ಶಿವಮೊಗ್ಗ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಕಾರ್ಖಾನೆ ಉಳಿಸುವಂತೆ ಆಗ್ರಹಿಸಿ ಭದ್ರಾವತಿಯ ಕಾರ್ಮಿಕರಿಂದ ವಿನೋಬನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಕೊಟ್ಟ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು, “ಉಳಿಸಿ ಉಳಿಸಿ ವಿಐಎಸ್‌ಎಲ್ ಉಳಿಸಿ, ಭದ್ರಾವತಿ ಬೆಳೆಸಿ” ಎಂದು ಘೋಷಣೆಗಳನ್ನು ಕೂಗಿದರು.
ಮನೆ ಎದುರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ ಹಿನ್ನೆಲೆ ಸಿಟ್ಟಾದ ಸಂಸದ ಬಿ.ವೈ. ರಾಘವೇಂದ್ರ ಅವರು, ನಾವೆಲ್ಲರೂ ಸೇರಿ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಇಲ್ಲಿಗೆ ಚಪ್ಪಾಳೆ ತಟ್ಟಿಸಿಕೊಳ್ಳಲು ಬಂದಿಲ್ಲ. ನಾವು ಬಡವರ ವಿರುದ್ಧವಾಗಿ ಎಂದೂ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಕೇಳ್ರಪ್ಪ ಇಲ್ಲಿ, ನಾನು ಇಲ್ಲಿಗೆ ಭಾಷಣ ಮಾಡಲು ಬಂದಿಲ್ಲ. ಕೇಳಿಸಿಕೊಳ್ಳಿ ಮೊದಲು, ಆಮೇಲೆ ಧಿಕ್ಕಾರ ಕೂಗಿ. ರಾಘಣ್ಣ ಏನೇನು ಮಾಡಿದ್ದಾರೆ ಅಂತ ನಿಮ್ಗೇ ಗೊತ್ತು. ವಿಎಐಸ್‌ಎಲ್ (Visvesvaraya Iron and Steel Plant) ಬಾಗಿಲು ಹಾಕುವಂತಹ ಸಂದರ್ಭ ಬಂದಾಗ ನಾನು ಮುಂದೆ ನಿಂತು, ನಿಲ್ಲಿಸಿದ್ದೇನೆ. ಅದನ್ನು ತಿಳಿದುಕೊಳ್ಳಿ, ನಾನು ಈಗಾಗಲೇ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ನೀವು ಐದು ವರ್ಷದಿಂದ ಹೋರಾಟ ಮಾಡುತ್ತಿದ್ದೀರಿ, ನಿಮ್ಮ ರಾಘಣ್ಣ, ಎಲ್ಲಾದರೂ ಹಿಂದೇಟು ಹಾಕಿದ್ದಾರಾ? ಚುನಾವಣೆ ಬಂದರೂ ಪರವಾಗಿಲ್ಲ, ನಾನು ನಿಮ್ಮ ಪರವಾಗಿ ಇರುತ್ತೇನೆ, ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ ಎಂದು ಹೇಳಿದರು.
ಅಣ್ಣ ನಾವು ಯಾರ ಹತ್ತಿರ ಕೇಳಬೇಕು, ಕಾರ್ಖಾನೆ ಉಳಿಸಿಕೊಡಿ ಅಣ್ಣ ಅಷ್ಟೇ ಎಂದು ಕಾರ್ಮಿಕರು ಕೂಗಿದಾಗ ಪ್ರತಿಕ್ರಿಯಿಸಿ ಸಂಸದರು, ಲೇ ನನ್ನ ಹತ್ತಿರ ಕೇಳಬೇಕು. ನಿಮ್ಮ ಧ್ವನಿಯಾಗಿ ನಾನು ನಿಮ್ಮ ಪರವಾಗಿ ಇದ್ದೀನಿ, ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದೇನೆ. ಈ ಕಾರ್ಖಾನೆ ಸ್ಥಾಪನೆ ಹಿಂದೆ ವಿಶ್ವೇಶ್ವರಯ್ಯ ಅವರಂತಹ ಪುಣ್ಯಾತ್ಮರ ಪರಿಶ್ರಮ ಇದೆ. ನಾನು ಯಾವುದೇ ಕಾರಣಕ್ಕೂ ಕಂಪನಿ ಮುಚ್ಚಲು ಬಿಡುವುದಿಲ್ಲ. ನಾವು ಇಲ್ಲಿ ರಾಜಕಾರಣ ಮಾಡುತ್ತಿಲ್ಲ. ನಾನು ನಿಮ್ಮ ಜೊತೆ ಇದ್ದೀನಿ ಪಾ, ತಾಯಿ ನಿಮ್ಮ ಪರವಾಗಿ ಇದ್ದೀನಿ. ನಾನಂತೂ ದೇವರು ಮೆಚ್ಚುವ ಕೆಲಸ ಮಾಡ್ತಾ ಇದ್ದೀನಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಉಸ್ತುವಾರಿ ಸಚಿವರು ಹಗುರವಾಗಿ ಮಾತನಾಡಿದ್ದಾರೆ. ಸರ್ಕಾರದದಿಂದಲೇ 36 ಕೋಟಿ ಹಣವನ್ನು ವಾಪಸ್ ತೆಗೆದುಕೊಂಡಿದ್ದೀರಿ. ನೀವು ದಕ್ಷರಿದ್ದೀರಿ ಅಂದ್ರೆ 36 ಕೋಟಿ ಹಣ ಮಂಜೂರು ಮಾಡಿ. ವಿಮಾನ ನಿಲ್ದಾಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಖಂಡಿತಾ ತನಿಖೆ ಮಾಡಲಿ, ನಿಮಗೆ ಅಧಿಕಾರವಿದೆ. ಹಾಗಾಗಿ ನೀವು ತನಿಖೆ ಮಾಡಿಸಿ ಎಂದು ಹೇಳಿದರು.
ಇದನ್ನೂ ಓದಿ | BJP Karnataka: ಬೆಂಗಳೂರಿನ ನೂತನ ಜಿಲ್ಲಾಧ್ಯಕ್ಷರಿಂದ ಬಿ.ವೈ. ವಿಜಯೇಂದ್ರಗೆ ಅಭಿನಂದನೆ
ಕಾಂಗ್ರೆಸ್ ಸರ್ಕಾರದಿಂದ ಈ ಕ್ಷೇತ್ರಕ್ಕೆ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಗೌರವಾನ್ವಿತ ಬಂಗಾರಪ್ಪ ಅವರ ಮಗ ಇದ್ದೀರಿ, ನೀವು ಈ ಜಿಲ್ಲೆಗೆ ಕೊಡುಗೆ ನೀಡಬೇಕಾದರೆ, ಅಭಿವೃದ್ಧಿ ಮಾಡಿ. ಸಂವಿಧಾನದಲ್ಲಿ ಕೊಟ್ಟ ಅಧಿಕಾರದಿಂದ ನಾನು ಕಾಮಗಾರಿ ವೀಕ್ಷಣೆ ಮಾಡಿದ್ದೀನಿ ಅಷ್ಟೇ. ಉದ್ಘಾಟನೆ ಮಾಡಲು ನಾನೇನು ಮುಂದೆ ಹೋಗುತ್ತಿಲ್ಲ. ಆದರೆ, ಅಧಿಕಾರಿಗಳಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರೇ ದ್ವೇಷದ ರಾಜಕಾರಣ ಮಾಡಬೇಡಿ. ಹಗುರವಾಗಿ ಮಾತಾನಾಡುವುದನ್ನು ನಿಲ್ಲಿಸಿ, ಬಂಗಾರಪ್ಪ ಮಗನಾಗಿ ಸಣ್ಣತನದ ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.