Site icon Vistara News

Vishwadarshana School | ಶಿಕ್ಷಕ ಎಂಬುದು ಕೇವಲ ವೃತ್ತಿಯಲ್ಲ, ಜವಾಬ್ದಾರಿ: ಹರಿಪ್ರಕಾಶ್ ಕೋಣೆಮನೆ

HPK vishwadarshana School

ಶಿರಸಿ: “ಶಿಕ್ಷಕʼ ಎಂಬುದು ಕೇವಲ ವೃತ್ತಿಯಲ್ಲ, ಇದೊಂದು ಜವಾಬ್ದಾರಿಯಾಗಿದೆ. ಎಲ್ಲ ವೃತ್ತಿಯಲ್ಲಿ ಇರುವವರು ಸಮಾನ ಗೌರವವನ್ನು ಪಡೆಯಬಹುದು. ಆದರೆ ಪಡೆಯುವ ಶಿಕ್ಷಣ ಜವಾಬ್ದಾರಿಯುತವಾಗಿರಬೇಕು. ಜೀವನ ನಿಂತಿರುವುದು ಶಿಕ್ಷಣದ ತಳಹದಿಯ ಮೇಲೆ ಎಂಬುದನ್ನು ನಾವು ಮರೆಯಬಾರದು. ಸಮಾಜದಲ್ಲಿ ಶಿಕ್ಷಕ ಸಮೂಹ ಮತ್ತು ಮಾಧ್ಯಮದ ಸೇವೆ ಗಣನೀಯ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ (Vishwadarshana School) ಅಧ್ಯಕ್ಷ, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ‌ ಹೇಳಿದರು.

ಯಲ್ಲಾಪುರದ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ 29 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಣ ಶಿಕ್ಷಕ ವಿ. ಕೆ. ಗಾಂವ್ಕರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“”ಶಿಕ್ಷಣದ ಗುರಿ ಕೇವಲ ಅಂಕ ಪಡೆಯುವುದು ಮಾತ್ರ ಆಗಬಾರದು. ಅದರ ಹೊರತಾಗಿ ಮಹೋನ್ನತ ಗುರಿಯನ್ನು ಸಾಧಿಸುವ ಛಲವನ್ನು ಹೊಂದಬೇಕು. ಜತೆಗೆ ಶ್ರೇಷ್ಠ ಪ್ರಜೆ ಆಗುವ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಇರಬೇಕುʼʼ ಎಂದವರು ತಿಳಿಸಿದರು.

“”ಶಿಕ್ಷಕರು ನೀಡಿದ ಸಂಸ್ಕಾರವು ವಿದ್ಯಾರ್ಥಿಗಳ ಜೀವನಕ್ಕೆ ಅಮೂಲ್ಯ ಪಾಠವಾಗಿದೆ. ಅಂತಹ ನೀತಿಪಾಠವನ್ನು ಯಶಸ್ವಿಯಾಗಿ ಸಂವಹನ ಮಾಡುವ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಮ್ಮ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿ.ಕೆ.ಗಾಂವ್ಕರ್ ಅವರಿಗೆ ಅಭಿನಂದನೆಗಳುʼʼ ಎಂದು ಹರಿಪ್ರಕಾಶ್‌ ಹೇಳಿದರು.

ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ‌.

ಇದನ್ನೂ ಓದಿ | Music Class | ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಸಂಗೀತ ತರಗತಿ ಆರಂಭ

ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರಾದ ವಿ. ಕೆ. ಗಾಂವ್ಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ “”ಜನ್ಮ ಕೊಟ್ಟ ತಂದೆಯನ್ನು, ವಿದ್ಯೆ ಕೊಟ್ಟ ಗುರುವನ್ನು, ಅನ್ನಕೊಟ್ಟ ಸಂಸ್ಥೆಯನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳುವುದು ನನ್ನ ಕರ್ತವ್ಯ. ವಿದ್ಯಾ ಸೇವೆ ಸಂಪಾದನೆಯ ಮಾರ್ಗ ಎಂದು ನಾನು ತಿಳಿದವನಲ್ಲ. ಅದು ಮಾನವ ಸಮಾಜದೊಂದಿಗೆ ಸಂಬಂಧವನ್ನು ವಿಸ್ತರಿಸಿಕೊಳ್ಳುವ ಮಹಾ ಮಾರ್ಗವೆಂದು ನಂಬಿದ್ದೇನೆʼʼ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ “”ನಿವೃತ್ತ ಜೀವನದ ಭದ್ರತೆಗಾಗಿ ಪಿಂಚಣಿ ನೀಡುವುದು ಸರ್ಕಾರದ ಜವಾಬ್ದಾರಿ. ಅದು ಅನಿವಾರ್ಯ ಕೂಡ. ಇತ್ತೀಚೆಗೆ ಈ ಸೌಲಭ್ಯದಿಂದ ವಂಚಿತರಾದ ಸಿಬ್ಬಂದಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆʼʼ ಎಂದು ಅಭಿಪ್ರಾಯಪಟ್ಟರು.

ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಪ್ರಕಾಶ ಕುಂಜಿ ಮಾತನಾಡಿ “”ವಿ.ಕೆ. ಗಾಂವ್ಕರ್ ನನ್ನ ವಿದ್ಯಾರ್ಥಿಯಾಗಿದ್ದವರು. ಅವರು ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಮಾದರಿಯಾಗಿ ಸಾಗಿಬಂದಿದ್ದಾರೆ. ಅಂತಹ ವ್ಯಕ್ತಿಯ ಸೇವೆಯನ್ನು ಪಡೆದ ಮತ್ತು ಅದಕ್ಕೆ ಯೋಗ್ಯವಾದ ಗೌರವವನ್ನು ನೀಡಿದ ಸಂಸ್ಥೆಗೆ ಅಭಿನಂದನೆಗಳುʼʼ ಎಂದರು. ಕ್ರೀಡೆ ಸಂಸ್ಕೃತಿ ಮತ್ತು ವಿದ್ಯೆಯನ್ನು ಪ್ರೀತಿಸುವ ಈ ಸಂಸ್ಥೆಯ ಜತೆಗೆ ಆ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ ಗಾಂವ್ಕರ್ ಅವರಿಗೆ ಮತ್ತವರ ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ | ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಪ್ರೌಢಶಾಲೆಯ ಮುಖ್ಯಸ್ಥ ಪ್ರಸನ್ನ ಹೆಗಡೆ ಅವರು ಗಾಂವ್ಕರ್‌ ಜತೆಗಿನ ಸುದೀರ್ಘ ಕಾಲದ ಒಡನಾಟ ಹಾಗೂ ಅನುಭವವನ್ನು ಸ್ಮರಿಸಿದರು. ಕೇಂದ್ರೀಯ ಶಾಲೆಯ ಪ್ರಾಚಾರ್ಯರಾದ ಮಹಾದೇವಿ ಭಟ್ಟ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ವೇಳೆ ವಿ.ಕೆ. ಗಾಂವ್ಕರ್ ಅವರ ಸೇವಾ ಅವಧಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ವಿದ್ಯಾರ್ಥಿನಿಯರಾದ ಪಲ್ಲವಿ ಭಟ್ ಹಾಗೂ ಅಶ್ವಿನಿ ಗೌಡ ತಮ್ಮ ಮೆಚ್ಚಿನ ಶಿಕ್ಷಕರಾದ ವಿ.ಕೆ.ಗಾಂವ್ಕರ್ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸಂಗೀತ ಶಿಕ್ಷಕಿ ಪುಷ್ಪಾ ಭಟ್ಟ ಪ್ರಾರ್ಥಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಲ್.ಭಟ್ ವಂದಿಸಿದರು.

ಇದನ್ನೂ ಓದಿ | ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಡೆದ ಯಲ್ಲಾಪುರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್

Exit mobile version