ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಜತೆಗೆ ಟ್ರಾಮಾ ಸೆಂಟರ್(ಅಪಘಾತ ತುರ್ತು ಚಿಕಿತ್ಸಾ ಘಟಕ) ಸ್ಥಾಪನೆಯ ಬೇಡಿಕೆಯೂ ಇದೆ. ಭೌಗೋಳಿಕ ಸ್ಥಿತಿ, ಅಪಘಾತ ಪ್ರಕರಣ, ತುರ್ತು ಚಿಕತ್ಸೆಗಳ ಅಂಕಿ-ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣವಾಗಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಚರ್ಚಿಸಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ನಗರದಲ್ಲಿ ಮೇಲ್ದರ್ಜೆಗೇರಿದ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ಹಾಗೂ ರಾಯಪ್ಪ ಹುಲೇಕಲ್ ಶಾಲೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ತುರ್ತು ಚಿಕಿತ್ಸಾ ಘಟಕದ ಕಟ್ಟಡದ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಯೋಜನಾಬದ್ಧವಾಗಿ ಕೆಲಸ ನಡೆಯಬೇಕು. ಯಾವುದೇ ರೀತಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಈಗಾಗಲೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಜೊತೆ ಚರ್ಚಿಸಲಾಗಿದ್ದು, ಅವರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿಯಿಂದ ಜನರ ದನಿಯಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ