದಲ್ಲಿ ಗಣ್ಯರು ಭಾಷಣ ಮಾಡುತ್ತಿದ್ದರು. ಕರೊನಾ ಕಾಲದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದ ನಡುವೆ ಎದ್ದುನಿಂತ ಒಬ್ಬ ಆಟೊ ಡ್ರೈವರ್‌, ನೀವು ವೈದ್ಯರಿಗೆ ಶಿಕ್ಷಣ ನೀಡಿಲ್ಲವೇ? ರಾಜಕಾರಣಿಗಳಿಗೆ ಶಿಕ್ಷಣ ನೀಡಿಲ್ಲವೇ? ಅಧಿಕಾರಿಗಳಿಗೆ ಶಿಕ್ಷಣ ನೀಡಿಲ್ಲವೇ? ಎಂದು ಪ್ರಶ್ನಿಸಿದ. ಅಂದರೆ ಕೊರೋನಾ ಸಮಯದಲ್ಲಿ ಈ ಹುದ್ದೆಗಳಲ್ಲಿರುವವರು ನಡೆದುಕೊಂಡನ್ನು ಅವರು ನೋಡಿದ್ದರು. ಒಂದು ಕಡೆ ಉದ್ಯೋಗ ಲಭಿಸುತ್ತಿಲ್ಲ ಎಂದು ಶಿಕ್ಷಿತರು ಹೇಳಿದರೆ, ಕೆಲಸ ಮಾಡುವವರು ಸಿಗುತ್ತಿಲ್ಲ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ.

ಈವರೆಗೆ ಭಾರತದಲ್ಲಿ ಶಿಕ್ಷಣ ನೀತಿಯನ್ನು ಎರಡು ಬಾರಿ ಬದಲಾಯಿಸಲಾಗಿದೆ. ಆದರೆ ಅದರಲ್ಲಿ ಭಾರತೀಯತೆಯನ್ನು ಅಳವಡಿಸುವ ಪ್ರಯತ್ನ ಆಗಿರಲಿಲ್ಲ. ನೂತನ ಶಿಕ್ಷಣ ನೀತಿ ಈ ಕೊರತೆಯನ್ನು ಹೋಗಲಾಡಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಇದನ್ನೂ ಓದಿ | 2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್‌ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ಕಾರ್ಮಿಕ ಸಚಿವ ಅರೆಬೈಲ್‌ ಶಿವರಾಮ್‌ ಹೆಬ್ಬಾರ್‌ ಮಾತನಾಡಿ, ಮಕ್ಕಳು ಸ್ಪರ್ಧಾತ್ಮಕವಾಗಿ ಕಲಿಯುವ ರೀತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು. ಆ ಭಾಗದ ಎಲ್ಲಾ ಮಕ್ಕಳೂ ಅಲ್ಲಿ ಕಲಿಯುವಂತಹ ವ್ಯವಸ್ಥೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಸರ್ಕಾರಕ್ಕೆ ಯಾವುದೇ ಶಾಲೆಗಳನ್ನು ಮುಚ್ಚುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಶ್ವದರ್ಶನ ಸಂಸ್ಥೆಯ ಸಂಸ್ಥಾಪಕರಾದ ದಿ.ಉಮೇಶ ಭಟ್ಟ ಅವರ ಹೆಸರು, ಕನಸುಗಳನ್ನು ಮರೆಯದೇ ವಿಶ್ವದರ್ಶನ ಸಂಸ್ಥೆ ಮುನ್ನಡೆಸಲಿ ಎಂದು ಹೆಬ್ಬಾರ್‌ ಆಶಿಸಿದರು.

ಮಿನಿ ವಿಶ್ವವಿದ್ಯಾಲಯವಾಗಲಿದೆ

ವಿಶ್ವದರ್ಶನ ಸಂಸ್ಥೆಯನ್ನು ಒಂದು ಮಿನಿ ವಿಶ್ವವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ವಿಶ್ವದರ್ಶನ ಸಂಸ್ಥೆಯ ಅಧ್ಯಕ್ಷ ಹಾಗೂ ವಿಸ್ತಾರಾ ಮೀಡಿಯಾದ ಸಿಇಒ ಹರಿಪ್ರಕಾಶ ಕೋಣೆಮನೆ ತಿಳಿಸಿದರು. ಮುಂದಿನ 4-5 ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಶಿಕ್ಷಣ ಕೇಂದ್ರವಾಗಿ ಈ ಸಂಸ್ಥೆಯನ್ನು ರೂಪಿಸುವ ಯೋಜನೆ ಹೊಂದಿದ್ದೇವೆ. ಸಂಸ್ಥೆಯ ವಿದ್ಯಾರ್ಥಿ ಕೇವಲ ಪದವೀಧರರಾಗಬಾರದು, ಉತ್ತಮ ನಾಗರಿಕರಾಗಬೇಕು ಎಂಬುದು ನಮ್ಮ ಉದ್ದೇಶ. ನಾಳಿನ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಣ ಹಾಗೂ ಇವತ್ತಿನ ಆಡಳಿತಗಾರರನ್ನು, ಜನರನ್ನು ಎಚ್ಚರಿಸಿ ಮಾರ್ಗದರ್ಶನ ಮಾಡುವ ಪತ್ರಿಕೋದ್ಯಮ ಇವೆರಡೂ ಸರಿಯಾಗಿ ಇರಬೇಕು. ಇಲ್ಲವಾದಲ್ಲಿ ದೇಶಕ್ಕೆ ಸಮಸ್ಯೆ ಆಗುತ್ತದೆ. ನನಗೆ ಪತ್ರಿಕೋದ್ಯಮ ಹಾಗೂ ಶಿಕ್ಷಣ ಸಂಸ್ಥೆ ಎರಡರಲ್ಲೂ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದಕ್ಕೆ ಯಲ್ಲಾಪುರದ ಮಣ್ಣಿಗೆ ಯಾವಾಗಲೂ ಚಿರಋಣಿ ಎಂದು ತಿಳಿಸಿದರು.

ಬೆಂಗಳೂರಿನ ಉದ್ಯಮಿ ಎಚ್.ಎಸ್. ಶೆಟ್ಟಿ ಅವರಿಗೆ ಪ್ರಸಕ್ತ ಸಾಲಿನ ‘ವಿಶ್ವದರ್ಶನ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಡಾ. ಡಿ.ಕೆ. ಗಾಂವ್ಕರ್‌, ನರಸಿಂಹ ಕೋಣೆಮನೆ ಉಪಸ್ಥಿತರಿದ್ದರು.

ಇದನ್ನೂ ಓದಿ | World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

Exit mobile version