ಬೆಂಗಳೂರು: ಕನ್ನಡ ಪತ್ರಿಕಾರಂಗದಲ್ಲಿ ಹೊಸ ಸಾಹಸಗಳನ್ನು ಮೆರೆದ ಪ್ರಸಿದ್ಧ ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ (DR Vijaya Sankeshwar) ಅವರ ಹೆಸರಿನಲ್ಲಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಶ್ವದರ್ಶನ ಎಜುಕೇಶನ್ ಸೊಸೈಟಿಯಲ್ಲಿ (Vishwadarshana Education Society) ಮೀಡಿಯಾ ಸ್ಕೂಲ್ (Media School) ಸ್ಥಾಪನೆಯಾಗಿದ್ದು, ಅಕ್ಟೋಬರ್ 16ರಂದು ಪ್ರಾರಂಭಗೊಳ್ಳಲಿದೆ. ಅಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ್ ಜೋಶಿ (Union Minister Pralhad Joshi) ಅವರು ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಅಂದು ಮೈಸೂರು ಮರ್ಕಂಟೈಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಮತ್ತು ವಿಸ್ತಾರ ನ್ಯೂಸ್ ಎಕ್ಸಿಕ್ಯೂಟಿವ್ ಚೇರ್ಮನ್ ಆಗಿರುವ ಡಾ. ಎಚ್.ಎಸ್. ಶೆಟ್ಟಿ (HS Shetty) ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನಲ್ಲಿ (Dr Vijay Sankeshwar Media School) ಭವಿಷ್ಯದ ಪತ್ರಕರ್ತರನ್ನು (Future journalists) ವೃತ್ತಿಪರವಾಗಿ ರೂಪಿಸುವ ರೀತಿಯಲ್ಲಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಮಾನ್ಯತೆ ಪಡೆದಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (Journalism and Mass Communication) ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ (One year PG Diploma Course) ಇದಾಗಿದೆ. ಈಗ ಈ ಮೀಡಿಯಾ ಸ್ಕೂಲ್ ಅಕ್ಟೋಬರ್ 16ರ ಸೋಮವಾರ ಯಲ್ಲಾಪುರದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ (Yellapur Vishwadarshan Central School) ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳುತ್ತಿದೆ.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಆಶಯ ಭಾಷಣ ಮಾಡಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಮುಖ್ಯ ಅತಿಥಿಗಳಾಗಿದ್ದಾರೆ. ಉದ್ಯಮಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ್ ಎಸ್. ಹೆಬ್ಬಾರ್ ಉಪಸ್ಥಿತರಿರಲಿದ್ದು, ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷರು, ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಧಾನ ಸಂಪಾದಕರು, ಸಿಇಒ ಹರಿಪ್ರಕಾಶ್ ಕೋಣೆಮನೆ (Vistara CEO Hariprakash Konemane) ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಸಂವಾದ
ಅಂದು ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಪತ್ರಿಕೋದ್ಯಮ ಹಾಗೂ ಅವರ ಅನುಭವ ಕುರಿತು ಚರ್ಚೆಗಳು ಈ ಸಂದರ್ಭದಲ್ಲಿ ನಡೆಯಲಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿ ನರಸಿಂಹ ಕೋಣೆಮನೆ ಅವರು ತಿಳಿಸಿದ್ದಾರೆ.
ಡಾ. ಎಚ್.ಎಸ್. ಶೆಟ್ಟಿ ಅವರಿಗೆ ಅಭಿನಂದನೆ, ಸನ್ಮಾನ
ವಿಶ್ವದರ್ಶನ ಶಿಕ್ಷಣ ಸಮೂಹ, ಯಲ್ಲಾಪುರ ಇದರ ನಿರ್ದೇಶಕರು ಮತ್ತು ಮೈಸೂರು ಮರ್ಕಂಟೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರು, ವಿಸ್ತಾರ ನ್ಯೂಸ್ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಎಚ್.ಎಸ್.ಶೆಟ್ಟಿ ಅವರ ತಾಂತ್ರಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ನೀಡಿ ಗೌರವಿಸಿದೆ. ಆ ಪ್ರಯುಕ್ತ ಅವರಿಗೆ ವಿಶ್ವದರ್ಶನ ಬಳಗ ಮತ್ತು ಯಲ್ಲಾಪುರದ ನಾಗರಿಕರ ಪರವಾಗಿ ಅಂದು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಾಯೋಗಿಕ ಕಲಿಕೆಗೆ ಒತ್ತು
ಇಂದಿನ ಅಗತ್ಯಕ್ಕೆ ತಕ್ಕಂತೆ “ಮುದ್ರಣ, ಡಿಜಿಟಲ್ ಹಾಗೂ ಟಿವಿ” ಈ ಮೂರೂ ಮಾಧ್ಯಮಗಳಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಬೋಧನೆ ಮತ್ತು ತರಬೇತಿ ಇರಲಿದೆ. ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗುತ್ತದೆ ಎಂದು ವಿಶ್ವದರ್ಶನ ಎಜುಕೇಶನ್ ಸೊಸೈಟಿ ಅಧ್ಯಕ್ಷ, ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಧಾನ ಸಂಪಾದಕ, ಸಿಇಒ ಹರಿಪ್ರಕಾಶ ಕೋಣೆಮನೆ (Hariprakash Konemane) ಅವರು ತಿಳಿಸಿದ್ದಾರೆ.
ತಾಳಮದ್ದಲೆ ಕಾರ್ಯಕ್ರಮ
ಅಂದು ಮಧ್ಯಾಹ್ನ 2.30ರಿಂದ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ದೇವಿದಾಸ ಕವಿ ವಿರಚಿತ “ಕರ್ಣ ಭೇದನ” ಪ್ರಸಂಗದ ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ ಅವರ ಭಾಗವತಿಕೆ, ನರಸಿಂಹ ಭಟ್ಟ ಹಂಡ್ರಮನೆ ಅವರ ಮದ್ದಳೆ ಹಾಗೂ ಪ್ರಮೋದ ಹೆಗಡೆ ಕಬ್ಬಿನಗದ್ದೆ ಅವರ ಚಂಡೆ ವಾದನ ಇರಲಿದೆ. ಇನ್ನು ಮುಮ್ಮೇಳದಲ್ಲಿ ಕರ್ಣನಾಗಿ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಕೃಷ್ಣನಾಗಿ ದಿವಾಕರ ಹೆಗಡೆ ಮೈಸೂರು, ಕುಂತಿಯಾಗಿ ಎಂ.ಎನ್. ಹೆಗಡೆ ಹಳಹಳ್ಳಿ ಹಾಗೂ ಕೌರವನಾಗಿ ಡಾ. ಡಿ.ಕೆ. ಗಾಂವ್ಕರ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ಭಟ್ಟ ಶಿರನಾಲೆ ಅವರ ಧ್ವನಿ ಮತ್ತು ಬೆಳಕು ಇದೆ.
ಇದನ್ನೂ ಓದಿ: Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
ಹೆಚ್ಚಿನ ವಿವರಗಳಿಗೆ ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ (ಮೊಬೈಲ್: 8884432196) ಅಥವಾ ವಿಶ್ವದರ್ಶನ ಎಜುಕೇಶನ್ ಸೊಸೈಟಿ ಸಿಇಒ ಅಜಯ್ ಭಾರತೀಯ (ಮೊಬೈಲ್: 8904134073) ಅವರನ್ನು ಸಂಪರ್ಕಿಸಬಹುದಾಗಿದೆ.