ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆಯನ್ನು ರೂಪಿಸಲಾಗುತ್ತಿದೆ ಮತ್ತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ (Madhu Bangarappa) ಘೋಷಿಸಿದ್ದಾರೆ.
ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮವಾಗಿರುವ ವಿಸ್ತಾರ ನ್ಯೂಸ್ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ರೂಪಿಸಿದ ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ಸ್ -2023 (Vistara News Best teacher award-2023) ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಬಗ್ಗೆ ಕಾಳಜಿಯನ್ನು ಹೊಂದಿದೆ. ಮೂಲ ಸೌಕರ್ಯ ಒದಗಿಸುವುದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೂ ಚರ್ಚೆ ನಡೆದಿದೆ ಎಂದು ಮಧು ಬಂಗಾರಪ್ಪ ಅವರು ತಿಳಿಸಿದರು. ವಿಸ್ತಾರ ನ್ಯೂಸ್ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಶಿಕ್ಷಕರನ್ನು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಉಪಕ್ರಮವನ್ನು ಶ್ಲಾಘಿಸಿದರು.
ಶುಕ್ರವಾರ (ಡಿಸೆಂಬರ್ 22) ಸಂಜೆ ಬೆಂಗಳೂರಿನ ಕೆ.ಜಿ. ರೋಡ್ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲೆಯ 35 ಶಿಕ್ಷಕ/ಶಿಕ್ಷಕಿಯರು ಮತ್ತು ಮೂವರು ಪ್ರಯೋಗಶೀಲ ಸಾಧಕರನ್ನು ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಕೆಲವು ಜಿಲ್ಲೆಗಳ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದೆ.
ಶಿಕ್ಷಕ ವರ್ಗಕ್ಕೆ ಬೆಂಗಾವಲಾಗಿ ನಿಂತ ಮಾದರಿ ಸುದ್ದಿ ಸಂಸ್ಥೆ ವಿಸ್ತಾರ; ಹೊರಟ್ಟಿ ಪ್ರಶಂಸೆ
ವಿಸ್ತಾರ ನ್ಯೂಸ್ ಶಿಕ್ಷಕರ ಬೆನ್ನು ತಟ್ಟುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಂದು ಪ್ರಚಂಡ ಶಕ್ತಿಗೆ ಬೆಂಗಾವಲಾಗಿ ನಿಂತಿರುವುದನ್ನು ಜಗತ್ತಿಗೆ ಸಾರಿದೆ. ಈ ಮೂಲಕ ಇದೊಂದು ರಾಜ್ಯದ ಮಾದರಿ ಸುದ್ದಿ ಸಂಸ್ಥೆ ಎಂದು ಋಜುವಾತಾಗಿವೆ ಎಂದು ವಿಧಾನ ಪರಿಷತ್‌ನ ಸಭಾಪತಿಗಳಾದ ಶಿಕ್ಷಣ ತಜ್ಞ ಬಸವರಾಜ ಹೊರಟ್ಟಿ ಹೇಳಿದರು.
ಎಷ್ಟು ಹಣ ಕೊಟ್ಟರೂ ಸಿಗದ ನೆಮ್ಮದಿ ಇಲ್ಲಿ ಸಿಕ್ಕಿದೆ: ವಿಸ್ತಾರ ನ್ಯೂಸ್ ನೀಡಿರುವ ಈ ಪ್ರಶಸ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತೊಡಗಿಕೊಂಡಿರುವ ಇಂಥ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ನನ್ನಂಥವರಿಗೇ ಎಷ್ಟು ಹಣ ಕೊಟ್ಟರೂ ಸಿಗದಷ್ಟು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರೆ ಶಿಕ್ಷಕರು ಎಂಥ ಸಾರ್ಥಕ ಭಾವವನ್ನು ಅನುಭವಿಸಿರಬಹುದು ಎಂದು ನೀವೇ ಯೋಚಿಸಿ ಎಂದು ಬಸವರಾಜ ಹೊರಟ್ಟಿ ಹೇಳಿದರು. ನಾನು ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿ ನಂತರದ ಹೋರಾಟದ ಪ್ರತಿಫಲವಾಗಿ ಇಲ್ಲಿದ್ದೇನೆ ಎಂದು ನೆನಪಿಸಿಕೊಂಡರು.
ಶಿಕ್ಷಕರು ಮಕ್ಕಳ ಬಗ್ಗೆ ತಂದೆ-ತಾಯಿಯಷ್ಟೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಪೋಷಕರು ಕೂಡಾ ಅಷ್ಟೇ ಹೊಣೆಗಾರಿಕೆಯನ್ನು ಹೊಂದಬೇಕು ಎಂದು ಅವರು ಕಿವಿಮಾತು ಹೇಳಿದರು. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮ ಪಾಠ ಮಾಡಬಲ್ಲರು. ಸಮಾಜ ಮತ್ತು ಸರ್ಕಾರ ಅವರಿಗೆ ಅಂಥ ನೆಮ್ಮದಿಯನ್ನು ಒದಗಿಸಬೇಕು ಎಂದರು ಹೇಳಿದರು ಬಸವರಾಜ ಹೊರಟ್ಟಿ.
ಒಂದು ಪ್ರಶಸ್ತಿಯನ್ನು ಪಡೆಯುವುದು ಎಷ್ಟು ಕಷ್ಟ. ಅದಕ್ಕೆ ಎಷ್ಟು ವಶೀಲಿ ಮಾಡಬೇಕು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ವಿಸ್ತಾರ ನ್ಯೂಸ್ ಯಾವುದೇ ಮುಲಾಜೇ ಇಲ್ಲದೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಆಯ್ಕೆ ಪ್ರಕ್ರಿಯೆಯನ್ನು, ಸಾಧಕರನ್ನು ಗುರುತಿಸಿದ್ದನ್ನು ಹೊರಟ್ಟಿ ಕೊಂಡಾಡಿದರು.
ಮಾಧ್ಯಮ ಸರಿಯಾಗಿ ಶ್ರಮಿಸಿದರೆ ದೇಶವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಹುದು. ವಿಸ್ತಾರ ನ್ಯೂಸ್ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಸಾಮಾಜಿಕ ಕಳಕಳಿಯನ್ನು ನಿಜಾರ್ಥದಲ್ಲಿ ಹೊಂದಿರುವ ವಿಸ್ತಾರ ನ್ಯೂಸ್ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು ಬಸವರಾಜ ಹೊರಟ್ಟಿ.
ನಮ್ಮೂರ ಶಾಲೆಯನ್ನು ನಮ್ಮೆಲ್ಲರ ಶಾಲೆ ಮಾಡಿದ್ದು ವಿಸ್ತಾರ ನ್ಯೂಸ್: ಕೋಣೆಮನೆ
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣಮನೆ ಅವರು, ಸರ್ಕಾರಿ ಶಾಲೆಗಳಲ್ಲಿ ಆ ಸವಲತ್ತಿಲ್ಲ, ಈ ಸವಲತ್ತಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅದನ್ನು ಒದಗಿಸುವವರು ಯಾರು? ಎಂಬುದನ್ನು ಯೋಚಿಸಿದ ವಿಸ್ತಾರ ನ್ಯೂಸ್ ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಎಂಬ ಅಪೂರ್ವ ಕಾರ್ಯಕ್ರಮವನ್ನು ಯೋಜಿಸಿತು.
ನಾವು ಇದುವರೆಗೂ ಸರ್ಕಾರವನ್ನಾಗಲೀ, ಯಾರನ್ನೇ ಆಗಲಿ ದೂಷಿಸಿಲ್ಲ. ನಮ್ಮದೇ ಪ್ರಯತ್ನದ ಮೂಲಕ 300ಕ್ಕೂ ಅಧಿಕ ಸರ್ಕಾರಿ ಶಾಲೆಗಳ ಕುಂದುಕೊರತೆಗಳನ್ನು ನೀಗಿಸುವ ಕೆಲಸ ಮಾಡಿದ್ದೇವೆ. ಸಾಕಷ್ಟು ದಾನಿಗಳು, ಆಯಾ ಶಾಲೆಯ ಹಳೆ ವಿದ್ಯಾರ್ಥಿಗಳು, ಸೇವೆ ಸಲ್ಲಿಸುವ ಉದಾರ ಮನಸಿನವರು ಸರ್ಕಾರಿ ಶಾಲೆಯ ಅಭಿವೃದ್ದಿಗೆ ಕೈಜೋಡಿದ್ದಾರೆ. ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಎಂಬ ಕಲ್ಪನೆಯನ್ನು ಬಿತ್ತುವ ಮೂಲಕ ವಿಸ್ತಾರ ನ್ಯೂಸ್ ಒಂದು ದೊಡ್ಡ ಮಾದರಿಯನ್ನು ರೂಪಿಸಿದೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು. ಇದೀಗ ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ ಕೂಡಾ ಒಂದು ಹೊಸ ಮಾದರಿ ಎಂದು ಕೋಣೆಮನೆ ಅವರು ಹೆಮ್ಮೆಯಿಂದ ಹೇಳಿದರು.
ನಾವು ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ, ಕೋರ್ಟ್ ಕಟಕಟೆಯಲ್ಲಿ ನಿಂತಿಲ್ಲ
ವಿಸ್ತಾರ ನ್ಯೂಸ್ ಶುರು ಮಾಡುವಾಗ ಸಾಕಷ್ಟು ಸವಾಲುಗಳಿದ್ದವು. ಆದರೆ ಅದೆಲ್ಲವನ್ನೂ ಮೀರಿ ಮುಂದೆ ಸಾಗಿಬಂದಿದ್ದೇವೆ. ವಿಸ್ತಾರ ನ್ಯೂಸ್‌ನ ವಿಶೇಷವೆಂದರೆ ಅದು ತಾನು ಪ್ರಸಾರ ಮಾಡಿದ ಯಾವುದೇ ಒಂದು ಸುದ್ದಿಯನ್ನು ಹಿಂಪಡೆದಿಲ್ಲ. ಹಿಂದಡಿ ಇಟ್ಟಿಲ್ಲ. ಯಾವ ಸುದ್ದಿಯ ವಿಚಾರವಾಗಿಯೂ ಕೋರ್ಟ್ ಕಟೆಕಟೆಯಲ್ಲಿ ನಿಂತಿಲ್ಲ, ಇನ್ನು ಮುಂದಿನ ದಿನಗಳಲ್ಲಿಯೂ ವಿಸ್ತಾರ ನ್ಯೂಸ್ ಅದೇ ಹಾದಿಯಲ್ಲಿ ನಡೆಯುತ್ತದೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಎಲ್ಲಾ ಸುದ್ದಿಗಳನ್ನು ಒಂದೇ ಯೂಟ್ಯೂಬ್ ಹಾಗೂ ಫೇಸ್ ಬುಕ್ ಗಳಲ್ಲಿ ಕಸದ ಬುಟ್ಟಿಗೆ ಹಾಕುವ ಕೆಲಸವನ್ನು ವಿಸ್ತಾರ ನ್ಯೂಸ್ ಮಾಡಿಲ್ಲ. ಕ್ರೀಡೆ, ಸಿನಿಮಾ, ಶಿಕ್ಷಣ, ಕೃಷಿ, ಆರೋಗ್ಯ, ಬ್ಯುಸಿನೆಸ್-ಪ್ರಾಪರ್ಟಿ, ಮನಿ, ಧಾರ್ಮಿಕತೆ, ದೇವಾಲಯ ಎಲ್ಲದಕ್ಕೂ ಬೇರೆ ಬೇರೆ 11 ಯುಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದೇವೆ. ಎಲ್ಲವೂ ಜನರಿಂದ ಅತ್ಯುತ್ತಮ ಪ್ರಶಂಸೆಯನ್ನು ಪಡೆಯುತ್ತಿವೆ ಎಂದು ಹೇಳಿದರು.
ಶಿಕ್ಷಕರು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದ ತಾರಾ ಅನುರಾಧಾ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಚಿತ್ರ ನಟಿ ತಾರಾ ಅನುರಾಧಾ ಅವರು, ಶಿಕ್ಷಕರು ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಪಾಠ ಮಾಡಬಹುದು ಎಂದರು.
ನಾನು ವಿಧಾನ ಪರಿಷತ್ ಗೆ ಪ್ರವೇಶಿಸಿದಾಗ ನನಗೆ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಶಿಕ್ಷಕರಾಗಿ ತಂದೆಯಂತೆ ಮಾರ್ಗದರ್ಶನ ಮಾಡಿದರು ಎಂದು ನೆನಪಿಸಿಕೊಂಡರು.
ಶಿಕ್ಷಕ ಶಿಕ್ಷಕಿಯರು ಮಕ್ಕಳ ಪಾಲಿಗೆ ತಂದೆ ತಾಯಿ ಸ್ಥಾನದಲ್ಲಿ ನಿಲ್ಲುವವರು. ಸಮಾಜಕ್ಕೆ ಉತ್ತಮ ಪ್ರಜೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಪ್ರೀತಿಯಿಂದ ಪಾಠ ಮಾಡುವ ಶಿಕ್ಷಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಾರೆ ಎಂದು ಹೇಳಿದ ತಾರಾ ಅನುರಾಧಾ ಅವರು, ಶಿಕ್ಷಕರು ದಿನವೂ ಉತ್ತಮ ವಿದ್ಯಾರ್ಥಿಯಾಗಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪಾಠ ಮಾಡಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಅವರು ವಿಸ್ತಾರ ನ್ಯೂಸ್‌ನ ವಿಶೇಷ ಪರಿಕಲ್ಪನೆಯನ್ನು ಕೊಂಡಾಡಿದರು.
ಸಾಧಕರು, ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಕಾರ್ಯಕ್ರಮ
ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಮಾದರಿಯಾದ ಪ್ರಯೋಗ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್‌ನ ಮ್ಯಾನೇಜಿಂಗ್ ಟ್ರಸ್ಟಿ ವಲ್ಲೀಶ್ ಹೇರೂರ್, ಶಿಕ್ಷಣ ತಜ್ಞರು ಮತ್ತು ಬ್ರೈನ್ ಸೆಂಟರ್, ಶಿಕ್ಷಣ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಿ. ಶಶಿಕುಮಾರ್, ಎಎಂಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಕೆ.ಆರ್. ಪರಮಹಂಸ, ನ್ಯೂ ಬಾಲ್ಡ್‌ವಿನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಟಿ ವೇಣುಗೋಪಾಲ್, ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ.ಕೆ. ಮೋಹನ್ ಉಪಸ್ಥಿತರಿದ್ದರು. ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್, ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್ ಕುಮಾರ್ ಡಿ.ಕೆ. ಕಾರ್ಯಕ್ರಮದ ಸಾರಥ್ಯ ವಹಿಸಿದ್ದರು. ಎಕ್ಸಿಕ್ಯೂಟಿವ್ ಚೇರ್ಮನ್ ಡಾ.ಎಚ್.ಎಸ್. ಶೆಟ್ಟಿ, ನಿರ್ದೇಶಕರಾದ ಶ್ರೀನಿವಾಸ್ ಹೆಬ್ಬಾರ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದ ಆರಂಭದಲ್ಲಿ ನೇಹಾ ಹೆಗಡೆ ಅವರಿಂದ ಭರತನಾಟ್ಯ ಪ್ರದರ್ಶನ ಭಾರಿ ಪ್ರಶಂಸೆಗೆ ಪಾತ್ರವಾಯಿತು.
ಇದನ್ನೂ ಓದಿ: Vistara Campaign | ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನದ ಉದ್ದೇಶವೇನು? ಹೇಗೆ ನಡೆಯುತ್ತದೆ?
ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ ಪ್ರದಾನ ಕಾರ್ಯಕ್ರಮವನ್ನು ಬೆಂಬಲಿಸಿ ಹಲವು ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್ ಬೆಂಗಾವಲಿಗೆ ನಿಂತಿದ್ದವರು ರಾಮಯ್ಯ ಯುನಿವರ್ಸಿಟಿ ಆಪ್ ಅಪ್ಲೈಡ್ ಸೈನ್ಸಸ್, ನ್ಯೂ ಬಾಲ್ಡ್ ವಿನ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ಸ್, ಕೇಂಬ್ರಿಜ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ಸ್, ಎಎಂಸಿ ಎಜುಕೇಶನ್ ಮತ್ತು ಎಸ್‌ಡಿಪಿಇಟಿ ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್‌ನ ಉದಾತ್ತ ಆಶಯವನ್ನು ಬೆಂಬಲಿಸಿದ್ದವು.
ಬೆಸ್ಟ್ ಟೀಚರ್ ಅವಾರ್ಡ್ ಪಡೆದ ಕಣ್ಮಣಿಗಳು ಇವರು
1.ಪ್ರೊ. ಡಾ. ಜಯರಾಮ ಶೆಟ್ಟಿ ಎಸ್.
ಅಧ್ಯಕ್ಷರು ಮತ್ತು ನಿರ್ದೇಶಕರು, ಶ್ರೀ ದುರ್ಗಾಪರಮೇಶ್ವರಿ ಎಜುಕೇಷನ್ ಟ್ರಸ್ಟ್
ಜೆಸ್‌ಎಸ್‌ಪಿಯು ಕಾಲೇಜು ಮತ್ತು ಜೆ ಎಸ್ ಡಿಗ್ರಿ ಕಾಲೇಜು, ಬೆಂಗಳೂರು.
2. ಡಾ. ಪ್ರಶಾಂತ್ ಫರ್ನಾಂಡಿಸ್
ಪ್ರಾಂಶುಪಾಲರು, ಕೇಂಬ್ರಿಡ್ಜ್ ಸ್ಕೂಲ್, ಕೆ ಆರ್ ಪುರಂ, ಬೆಂಗಳೂರು
3.ಶ್ರೀ ದೇವರಾಜು ಆರ್.
ಜೀವಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು, ಕೆ.ಆರ್ ಪುರಂ, ಬೆಂಗಳೂರು-36
4.ಶ್ರೀಮತಿ ಸಾಯಿ ಕುಮಾರಿ ಬಿ.
ಪ್ರಾಂಶುಪಾಲರು, ಅಮರ ಜ್ಯೋತಿ ಇಂಗ್ಲಿಷ್ ಸ್ಕೂಲ್, ದೇವಸಂದ್ರ, ಕೆ.ಆರ್.ಪುರಂ, ಬೆಂಗಳೂರು.
5.ಶ್ರೀ ಗೋಪಿನಾಥ ಕೆ.ವಿ.
ಕೋಆರ್ಡಿನೇಟರ್ & ಮೆಂಟರ್ ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
6.ಕೆ.ಎಂ. ಮಧುಮಾಲತಿ,
ಸಹಶಿಕ್ಷಕಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪುಟ್ಟೇನಹಳ್ಳಿ, ಬೆಂಗಳೂರು
7.ಶ್ರೀಮತಿ ಸುಜಾತ ಸತೀಶ್
ಪ್ರಾಂಶುಪಾಲರು, ಲಿಯೋ ಕಿಡ್ಸ್, ಜ್ಞಾನ ಭಾರತಿ ಪ್ರೈಮರಿ & ಹೈ ಸ್ಕೂಲ್ ಬೆಂಗಳೂರು.
8.ಶ್ರೀ ಸತೀಶ ಎನ್.ಸಿ.,
ಸಹಾಯಕ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಬಿದರಹಳ್ಳಿ, ಬೆಂಗಳೂರು ದಕ್ಷಿಣ
9.ಶ್ರೀಮತಿ ವಿಜಯಲಕ್ಷ್ಮೀ ಎನ್. ಕೆ.
ಪ್ರಾಂಶುಪಾಲರು, ಜೆ ಎಸ್ ಪ್ರೀ-ಯೂನಿವರ್ಸಿಟಿ ಕಾಲೇಜು, ಬೆಂಗಳೂರು.
10.ಶ್ರೀ ರುದ್ರೇಗೌಡ ಎ.ಆರ್.,
ಸಹಶಿಕ್ಷಕ, ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆಗ್ಗನಹಳ್ಳಿ, ಬೆಂಗಳೂರು
11.ಸೀಮಾ ಕುಲ್ಸುಮ್
ಉಪ ಪ್ರಾಂಶುಪಾಲರು, ಐಸಿಎಸ್‌ಇ, ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್, ಬಾಣಸವಾಡಿ, ಬೆಂಗಳೂರು.
12.ಶ್ರೀ ಶ್ರೀಕಾಂತ ಭಟ್
ಸಂಸ್ಕೃತ ಅಧ್ಯಾಪಕರು, ಪ್ರಾರ್ಥನಾ ಶಾಲೆ, ಬೆಂಗಳೂರು
13. ಡಾ. ಶರ್ಲೆಟ್ (Dr Sharlet DSa)
ಪ್ರಾಂಶುಪಾಲರು, ಬ್ರೂಕ್ಲಿನ್ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿಜಯನಗರ, ಬೆಂಗಳೂರು.
14.ಜ್ಯೋತಿ ಕೆ.ಪಿ.,
ಉಪನ್ಯಾಸಕರು, ಸರ್ಕಾರಿ ಪದವಿಪೂರ್ವ ಕಾಲೇಜು, ಅಗರ, ಎಚ್.ಎಸ್.ಆರ್. ಬಡಾವಣೆ, ಬೆಂಗಳೂರು
15. ಲಲಿತಮ್ಮ ಬಿ.ಎನ್.,
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕೋಡಿ ಚಿಕ್ಕನಹಳ್ಳಿ, ಬೆಂಗಳೂರು
16. ಭಾರತಿ ಮಣೂರ,
ಸಹಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಜಾಲಹಳ್ಳಿ, ಬೆಂಗಳೂರು
17. ಶ್ರೀ ವಾಸು ಆರ್.
ಉಪ ಪ್ರಾಂಶುಪಾಲರು, ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು
18. ಶ್ರೀ ಮೋಹನ್ ಕುಮಾರ್ ಕೆ.,
ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಲೂರು, ತಾವರೆಕೆರೆ, ಬೆಂಗಳೂರು
19. ಕವಿತಾ ಎಚ್.
ದೈಹಿಕ ಶಿಕ್ಷಣ ಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜರಗನಹಳ್ಳಿ, ಜೆ.ಪಿ. ನಗರ, ಬೆಂಗಳೂರು
20.ಸುಧಾಮಣಿ ಎ,
ಸಹ ಶಿಕ್ಷಕರು, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಆಲಹಳ್ಳಿ, ಅಂಜನಾಪುರ, ಬೆಂಗಳೂರು
21.ಶ್ರೀಮತಿ ದೇವಿ ಎಂ.
ಪ್ರಾಂಶುಪಾಲರು ಕೇಂಬ್ರಿಡ್ಜ್ ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು
22.ಶ್ರೀ ಡಾ. ಸಿ. ಬಿ. ಶಶಿಧರ್
ಕಾರ್ಯದರ್ಶಿಗಳು, ಎಸ್.ಕೆ. ಸಮೂಹ ಶಿಕ್ಷಣ ಸಂಸ್ಥೆ, ಬೊಮ್ಮಸಂದ್ರ, ಅನೇಕಲ್, ಬೆಂಗಳೂರು.
23. ಶ್ರೀ ಎನ್.ನಂಜರಾಜೇ ಅರಸ್
ಶಿಕ್ಷಕರು, ಸೌಂದರ್ಯ ಸ್ಟೇಟ್ ಸ್ಕೂಲ್, ಹಾವನೂರು ಬಡಾವಣೆ, ಬೆಂಗಳೂರು
24. ವಿಜಯಲಕ್ಷ್ಮೀ ಆರ್.
ಉಪ ಪ್ರಾಂಶುಪಾಲರು, ಸಿಬಿಎಸ್‌ಇ, ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
25.ಶ್ರೀಮತಿ ಶಶಿಕಲಾ ಎಸ್ ಹಿರೇಮಠ
ಮುಖ್ಯ ಶಿಕ್ಷಕಿ, ಇಂಡಿಯನ್ ಪಬ್ಲಿಕ್ ಸ್ಕೂಲ್ ತುರುವೆಕೆರೆ, ತುಮಕೂರು ಜಿಲ್ಲೆ
26. ಶ್ರೀಮತಿ ಜಿ. ವೀಣಾ
ಶಿಕ್ಷಕರು, ಸೌಂದರ್ಯ ಸೆಂಟ್ರಲ್ ಸ್ಕೂಲ್, ಸಿದ್ದೇನಹಳ್ಳಿ, ಬೆಂಗಳೂರು
27.ಶ್ರೀ ನರೇಂದ್ರ ಎಂ., ಸಹಶಿಕ್ಷಕರು,
ಎನ್.ಕೆ.ಎಸ್.ಅನುದಾನಿತ ಪ್ರೌಢ ಶಾಲೆ, ಮೆಜೆಸ್ಟಿಕ್ ವೃತ್ತ, ಬೆಂಗಳೂರು
28. ಗಝಾಲ ಅಂಜುಮ್,
ಸಹ ಶಿಕ್ಷಕಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಹರಿನಗರ, ಬೆಂಗಳೂರು-62
29. ಮಂಗಳಮ್ಮ ಜಿ.,
ಹಿರಿಯ ಮುಖ್ಯ ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ, ಬೆಂಗಳೂರು ದಕ್ಷಿಣ ವಲಯ- 1
30. ಶೈಲಜಾ ಎಚ್.ಎನ್.
ಕೋಆರ್ಡಿನೇಟರ್ & ಮೆಂಟರ್ ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
31.ಸುಜಾತಮ್ಮ ಕೆ.ಎಂ.,
ಸಹಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೆರಟೇನ ಅಗ್ರಹಾರ, ಬೆಂಗಳೂರು ದಕ್ಷಿಣ ವಲಯ-3
32. ಧನ್ಯ ಕುಮಾರ ಎನ್.
ಪ್ರೌಢಶಾಲಾ ಸಹಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಚಿಕ್ಕಜಾಲ, ಬೆಂಗಳೂರು ಉತ್ತರ ವಲಯ
33. ಸಾವಿತ್ರಿ ಕೆ.ಎಸ್., ಸಹಶಿಕ್ಷಕಿ,
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬೈರಸಂದ್ರ, ಜಯನಗರ, ಬೆಂಗಳೂರು
34. ಪುಟ್ಟಲಕ್ಷ್ಮಮ್ಮ, ಕೆ.,
ಸರ್ಕಾರಿ ಪ್ರೌಢ ಶಾಲೆ, ಅಗ್ರಹಾರ ದಾಸರ ಹಳ್ಳಿ, ಬೆಂಗಳೂರು ಉತ್ತರ ವಲಯ
35. ಸವಿತಾ ಕೆ.ಎಲ್.,
ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಲಸಹಳ್ಳಿ, ಆನೆಕಲ್ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ
ವಿಶೇಷ ಗೌರವ ಪಡೆದ ಸಾಧಕರು
- ಶ್ರೀ ಮನೋಜ್ ಪಡಿಕ್ಕಲ್ ಸಿಇಒ, ಪಡಿಕ್ಕಲ್ ಟ್ರಾವೆಲ್ಸ್, ಬೆಂಗಳೂರು
- ಶ್ರೀ ಡಾ.ರಮೇಶ್ ಎ. ಡಫೋಡಿಲ್ಸ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿ, ಮಾಲೂರು, ಕೋಲಾರ
- ಡಾ. ಶಿಲ್ಪಾ ಎಚ್. ನವೀನ್, ಅಧ್ಯಕ್ಷರು, ಡಾ. ಶಿಲ್ಪಾ ಸಮನ್ವಯ್ ಫೌಂಡೇಷನ್ ಬೆಂಗಳೂರು