Site icon Vistara News

ಅನಂತಕುಮಾರ್‌‌ ಅಪೇಕ್ಷೆಗಳ ಈಡೇರಿಕೆಗಾಗಿ ಕಂಕಣಬದ್ಧರಾಗಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಅನಂತಕುಮಾರ್‌‌

ಬೆಂಗಳೂರು: ದಿವಂಗತ ಅನಂತಕುಮಾರ್‌ ಅವರದ್ದು ಚುಂಬಕ ವ್ಯಕ್ತಿತ್ವ. ನಮಗೆಲ್ಲ ಪ್ರೇರಣ ಶಕ್ತಿಯಾಗಿದ್ದ ಅವರು ಭವಿಷ್ಯದಲ್ಲಿ ಕಂಡಿದ್ದ ಅಪೇಕ್ಷೆಗಳನ್ನು ಈಡೇರಿಸಲು ಕಂಕಣಬದ್ಧರಾಗಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಶಂಕರಪುರಂನ ಜೈನ್‌ ಭವನದಲ್ಲಿ ದಿವಂಗತ ಅನಂತಕುಮಾರ್‌ ಅವರ 63ನೇ ಜನ್ಮ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ಅನಂತ ಪ್ರೇರಣಾ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ʼಅನಂತಯಾನʼ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇದನ್ನೂ ಓದಿ | Lokayukta Raid | ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಂದ ಇಬ್ಬರು ಅಧಿಕಾರಿಗಳ ಬಂಧನ

ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್‌ ಜತೆಗಿತ್ತು. ಅವರದ್ದು ಆಕರ್ಷಕ ವ್ಯಕ್ತಿತ್ವ, ಅವರ ಒಡನಾಟ ನೆನಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ ಇದೆ. ನಮ್ಮೆಲ್ಲರ ಭಾವನೆಗಳ ಜೋಡಣೆ ಪುಸ್ತಕದಲ್ಲಿ ಆಗಿದೆ. ಅನಂತಕುಮಾರ್‌ ನೆನಪು ಸದಾ ಹಸಿರಾಗಿರಬೇಕು, ಅದಕ್ಕೆ ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.

ಇದನ್ನೂ ಓದಿ | Crime News | ಆನೆ ದಂತ, ಚಿರತೆ ಚರ್ಮ ಮಾರಾಟ ಮಾಡುತ್ತಿದ್ದವರ ಸೆರೆ; ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಕೇಸ್‌

ಅನಂತಕುಮಾರ್ ನಮ್ಮೊಂದಿಗೆ ಇಂದು ಇಲ್ಲ,‌ ಆದರೆ ಅವರು ಮಾಡಿರುವ ಕೆಲಸಗಳು ಇನ್ನೂ ನಮ್ಮ ಮಧ್ಯೆ ಇವೆ. ತೇಜಸ್ವಿನಿ ಅನಂತಕುಮಾರ್‌ ಅವರ ಕ್ರಿಯಾಶೀಲ ಕಾರ್ಯಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದ ಅವರು, ಅನಂತಕುಮಾರ್‌ ಅವರ ಹಿಂದಿನ ಶಕ್ತಿಯಾಗಿ ತೇಜಸ್ವಿನಿ ಕಾರ್ಯನಿರ್ವಹಿದ್ದವರು. ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ. ಎಲ್ಲ ರಂಗಗಳು ತಮ್ಮ ಆದರ್ಶಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಇದರಿಂದ ಹೊರಬಂದು ಒಳ್ಳೆಯ ಆದರ್ಶ ಕಾಣಬೇಕಾದರೆ ಅನಂತಕುಮಾರ್‌ ಅವರಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ. ಅವರ ಎಲ್ಲ ಚಟುವಟಿಕೆಗಳಿಗೆ ಕೈಜೋಡಿಸಿ ಅನುಷ್ಠಾನ ಗೊಳಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌, ವಿಶ್ರಾಂತ ನ್ಯಾಯಮೂರ್ತಿ ಎನ್‌ .ಕುಮಾರ್‌, ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ, ಕ.ರಾ.ಗ್ರಾ.ಪ ವಿಶ್ವವಿದ್ಯಾಲಯದ ಉಪಕುಲಪತಿ ವಿಷ್ಣುಕಾಂತ್‌ ಚಟ್ಪಲ್ಲಿ, ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ.ಕೃಷ್ಣ ಭಟ್ ಸೇರಿ ಹಲವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಪ್ರದರ್ಶಿನಿಯನ್ನು ಉದ್ಘಾಟಿಸಿದರು.

ಇಂದು ಅನಂತ್ ಕುಮಾರ್ ಜತೆ ಕೆಲಸ ಮಾಡಿದ ಪ್ರಮುಖರ ಸಮಾವೇಶ
ಗುರುವಾರ ಬೆಳಗ್ಗೆ 11 ಗಂಟೆಗೆ ಅನಂತಕುಮಾರ್ ಅವರ ಜತೆ ಕೆಲಸ ಮಾಡಿದ ಪ್ರಮುಖ ಕಾರ್ಯಕರ್ತರ ಸಮಾವೇಶವು ನಗರದ ಕೆ.ಆರ್‌.ರಸ್ತೆಯ ಶಂಕರಪುರಂನ ಜೈನ್‌ ಭವನದಲ್ಲಿ ನಡೆಯಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | ಸೆ.22ಕ್ಕೆ ದಿ.ಅನಂತಕುಮಾರ್‌ 63ನೇ ಜನ್ಮದಿನ; ಪ್ರೇರಣಾದಾಯಿ ಕಾರ್ಯಕ್ರಮಗಳ ಆಯೋಜನೆ

Exit mobile version