Site icon Vistara News

Vistara Follow up | ರಾಯಚೂರಿನ ಈ ಗ್ರಾಮಕ್ಕೆ ದೋಣಿಯೇ ಗತಿ; ಸೇತುವೆ ಕಟ್ಟಿಸಿಕೊಡಲು ಗ್ರಾಮಸ್ಥರ ಮೊರೆ

kurvakala raichur Bridge problem

ರಾಯಚೂರು: ‌ಸ್ವಾತಂತ್ರ್ಯ ಲಭಿಸಿ ೭೫ ವರ್ಷ ಕಳೆದರೂ ಈ ಗ್ರಾಮಕ್ಕೆ ಸಂಪರ್ಕವೇ ಇಲ್ಲ. ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ರಾಯಚೂರು ಜಿಲ್ಲೆಯ ಕುರ್ವಕಲಾ ಗ್ರಾಮದ ಜನರ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ೨೧ನೇ ಶತಮಾನದಲ್ಲಿಯೂ ಇವರು ಹಳೇ ಶತಮಾನಗಳ ಜನರಂತೆ ಬದುಕುವಂತಾಗಿದೆ. ನಗರಕ್ಕೆ ಬರಬೇಕೆಂದರೆ ನಡುಗಡ್ಡೆ ದಾಟಬೇಕು. ಇದಕ್ಕೆ ದೋಣಿಗಳೇ ಇನ್ನೂ ಆಸರೆಯಾಗಿದೆ. ಹೀಗಾಗಿ “ಮುಖ್ಯಮಂತ್ರಿಯವರೇ, ಒಮ್ಮೆ ಇತ್ತ ನೋಡಿ, ನಮಗೊಂದು ಸೇತುವೆ ಕಟ್ಟಿಸಿಕೊಡಿ” (Vistara Follow up) ಎಂದು ಕಣ್ಣೀರು ಇಟ್ಟಿದ್ದಾರೆ. ಈ ಬಗ್ಗೆ ವಿಸ್ತಾರ ನ್ಯೂಸ್‌ ವೀಕ್ಷಕ ವರದಿಯನ್ನು ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಶೀಘ್ರ ಸಮಸ್ಯೆ ಪರಿಹಾರ ಮಾಡುವತ್ತ ಗಮನಹರಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

kurvakala raichur Bridge problem

ಹೌದು, ಸರ್ಕಾರಗಳ ‌ನಿರ್ಲಕ್ಷ್ಯಕ್ಕೆ ಗಡಿಯಲ್ಲಿರುವ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ. ಕೃಷ್ಣ ನದಿಯ ನಡುಗಡ್ಡೆಯಲ್ಲಿರುವ ಕುರ್ವಕಲಾ ಗ್ರಾಮದಲ್ಲಿ ಇಂತಹ ದುಸ್ತರ ಸ್ಥಿತಿ ಇನ್ನೂ ಇದೆ. ರಾಯಚೂರು ನಗರದಿಂದ ಕೇವಲ 50 ಕಿ.ಮೀ. ದೂರದಲ್ಲಿದ್ದರೂ ಈ ಗ್ರಾಮದ ಜನರಿಗೆ ಸೂಕ್ತ ಸೌಲಭ್ಯ ಇಲ್ಲವಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌ ವೀಕ್ಷಕ ವರದಿಯನ್ನು ಪ್ರಕಟ ಮಾಡಿತ್ತು.

kurvakala raichur Bridge problem

೨೦೧೧ರಿಂದ ಸೇತುವೆ ಕಾಮಕಾರಿ ನನೆಗುದಿಗೆ
ಈ ಗ್ರಾಮಕ್ಕೆ ಸೇತುವೆ ಬೇಕು ಎಂಬ ಜನರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಸಹ 2011 ರಲ್ಲಿ 21.25 ಕೋಟಿ ರೂ. ವೆಚ್ಚದಲ್ಲಿ ಸೇತುವೆ ‌ನಿರ್ಮಾಣಕ್ಕೆ ಮುಂದಾಗಿತ್ತು. ಕಾಮಗಾರಿಯೂ ಪ್ರಾರಂಭವಾಗಿ ಪಿಲ್ಲರ್ ಅನ್ನು ಸಹ ಹಾಕಲಾಗಿತ್ತು. ಆದರೆ, ಒಂದು ಬಾರಿ ಪಿಲ್ಲರ್‌ ಹಾಕಿದ ಬಳಿಕ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಈ ಹಿನ್ನೆಲೆಯಲ್ಲಿ ಸತತ ೧೧ ವರ್ಷದಿಂದ ನದಿಯಲ್ಲಿ ಪಿಲ್ಲರ್‌ಗಳನ್ನು ಕಾಣಬಹುದಾಗಿದೆ. ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಸಾಕಷ್ಟು ಹೋರಾಟ ನಡೆಯಿತು. ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

kurvakala raichur Bridge problem

ಅಸ್ತು ಎಂದ ಉಸ್ತುವಾರಿ ಸಚಿವರು
ವೀಕ್ಷಕ ವರದಿ ಪ್ರಕಟವಾಗುತ್ತಿದ್ದಂತೆ ಈ ಬಗ್ಗೆ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, “ಈ ಬಗ್ಗೆ ಜಿಲ್ಲಾಡಳಿತದಿಂದ ವರದಿ ತರಿಸಿಕೊಳ್ಳುತ್ತಿದ್ದೇನೆ. ಜನರಿಗೆ ಸಂಕಷ್ಟ ಆಗುತ್ತಿರುವುದು ಅರಿವಿಗೆ ಬಂದಿದೆ. ಸಂಬಂಧಪಟ್ಟ ಸಚಿವರ ಬಳಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.

kurvakala raichur Bridge problem

ಇದನ್ನೂ ಓದಿ | Border dispute | ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಲ್ಲು ತೂರಾಟ; 150 ಬಸ್‌ಗಳ ಕಾರ್ಯಾಚರಣೆ ಸ್ಥಗಿತ

ಕುರ್ವಕಲಾ ಗ್ರಾಮದ ಸ್ಥಿತಿ ಏನು?
ಕುರ್ವಕಲಾ ಗ್ರಾಮಕ್ಕೆ ಒಂದು ಸಂಪರ್ಕ ಕಲ್ಪಿಸುವ ಸೇತುವೆಯನ್ನೂ ಮಾಡಿಕೊಡಲಾಗಿಲ್ಲ. ಅಗತ್ಯ ವಸ್ತುಗಳು ಬೇಕಿದ್ದರೆ, ಅನಾರೋಗ್ಯ ಎದುರಾದರೆ, ಇನ್ನೊಂದು ಕಡೆಗೆ ಹೋಗಿ ಬರಬೇಕಿದ್ದರೆ, ಪ್ರತಿ ನಿತ್ಯ ದೋಣಿಗಳ ಮೂಲಕವೇ ಸಾಗಬೇಕಿದೆ. ಕೃಷಿ ಚಟುವಟಿಕೆಯಲ್ಲಿ ತೊಡುಗುವಾಗ ಇಲ್ಲಿನ ಜನರಿಗೆ ಭಾರಿ ಕಷ್ಟ. ಕೃಷಿಗೆ ಸಂಬಂಧಪಟ್ಟ ಉಪಕರಣ ಸಾಗಾಟಕ್ಕೂ ದೋಣಿಗಳೇ ಆಸರೆಯಾಗಿದ್ದು, ಅವುಗಳ ಸಾಗಾಟವನ್ನು ಮಾಡುವುದೆಂದರೆ ಸಾಹಸವೇ ಸರಿ. ಇನ್ನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲೂ ನಡುಗಡ್ಡೆಯನ್ನು ದಾಟಬೇಕು. ಇವುಗಳನ್ನು ಸಾಗಿಸಲು ಇವರಿಗೆ ದೋಣಿಗಳೇ ಆಸರೆಯಾಗಿವೆ.

kurvakala raichur Bridge problem

ಆರೋಗ್ಯ ಕೇಂದ್ರವೂ ಇಲ್ಲಿಲ್ಲ
ಸಮಾಜದ ಕಟ್ಟ ಕಡೆಯ ಪ್ರಜೆಗೂ ಆರೋಗ್ಯ ಲಭ್ಯವಾಗಬೇಕೆಂದು ಹೇಳುವ ಸರ್ಕಾರಗಳು, ಜನಪ್ರತಿನಿಧಿಗಳು ಇತ್ತ ಗಮನವನ್ನೇ ಹರಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕುರ್ವಕಲಾ ಗ್ರಾಮದಲ್ಲಿ ಒಂದು ಆರೋಗ್ಯ ಕೇಂದ್ರವನ್ನೂ ತೆರೆಯಲಾಗಿಲ್ಲ. ಸರ್ವರಿಗೂ ಶಿಕ್ಷಣ ಸಿಗಬೇಕು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಮೂಲಭೂತ ಹಕ್ಕನ್ನಾಗಿ ಈಗಾಗಲೇ ಘೋಷಿಸಲಾಗಿದೆ. ಆದರೆ, ಇಲ್ಲಿನ ಮಕ್ಕಳಿಗೆ ಸರಿಯಾಗಿ ಸೇತುವೆ ಇಲ್ಲದ ಕಾರಣ ಪ್ರೌಢ ಶಾಲೆಗೆ ತೆರಳಲು ಸಮಸ್ಯೆಯಾಗಿದೆ. ನದಿ ದಾಟಲು ಜೀವ ಭಯದಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

kurvakala raichur Bridge problem

ಯುವಕರಿಗೆ ಸಿಗುತ್ತಿಲ್ಲ ವಧು
ಈ ಗ್ರಾಮದ ಯುವಕರಿಗೆ ಮತ್ತೊಂದು ಸಂಕಷ್ಟ ಎಂದರೆ ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ. ಈ ಊರಿನಲ್ಲಿ ಸರಿಯಾದ ಸೇತುವೆ ಇಲ್ಲ. ಇನ್ನು ತೊಂದರೆಯಾದರೆ ಯಾರು ಗತಿ? ಯಾರು ಹೊಣೆ ಎಂದೇ ಪ್ರಶ್ನೆ ಮಾಡುತ್ತಿದ್ದಾರೆ.

kurvakala raichur Bridge problem

ಇದನ್ನೂ ಓದಿ | ಲಂಚ ಪಡೆದ ತಹಶೀಲ್ದಾರ್‌ನನ್ನು ಹಿಡಿದುಕೊಟ್ಟ ಅರ್ಜಿದಾರರ ತಂದೆ ಹೃದಯಾಘಾತದಿಂದ ನಿಧನ

ಆಂಧ್ರ-ತೆಲಂಗಾಣಕ್ಕೆ ಜನರ ಗುಳೆ
ಸರ್ಕಾರಕ್ಕೆ ಪ್ರತಿ ಬಾರಿ ಮನವಿ ಸಲ್ಲಿಸುವ ಈ ಗ್ರಾಮದವರು ಬೇಸತ್ತು ಹೋಗಿದ್ದಾರೆ. ಈ ಕಾರಣದಿಂದಾಗಿ ತುತ್ತಿನ ಚೀಲ ಕಂಡುಕೊಳ್ಳಲು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರೆ ರಾಜ್ಯ ಆಂಧ್ರ ಪ್ರದೇಶ ಇಲ್ಲವೇ ತೆಲಂಗಾಣಗಳತ್ತ ಗುಳೆ ಹೋಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಹಲವು ಸಂಘಟನೆಯವರು ಸರ್ಕಾರದ ಮುಂದಿಟ್ಟಿದ್ದಾರೆ.

kurvakala raichur Bridge problem

ಸರ್ಕಾರ ಮಾಡಿಲ್ಲ ಸೂಕ್ತ ವ್ಯವಸ್ಥೆ
ನಾನು ಮದುವೆಯಾಗಿ ಕುರ್ವಕಲಾ ಗ್ರಾಮಕ್ಕೆ ಬಂದು 10 ವರ್ಷ ಆಯ್ತು. ತವರು ಮನೆಗೆ ಹೋಗಬೇಕು ಅಂದ್ರು ತುಂಬಾ ಕಷ್ಟವಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಅಂದರೆ ನಮಗೆ ಭಯ. ಹೊಳೆ ಬಂದರೆ ಏನು ಪರಿಸ್ಥಿತಿ ಎಂದು ನಮಗೆ ಭಯ ಆಗುತ್ತದೆ. ನಮ್ಮೂರಿಗೆ ಬ್ರಿಡ್ಜ್ ಆಗಬೇಕು. ನಮ್ಮೂರು ಚಂದ ಆಗಬೇಕು. ನಾವು ಬೆಳೆದ ಬೆಳೆಗಳಲ್ಲಿ ಏನೂ ಲಾಭ ಸಿಗುವುದಿಲ್ಲ. ಇದರಿಂದ ಹೊರಗಡೆ ದುಡಿಯಲು ಹೋಗಬೇಕು. ನಾವು ಮಕ್ಕಳನ್ನು ಶಾಲೆಗೆ ಕಳಿಸಲ್ಲ. ಹೊಳೆ ದಾಟುವ ಭಯದಿಂದ ಊರಲ್ಲಿ ಮಕ್ಕಳು ಉಳಿದುಕೊಂಡಿದ್ದಾರೆ. ರಾತ್ರಿ ಬರುವಾಗ ತಡವಾದರೆ, ದೋಣಿಗಳು ಸಹ ಇರಲ್ಲ. ದೋಣಿಗಳು‌ ಇಲ್ಲದಿದ್ದರೆ ರಾತ್ರಿ ಆಚೆ ದಂಡೆಯಲ್ಲಿ ಮಲಗಬೇಕು. ಸಂಜೆ 5 ಗಂಟೆ ಮೇಲೆ ಯಾರೂ ದೋಣಿಗಳು ಹಾಕಲ್ಲ. ಸರ್ಕಾರದವರು ಬಂದು ನಮ್ಮನ್ನು ಸ್ಥಳಾಂತರ ಆಗಿ ಎಂದು ಹೇಳುತ್ತಾರೆ. ನಾಲ್ಕು ಜನ ಇರುವ ಹಾಗೆ ಒಂದು ಮನೆ ಕೊಟ್ಟಿದ್ದಾರೆ. ನಾಲ್ಕು ಜನ ನಾವು ಸಣ್ಣ ರೂಮಿನಲ್ಲಿ ಹೇಗೆ ಬಾಳಬೇಕು? ಹೊಲ, ದನ-ಕರುಗಳು ಬಿಟ್ಟು ಹೇಗೆ ಹೋಗಲು ಆಗುತ್ತದೆ? ಅದರಲ್ಲೂ ಎಲ್ಲರಿಗೂ ಸರಿಯಾಗಿ ಮನೆಗಳು ಹಂಚಿಕೆ ಆಗಿಲ್ಲ ಎಂದು ಕುರ್ವಕಲಾ ಗ್ರಾಮದ ನಿವಾಸಿ ಸವಿತಾ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉಸ್ತುವಾರಿ ಸಚಿವರಿಂದ ಗ್ರಾಮಕ್ಕೆ ಸಿಗುವುದೇ ಕಾಯಕಲ್ಪ?
ಈಗ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜನರಿಗೆ ಆಶಾವಾದ ಎದುರಾಗಿದೆ. ಈ ಬಗ್ಗೆ ಗ್ರಾಮದ ಜನರನ್ನು ಪ್ರಶ್ನಿಸಿದಾಗ, ನಮಗೆ ಶೀಘ್ರ ಸಮಸ್ಯೆ ಇತ್ಯರ್ಥವಾದರೆ ಸಾಕು. ಸಚಿವರು ಭರವಸೆ ನೀಡಿರುವುದು ಸಂತಸವಾಗಿದೆ. ಶೀಘ್ರ ಮುಖ್ಯಮಂತ್ರಿಗಳೂ ಸಹ ಇತ್ತ ಗಮನಹರಿಸಿ ಸೇತುವೆಯನ್ನು ಕಟ್ಟಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Uniform civil code | ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಚಿಂತನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

Exit mobile version