ಬೆಂಗಳೂರು: ಉದ್ಯಮ ಲೋಕದಲ್ಲಿ ಸಾಧನೆ ಮಾಡಿ ಮಾದರಿಯಾಗಿರುವ ಮತ್ತು ಹೊಸ ಆವಿಷ್ಕಾರಗಳ ಮೂಲಕ ಪ್ರೇರಕ ಶಕ್ತಿಗಳಾಗಿರುವ ಉದ್ಯಮಿಗಳನ್ನು ಗೌರವಿಸುವ ವಿಧಾಯಕ ಪರಿಕಲ್ಪನೆಯ ವಿಸ್ತಾರ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ 2023 (Vistara Business Excellence Awards 2023) ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ರಾಜ್ಯದ ನಾನಾ ಜಿಲ್ಲೆಗಳ 43 ಮಂದಿ ಸಾಧಕ ಉದ್ಯಮಿಗಳನ್ನು ವಿಸ್ತಾರ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ (Vistara Awards) ನೀಡಿ ಗೌರವಿಸಲಾಯಿತು.
ರಾಜ್ಯದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮಾಧ್ಯಮ ಸಂಸ್ಥೆಯಾಗಿರುವ ವಿಸ್ತಾರ ನ್ಯೂಸ್ ಪ್ರೈವೆಟ್ ಲಿಮಿಟೆಡ್ (Vistara News Private limited) ವೈದ್ಯಕೀಯ, ಸಾರಿಗೆ, ಶಿಕ್ಷಣ, ವಸತಿ, ಜ್ಯುವೆಲ್ಲರಿ, ಹೋಟೆಲ್ ಇಂಡಸ್ಟ್ರಿ, ಸಮಾಜಸೇವೆ, ಆಂಬ್ಯುಲೆನ್ಸ್ ಸೇವೆ, ರಿಯಲ್ ಎಸ್ಟೇಟ್, ಬಟ್ಟೆ ಉದ್ಯಮ, ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಛಲದಿಂದ ಸಾಧನೆ ಮಾಡಿ ತಮ್ಮ ಹೆಗ್ಗುರುತುಗಳನ್ನು ಮೂಡಿಸಿರುವ ಸಾಧಕರನ್ನು ಈ ಮೂಲಕ ಗೌರವಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ (Minister Ramalinga Reddy), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar), ಹೆಸರಾಂತ ನಟ ಮತ್ತು ಚಿತ್ರ ನಿರ್ದೇಶಕ ರಮೇಶ್ ಅರವಿಂದ್ (Actor Ramesh Aravind), ಖ್ಯಾತ ಚಲನಚಿತ್ರ ನಟಿ ಆಶಾ ಭಟ್ (Actreess Asha Bhat) ಅವರು ಅತಿಥಿಗಳಾಗಿ ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್ (HV Dharmesh), ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ಉಪಸ್ಥಿತರಿದ್ದರು.
ನಿಮ್ಮ ಬೆವರ ಹನಿಗಳಿಗೆ, ಛಲಕ್ಕೆ ಸಲಾಂ ಎಂದ ಚಿತ್ರ ನಟ ರಮೇಶ್
ನಮ್ಮ ಸುಖ- ನೆಮ್ಮದಿಗೆ ಕಾರಣವಾಗಿರುವ ಪ್ರತಿಯೊಂದು ವಸ್ತು ಅಥವಾ ಸೇವೆಗಳ ಹಿಂದೆ ಹಲವಾರು ಉದ್ಯಮಿಗಳ ಕನಸು ಮತ್ತು ಹಟವಿದೆ. ವಿಜ್ಞಾನ ಅದೆಷ್ಟೋ ಸಂಶೋಧನೆಗಳನ್ನು ಮಾಡುತ್ತಿರಬಹುದು. ಅದನ್ನು ಜನ ಬಳಕೆಯ ವಸ್ತುಗಳಾಗಿ ಪರಿವರ್ತಿಸಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವುದು ಉದ್ಯಮಿಗಳು. ಅದೆಷ್ಟೋ ಜನರಿಗೆ ಉದ್ಯೋಗ, ಬದುಕಿಗೆ ಭರವಸೆ ನೀಡುತ್ತಿರುವವರು ಅವರು ಎಂದು ಚಿತ್ರನಟ ರಮೇಶ್ ಅರವಿಂದ್ ಈ ಸಂದರ್ಭದಲ್ಲಿ ಹೇಳಿದರು.
ಒಬ್ಬೊಬ್ಬ ಉದ್ಯಮಿಯೂ ನೂರಾರು ಕಷ್ಟಗಳನ್ನು ಎದುರಿಸಿ, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು, ಬೆವರು ಬಸಿದು ಈ ಹಂತಕ್ಕೆ ಬಂದಿರುತ್ತಾನೆ. ಒಬ್ಬೊಬ್ಬ ಉದ್ಯಮಿಯ ಹಿಂದೆಯೂ ಯಾರೊಂದಿಗೂ ಹೇಳಿಕೊಳ್ಳಲಾಗದ ಹತ್ತಾರು ಕಣ್ಣೀರ ಕತೆಗಳಿರುತ್ತವೆ. ಅಷ್ಟೆಲ್ಲ ಕಷ್ಟಗಳ ನಡುವೆಯೂ ಹಟವನ್ನು ಬಿಡದೆ ಸಾಧಿಸಿದ ಛಲಕ್ಕಾಗಿ, ಬೆವರಿಗೆ ಸಲ್ಲುತ್ತಿರುವ ಗೌರವ ಇದು ಎಂದು ರಮೇಶ್ ಬಣ್ಣಿಸಿದರು. ಆ ಮೂಲಕ ಎಲ್ಲ ಸಾಧಕರಲ್ಲೂ ಸಾರ್ಥಕ ಭಾವ ಮೂಡಿಸಿದರು.
ನಾನೂ ಉದ್ಯಮಿಯೇ, ನನಗೆ ಕಷ್ಟ ಗೊತ್ತು ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಸಮಾರಂಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾನು ಕೂಡಾ ಉದ್ಯಮಿಯೇ, ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದೇನೆ. ಉದ್ಯಮಿಗಳು ಎದುರಿಸುವ ಕಷ್ಟಗಳನ್ನು ನಾನು ಬಲ್ಲೆ ಎಂದರು.
ಇದನ್ನೂ ಓದಿ : Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಮುದ್ದು ಕೃಷ್ಣರ ದರ್ಶನ; ಇನ್ನೇಕೆ ತಡ ಫೋಟೊ ಕಳಿಸಿ!
ಎಲೈಟ್ ಇ2 ಗ್ರೂಪ್, ಡಿಎಸ್ ಮ್ಯಾಕ್ಸ್ ಬೆಂಬಲ
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಥವಾ ವಿದೇಶಗಳಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಕೆರಿಯರ್ ಕೌನ್ಸೆಲಿಂಗ್ ಮತ್ತು ಕೌಶಲವೃದ್ಧಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಷ್ಠಿತ ಎಲೈಟ್ ಇ2 ಗ್ರೂಪ್ ಮತ್ತು ಬೆಂಗಳೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಒದಗಿಸುವ ಮೂಲಕ ಜನಪ್ರಿಯತೆ ಪಡೆದಿರುವ ಡಿಎಸ್‌ಮ್ಯಾಕ್ಸ್ ರಿಯಲ್ ಎಸ್ಟೇಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿಸ್ತಾರ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ 2023 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಹಿನ್ನೆಲೆ ಗಾಯಕಿ ಮೇದಿನಿ ಅವರಿಂದ ಸಂಗೀತ ಕಾರ್ಯಕ್ರಮವಿತ್ತು.