ಬೆಂಗಳೂರು: ಕೋಲಾರದ ಯುವ ಶಾಸಕ, ಪರಿಶ್ರಮ ನೀಟ್ ಅಕಾಡೆಮಿ (Parishrama NEET Academy) ರೂವಾರಿ ಪ್ರದೀಪ್ ಈಶ್ವರ್ (Pradeep Eshwar) ಅವರನ್ನು ಕೆಲವರು ಟ್ರೋಲ್ ಮಾಡುತ್ತಿರುವುದನ್ನು ಕಂಡಾಗ ಸಂಕಟವಾಗುತ್ತದೆ ಎಂದ ವಿಶ್ವವಾಣಿ ಪತ್ರಿಕೆಯ (Vishwavani Newspaper) ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು, ಯಾರಾದರು ನಿಮ್ಮನ್ನು ಹುಚ್ಚ ವೆಂಕಟ್ 2 (Huccha Venkat 2) ಎಂದು ಟ್ರೋಲ್ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ. ಜನರ ಟೀಕೆಯೇ ನಮ್ಮನ್ನು ಗಟ್ಟಿಗೊಳಿಸುತ್ತದೆ ಎಂದು ಸಲಹೆ ನೀಡಿದರು.
ಬೆಂಗಳೂರಿನ ಪುರಭವನದಲ್ಲಿ (Bangalore Townhall) ಶನಿವಾರ ಆಯೋಜಿಸಿದ್ದ ವಿಶ್ವವಾಣಿ ಪುಸ್ತಕ (Vishwavani Pustaka) ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ಪ್ರದೀಪ್ ಈಶ್ವರ್ ಅವರ ಅಸಾಮಾನ್ಯ ಸಾಧನೆಯನ್ನು ಶ್ಲಾಘಿಸಿದರು.
ಮೊದಲ ಬಾರಿ ವಿಜಯ ಕರ್ನಾಟಕ ಪತ್ರಿಕಾ ಕಚೇರಿಯಲ್ಲಿ ಪ್ರದೀಪ್ ಈಶ್ವರ್ ಬಂದು ಭೇಟಿಯಾದರು. ಪಾಲಕರನ್ನು ಕಳೆದುಕೊಂಡು ಕಂಗೆಟ್ಟಿದ್ದರು. ಹಾಕಿಕೊಳ್ಳಲು ಸರಿಯಾದ ಚಪ್ಪಲಿಯೇ ಇರಲಿಲ್ಲ. ಆಗ ಯಾರೂ ಅವರನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಮುಂದೆ ಅವರು ಪರಿಶ್ರಮ ಅಕಾಡೆಮಿ ಸ್ಥಾಪಿಸಿದಾಗ ಹತ್ತು ಹುಡುಗರೂ ಇರಲಿಲ್ಲ. ಈಗ 5 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರು 4 ಸಾವಿರ ಶಿಷ್ಯರು ವೈದ್ಯರಾಗಿದ್ದಾರೆ. ಸುಮಾರು 30 ಕಟ್ಟಡಗಳಲ್ಲಿ ಈಗ ಪರಿಶ್ರಮ ಅಕಾಡೆಮಿಯ ತರಗತಿಗಳು ನಡೆಯುತ್ತಿವೆ ಎಂದು ವಿಶ್ವೇಶ್ವರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಶಾಸಕರಾಗಿದ್ದೇ ಆಕಸ್ಮಿಕ. ಕಾಂಗ್ರೆಸ್‌ನ 4ನೇ ಪಟ್ಟಿಯಲ್ಲಿ ಅವರ ಹೆಸರಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ಗೆ ಬಲಿಷ್ಠ ಅಭ್ಯರ್ಥಿಯೇ ಇರಲಿಲ್ಲ. ಪ್ರದೀಪ್ ಈಶ್ವರ್ ಎರಡನೇ ಸ್ಥಾನಕ್ಕೆ ಬಂದರೆ ಸಾಕು ಎಂದು ಕಾಂಗ್ರೆಸ್ ಹಿರಿಯ ನಾಯಕರೇ ಹೇಳುತ್ತಿದ್ದರು. ಪ್ರಮುಖರು ಪ್ರಚಾರಕ್ಕೇ ಹೋಗಲಿಲ್ಲ. ಆದರೆ ಪ್ರದೀಪ್ ಈಶ್ವರ್ ಸ್ವಸಾಮರ್ಥ್ಯದಿಂದ ಗೆದ್ದು ಶಾಸಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಫುಲ್ ಟೈಮ್ ರಾಜಕಾರಣ ಮಾಡಬೇಡಿ: ಪ್ರದೀಪ್ ಈಶ್ವರ್
ಯಾರೂ ಪೂರ್ಣಾವಧಿ ರಾಜಕಾರಣ ಮಾಡಲು ಹೋಗಬೇಡಿ, ಸದಾ ರಾಜಕೀಯ ಮುಖಂಡರ ಹಿಂಬಾಲಕರಾಗಿಯೇ ಇರಬೇಡಿ ಎಂದು ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಯುವಕರಿಗೆ ಸೂಚಿಸಿದರು.
ನಾನು ಕಾಲೇಜು ಓದುತ್ತಿದ್ದಾಗ ಹಿರಿಯ ಮುಖಂಡರೊಬ್ಬರು 3 ಸಾವಿರ ರೂ. ಕೊಟ್ಟು ಸಹಾಯ ಮಾಡಿದ್ದರು. ಆ ಋಣಕ್ಕೆ ನಾನು ಅವರ ಹಿಂಬಾಲಕನಾದೆ. ಅವರು ಏನು ಹೇಳುತ್ತಾರೋ ಅದನ್ನು ಕೇಳುತ್ತ ಹೋದೆ. ಮುಂದೆ ಅವರು ಕಾಂಗ್ರೆಸ್ ಟಿಕೆಟ್‌ಗಾಗಿ ಬೀದಿಗಿಳಿದರು. ಆ ಗಲಾಟೆಯಲ್ಲಿ ನಮ್ಮ ಸಂಬಂಧಿಯೊಬ್ಬರು ಬಲಿಯಾದರು. ನನ್ನ ಮೇಲೆ ಪ್ರಕರಣ ದಾಖಲಾಯಿತು. ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಅವರು ಸೋತರು. ನಾನು ಕೆಲಸ ಕಳೆದುಕೊಳ್ಳಬೇಕಾಯಿತು. ಆದರೆ ಆ ಸೋತ ರಾಜಕಾರಣಿ ಮತ್ತು ಗೆದ್ದ ರಾಜಕಾರಣಿ ರಾಜಿಯಾಗಿ ಜತೆಯಾಗಿಬಿಟ್ಟರು ಎಂಬ ತಮ್ಮ ಜೀವನಕತೆಯನ್ನು ಈ ಸಂದರ್ಭದಲ್ಲಿ ಅನಾವರಣ ಮಾಡಿದರು.
ಕೇವಲ ಮಾತಿನ ಬಂಡವಾಳದಿಂದ ಗೆದ್ದ ಏಕೈಕ ಶಾಸಕ ನೀನು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ರಾಜಕೀಯ ಏನು ಎನ್ನುವುದು ಗೊತ್ತಿಲ್ಲದ ಕಾರಣ ನಾನು ಗೆದ್ದು ಬಿಟ್ಟೆ. ರಾಜಕೀಯದಲ್ಲಿ ತೀರಾ ಆಳಕ್ಕೆ ಇಳಿಯಬಾರದು. ಪೂರ್ಣಾವಧಿ ರಾಜಕೀಯ ಮಾಡದೆ ನಮ್ಮ ಮೂಲ ವೃತ್ತಿ ಮುಂದುವರಿಸಬೇಕು ಎಂದು ಪ್ರದೀಪ್ ಈಶ್ವರ್ ಅಭಿಪ್ರಾಯಪಟ್ಟರು.
ಬಾಲ್ಯದಲ್ಲಿ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಜೀವನವೇ ಮುಗಿಯಿತು ಅಂದುಕೊಂಡಿದ್ದೆ. ಕೆಲವರು ಓದಿದ್ದು ಸಾಕು ಸೆಕ್ಯುರಿಟಿ ಗಾರ್ಡ್ ಆಗು ಎಂದರು. ಇನ್ನು ಕೆಲವರು ಡ್ರೈವರ್ ಆಗು ಎಂದರು. ಆದರೆ ಶಿವಕುಮಾರ ಸ್ವಾಮೀಜಿಯವರ ಮಠ ನನಗೆ ಆಸರೆ ನೀಡಿತು. ಹಾಗಾಗಿ ಅವರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿರುವೆ ಎಂದು ಪ್ರದೀಪ್ ಈಶ್ವರ್ ನೆನಪಿಸಿಕೊಂಡರು.
ವಿಶ್ವೇಶ್ವರ ಭಟ್ ನನಗೆ ಅಕ್ಷರ ಗುರುಗಳು. ಜೀವನದಲ್ಲಿ ನೊಂದಿದ್ದಾಗ ʼಸ್ಫೂರ್ತಿ ಸೆಲೆʼ ಪುಸ್ತಕ ನೀಡಿ ಮನಸ್ಸಿಗೆ ಸ್ಫೂರ್ತಿ ತುಂಬಿದವರು. ಹಾಗೆಯೇ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ನನಗೆ ರಾಜಕೀಯ ಕಣ್ಣುಗಳಿದ್ದಂತೆ ಎಂದವರು ಹೇಳಿದರು.
ವಿಶ್ವೇಶ್ವರ ಭಟ್ ಅವರ ಸಂಪಾದಕರ ಸದ್ಯಶೋಧನೆ-1, ಸಂಪಾದಕರ ಸದ್ಯಶೋಧನೆ-2, ಸಂಪಾದಕರ ಸದ್ಯಶೋಧನೆ-3 ಪುಸ್ತಕ, ಕಿರಣ್ ಉಪಾಧ್ಯಾಯ ಅವರ ʼಹೊರದೇಶವಾಸಿʼ, ರೂಪಾ ಗುರುರಾಜ್ ಅವರ ʼಒಂದೊಳ್ಳೆ ಮಾತು-2ʼ, ಶಿಶಿರ್ ಹೆಗಡೆ ಅವರ ʼಶಿಶಿರ ಕಾಲʼ ಪುಸ್ತಕಗಳನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜತೆಗಿದ್ದರು.
ಇದನ್ನು ಓದಿ: Vishweshwar Bhat: ಪುಸ್ತಕ ಬಿಡುಗಡೆಗೆ ಬಾರದ ಸಿದ್ದರಾಮಯ್ಯ! ʼಅನಿವಾರ್ಯತೆʼ ಎಲ್ಲರಿಗೂ ಅರ್ಥವಾಗ್ತದೆ ಎಂದ ವಿಶ್ವೇಶ್ವರ ಭಟ್