Site icon Vistara News

Vistara News Launch | ಮಾಧ್ಯಮಗಳಿಗೆ ವಿಸ್ತಾರ ನ್ಯೂಸ್‌ ಮೇಲ್ಪಂಕ್ತಿ ಆಗಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ

Vistara Kageri

ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲ ಚಾನೆಲ್‌ಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಹತ್ತಾರು ಚಾನೆಲ್‌ಗಳ ಸ್ಪರ್ಧೆಯ ಮಧ್ಯೆಯೂ ವಿಸ್ತಾರ ನ್ಯೂಸ್‌ (Vistara News Launch) ವಿಭಿನ್ನವಾಗಿ ನಿಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಸ್ತಾರ ನ್ಯೂಸ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿಸ್ತಾರ ನ್ಯೂಸ್‌ ಏಳಿಗೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಹಾಗೂ ಎಂಡಿ ಎಚ್‌.ವಿ.ಧರ್ಮೇಶ್‌ ಸೇರಿ ಹಲವು ಅನುಭವಿಗಳ ದಂಡೇ ಇದೆ. ಸಕಾರಾತ್ಮಕ ಧೋರಣೆಯಿಂದ ಮುನ್ನುಗ್ಗುತ್ತಿರುವ ತಂಡವು ಯಶಸ್ವಿಯಾಗಲಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಎಲೆಮರೆಯ ಕಾಯಿಗಳನ್ನೂ ಮುನ್ನೆಲೆಗೆ ತರುವ ಕೆಲಸ ಮಾಡಲಿ” ಎಂದು ತಿಳಿಸಿದರು.

“ಎಲ್ಲ ಸಂಸ್ಥೆಗಳಲ್ಲೂ ಮೌಲ್ಯಗಳ ಕುಸಿತವಾಗುತ್ತಿದೆ. ಆದರೆ, ಪ್ರತಿಯೊಂದು ಸಂಸ್ಥೆಗೂ ಮೇಲ್ಪಂಕ್ತಿಯ ಅಗತ್ಯವಿದೆ. ಇದರ ದಿಸೆಯಲ್ಲಿ ವಿಸ್ತಾರ ನ್ಯೂಸ್‌ ಮೇಲ್ಪಂಕ್ತಿ ಹಾಕಿಕೊಡಲಿ. ಯಲ್ಲಾಪುರದ ಕೋಣೆಮನೆ ಎಂಬ ಹಳ್ಳಿಯಲ್ಲಿ ಹುಟ್ಟಿ, ಶ್ರಮ ವಹಿಸಿ ಹರಿಪ್ರಕಾಶ್‌ ಕೋಣೆಮನೆ ಅವರು ಉನ್ನತ ಹುದ್ದೆ ಗಳಿಸಿದ್ದಾರೆ. ಅವರಿಂದ ನಾಡಿಗೆ ಒಳ್ಳೆಯದಾಗುತ್ತದೆ ಎಂಬ ಅಚಲ ವಿಶ್ವಾಸವಿದೆ” ಎಂದರು.

ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡದ ಕೊಡುಗೆ ಅಪಾರ

“ನಾಡಿನ ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. “ಉತ್ತರ ಕನ್ನಡದ ಪತ್ರಕರ್ತರು ಬಹಳ ವರ್ಷಗಳ ಹಿಂದಿನಿಂದಲೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಹಲವಾರು ಹಿರಿಯ ಪತ್ರಕರ್ತರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಉತ್ತರ ಕನ್ನಡದವರೇ ಆದ ಹರಿಪ್ರಕಾಶ್‌ ಕೋಣೆಮನೆ ಅವರು ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಹೆಮ್ಮೆ ತರಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | Vistara news launch | ಮಾಧ್ಯಮಗಳು ಜನಪರವಾಗಿರುವುದು ನಿರ್ಣಾಯಕ : ಕೇಂದ್ರ ಸಚಿವ ಎಲ್.‌ ಮುರುಗನ್

Exit mobile version