ಯಲ್ಲಾಪುರ: ಪದವಿಯ ಸರ್ಟಿಫಿಕೇಟ್ ಜೀವನವನ್ನು ಕಲ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಕಾರ ನೀಡುವಂತಹ ಶಾಲೆಗಳಿಗೆ ಮಕ್ಕಳನ್ನು ಪಾಲಕರು ಕಳುಹಿಸುತ್ತಿದ್ದಾರೆ. ಅಂತಹ ಒಂದು ಸಂಸ್ಕಾರಯುತ ಶಿಕ್ಷಣವನ್ನು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನೀಡುವುದೊಂದೇ ನಮ್ಮ ಉದ್ದೇಶವಾಗಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ (Vishwadarshana School) ಅಧ್ಯಕ್ಷ, ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ವಿಶ್ವ ದರ್ಶನ ಸೆಂಟ್ರಲ್ ಸ್ಕೂಲ್ (ಸಿಬಿಎಸ್‌ಇ) ವಾರ್ಷಿಕೋತ್ಸವದ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಉತ್ತುಂಗದಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸಿಗುವಂತಹ ಅನುಕೂಲತೆಗಳು ಇಲ್ಲಿ ಸಿಕ್ಕಿದ್ದರೆ ನಮ್ಮ ಊರು, ಜಿಲ್ಲೆ ಬಹಳ ಹಿಂದೆಯೇ ಮುಂದುವರಿದಿರುತ್ತಿತ್ತು. ನಮ್ಮ ಸಾಧನೆಗೆ ಸವಲತ್ತುಗಳು ತೊಂದರೆ ಆಗಲಿಲ್ಲ. ಆದರೆ, ಅಂತಹ ಸಾಧನೆಗಳ ಪಟ್ಟಿ ಚಿಕ್ಕದಾಗಿದೆ. ನಮ್ಮಲ್ಲಿನ ಮಕ್ಕಳಿಗೆ ಎಲ್ಲ ಸಾಮರ್ಥ್ಯಗಳು ಇದೆ. ಆದರೆ ಸಂವಹನ ಕೌಶಲ್ಯ (communication skill) ಕಡಿಮೆ ಇದೆ. ಅದರಿಂದ ಸಾಧನೆಯ ಹಾದಿಯಲ್ಲಿ ಹಿಂದುಳಿಯುವಂತಾಗಿದೆ ಹೇಳಿದರು.
ಸಂಸ್ಕೃತ ಇಲ್ಲದೆ ಸಂಸ್ಕಾರ ಇಲ್ಲ ಎಂಬುದನ್ನು ಅರಿತು ಸಂಸ್ಕೃತವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ನಾವು ಅವಕಾಶ ಕಲ್ಪಿಸಿದ್ದೇವೆ. ಯಾವುದೇ ಭಾಷೆಯ ಹೇರಿಕೆಯಿಂದಲೂ ಕನ್ನಡಕ್ಕೆ ತೊಂದರೆಯಿಲ್ಲ. ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಅದರಲ್ಲೇ ಒಂದು ಸಂಸ್ಕಾರ ಅಡಗಿದೆ. ಆದ್ದರಿಂದ ಕನ್ನಡವನ್ನು ಉಳಿಸುವುದರೊಡನೆ ಪ್ರಪಂಚದೊಡನೆ ಸಮಾನ ಪೈಪೋಟಿ ನೀಡಲು ಇನ್ನುಳಿದ ಭಾಷೆಗಳನ್ನು ಅರಿತು, ಕಲಿತು ಮುನ್ನಡೆಯುವುದು ಅವಶ್ಯಕವಾಗಿದೆ. ಕೇವಲ ಪಠ್ಯವಲ್ಲದೆ, ಮಕ್ಕಳು ಕೌಶಲ್ಯವನ್ನು, ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ನಾವು ಒತ್ತನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳಿಗೆ ನೇಮಕ; ರಾಜ್ಯದಲ್ಲಿದೆ 3,036 ಹುದ್ದೆ
ಮುಂದಿನ 5 ವರ್ಷಗಳಲ್ಲಿ ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಜ್ಜಾಗಿದ್ದೇವೆ. ಆ ಭಾಗದಲ್ಲೂ ಕಾರ್ಯನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಬರುವ ವರ್ಷದೊಳಗಾಗಿ 600 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ದೇವ ದುರ್ಲಭವಾದ ಶಿಕ್ಷಕ ವೃಂದ ನಮ್ಮ ಸಂಸ್ಥೆಯಲ್ಲಿರುವುದು ನಮ್ಮ ಹೆಮ್ಮೆಯ ಸಂಗತಿ. ಎಲ್ಲ ಕ್ಷೇತ್ರದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಎಲ್ಲರೂ ಶ್ರಮಿಸುತ್ತೇವೆ. ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದೇನೆ. ಆ ಮೂಲಕ ಅವರ ಸಂಸ್ಥೆಯಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು, ಅತ್ಯುತ್ತಮ ಶಿಕ್ಷಣ ಒದಗಿಸಲಾಗುವುದು ಎಂದರು.
ನಂದೊಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಗೀತಾ ಹೆಗಡೆ ಮಾತನಾಡಿ, ಪ್ರಪಂಚದಲ್ಲಿ ಯಾರೇ ಸಾಧನೆ ಮಾಡಿದರೂ ಅವರನ್ನು ಪ್ರೋತ್ಸಾಹಿಸುವುದರಲ್ಲಿ ಮೊದಲಿಗರು ಅವರ ಗುರುಗಳು ಮತ್ತು ಪಾಲಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲು ಇದು ಸ್ಫೂರ್ತಿಯಾಗಲಿ ಎಂದರು.
ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳಾದ ಸರ್ವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಕೆ. ಭಟ್, ಯಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೇವಿದಾಸ ಪಟಗಾರ, ಬಿಸಗೊಡು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಆರ್. ನಾಯಕ, , ಎಸ್.ಆರ್. ಭಟ್ ಪ್ರಶಸ್ತಿಯನ್ನು ವಿತರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಮುಖ್ಯ ಶೈಕ್ಷಣಿಕ ಅಧಿಕಾರಿ ಗುರುರಾಜ ಗಂಟಿಹೊಳಿ, ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಲ್. ಭಟ್, ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಿ.ಕೆ. ಗಾಂವ್ಕರ್, ಸಿಬಿಎಸ್‌ಸಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮಹಾದೇವಿ ಭಟ್, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮುಕ್ತ ಶಂಕರ್, ಇಡಗುಂದಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನ ಹೆಗಡೆ ಇದ್ದರು.
ಇದನ್ನೂ ಓದಿ: Amit Shah : ಫೊರೆನ್ಸಿಕ್ ವಿವಿ ಕಾರ್ಯಕ್ರಮದಲ್ಲಿ ಎಲ್.ಕೆ. ಆಡ್ವಾಣಿಯವರನ್ನು ಸ್ಮರಿಸಿದ ಗೃಹಸಚಿವ ಅಮಿತ್ ಶಾ
ಹರ್ಷಿತಾ ಭಟ್ ಪ್ರಾರ್ಥಿಸಿದರು. ಗಣೇಶ್ ಭಟ್ ಸ್ವಾಗತಿಸಿದರು. ವನಿತಾ ಭಟ್ ವಾರ್ಷಿಕ ವರದಿ ವಾಚಿಸಿದರು. ಆಸ್ಮಾ ಶೇಖ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.