ಬೆಂಗಳೂರು: ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ʼವಿಸ್ತಾರ ಏರ್‌ಲೈನ್ಸ್ʼ ವಿಮಾನಕ್ಕೆ (Vistara Airlines News) ಇಳಿಯಲು ಅನುಮತಿ ದೊರೆಯದ ಪರಿಣಾಮ, ಮರಳಿ ಬೆಂಗಳೂರಿಗೆ ಬಂದಿಳಿದ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಗೋವಾಕ್ಕೆ ಸೋಮವಾರ ಮಧ್ಯಾಹ್ನ ಹೊರಟಿದ್ದ UK881 ಸಂಖ್ಯೆಯ ʼಏರ್ ವಿಸ್ತಾರʼ ವಿಮಾನಕ್ಕೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಅನುಮತಿ ದೊರೆಯಲಿಲ್ಲ. ಪರಿಣಾಮ ವಿಮಾನವನ್ನು ಮರಳಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ (Kempegowda International Airport) ತಿರುಗಿಸಲಾಯಿತು.
ಬೆಂಗಳೂರಿನಿಂದ ಮಧ್ಯಾಹ್ನ 12:55ಕ್ಕೆ ಹೊರಟಿದ್ದ ವಿಮಾನ ಮಧ್ಯಾಹ್ನ 2 ಗಂಟೆಗೆ ಗೋವಾದಲ್ಲಿ ಇಳಿಯುವ ನಿರೀಕ್ಷೆ ಇತ್ತು. ಆದರೆ, ವಿಮಾನ ಮರಳಿ ಬೆಂಗಳೂರಿಗೇ ಬಂತು. ವಿಸ್ತಾರಾದ ಇತ್ತೀಚಿನ ಅಪ್‌ಡೇಟ್ ಫ್ಲೈಟ್ UK881ರ ಪ್ರಕಾರ, ಬೆಂಗಳೂರಿನಿಂದ ಸಂಜೆ 5 ಗಂಟೆಗೆ ಮತ್ತೆ ಹೊರಟಿದ್ದು, ಸುಮಾರು 6:15 ಗಂಟೆಗೆ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ತಲುಪಿತು.
ಇದರಿಂದ ಅಸಮಾಧನಗೊಂಡ ಏರ್ ವಿಸ್ತಾರ ಬಳಕೆದಾರರೊಬ್ಬರು ತಮ್ಮ ಅಸಂತೃಪ್ತಿಯನ್ನು Xನಲ್ಲಿ (ಟ್ವಿಟರ್) ತೋಡಿಕೊಂಡರು. ಪ್ರತಿಯಾಗಿ ವಿಸ್ತಾರ, ಗೋವಾ ವಿಮಾನ ನಿಲ್ದಾಣದಲ್ಲಿನ ರನ್‌ವೇ ನಿರ್ಬಂಧ ಈ ಪ್ರಕರಣಕ್ಕೆ ಕಾರಣವೆಂದು ತಿಳಿಸಿತು.
“ಗೋವಾ ಏರ್‌ಪೋರ್ಟ್‌ನಲ್ಲಿ ರನ್‌ವೇ ನಿರ್ಬಂಧಗಳ ಕಾರಣ UK881 ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. ದುರದೃಷ್ಟವಶಾತ್, ಇಂತಹ ಸಂದರ್ಭಗಳು ನಮ್ಮ ನಿಯಂತ್ರಣವನ್ನು ಮೀರಿದೆ. ದಯವಿಟ್ಟು ಹೆಚ್ಚಿನ ನವೀಕರಣಗಳಿಗಾಗಿ ಟ್ಯೂನ್ ಮಾಡಿ ಅಥವಾ ಸಹಾಯಕ್ಕಾಗಿ ಸಿಬ್ಬಂದಿಯನ್ನು ಸಂಪರ್ಕಿಸಿ” ಎಂದು ವಿಸ್ತಾರ ಹೇಳಿದೆ.
ವಿಮಾನವನ್ನು ಬೆಂಗಳೂರಿಗೆ ತಿರುಗಿಸಿದ ನಂತರ ಆತಂಕಕ್ಕೊಳಗಾದ ಪ್ರಯಾಣಿಕರ ಸಂಬಂಧಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: Vistara Airlines News: ದೆಹಲಿಗೆ ತೆರಳುವವರ ಟಿಕೆಟ್ ಶುಲ್ಕ ಮನ್ನಾ; ಏರ್ ಇಂಡಿಯಾ, ವಿಸ್ತಾರ ಏರ್‌ಲೈನ್ಸ್ ಆಫರ್ ಯಾರಿಗೆ?