Site icon Vistara News

ವಿಸ್ತಾರ ಗ್ರಾಮ ದನಿ: ಎಲೆಚುಕ್ಕಿ ರೋಗ; ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಹೇಳಿಕೆಗಳೇ ಬೋಗಸ್‌! ಇಲ್ಲಿದೆ ಪುರಾವೆ

Vistara Grama Dwani What is the government stand on leaf spot disease Arvind question

| ಅರವಿಂದ ಸಿಗದಾಳ್, ಮೇಲುಕೊಪ್ಪ
ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಸಂಕಷ್ಟಕ್ಕೆ ತಳ್ಳುತ್ತಿರುವ “ಅಡಿಕೆ ಎಲೆ ಚುಕ್ಕಿ ರೋಗ”ದ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಸರಕಾರಗಳು, ಜನಪ್ರತಿನಿಧಿಗಳು ತಮ್ಮ ವಿಭಿನ್ನ ಹೇಳಿಕೆಗಳ ಸರಮಾಲೆಯನ್ನೇ ಕಟ್ಟಿ ರೈತರನ್ನು ಯಾಮಾರಿಸುತ್ತಿದ್ದಾರೆಯೆ? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೂ ಇದೆ.

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಕೊಡಲ್ಪಟ್ಟ ಉತ್ತರಗಳು ಮತ್ತು ವಾಸ್ತವತೆಗೂ ಹೊಂದಾಣಿಕೆ ಆಗುತ್ತಿಲ್ಲ! ಸಾರ್ವಜನಿಕವಾಗಿ ಜನಪ್ರತಿನಿಧಿಗಳು ಹೇಳುವ ಮಾತುಗಳು, ಅದರ ಪತ್ರಿಕಾ ವರದಿಗಳು, ವಿಧಾನ ಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳು ಮತ್ತು ಅಡಿಕೆ ಬೆಳೆಗಾರರ ಸ್ವಂತ ಅನುಭವಗಳು… ಇವು ಒಂದಕ್ಕೊಂದು ತಾಳೆ ಆಗದ ಪ್ರಮೇಯಗಳಾಗಿವೆ!

ಸರ್ಕಾರ ಕೊಟ್ಟಿದ್ದ ಉತ್ತರ ಏನು?

ಕರ್ನಾಟಕ ವಿಧಾನ ಪರಿಷತ್, ದಿನಾಂಕ 13.02.2024. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 25. ಇದರಲ್ಲಿ (ಇ) ಕ್ರಮ ಸಂಖ್ಯೆಯ ಪ್ರಶ್ನೆ: “ಸದರಿ ಎಲೆ ಚುಕ್ಕಿ ಮತ್ತು ಹಳದಿ ರೋಗ ಬಾಧೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಹಾನಿಗೀಡಾಗಿರುವ ಅಡಿಕೆ ತೋಟಗಳ ಪುನಶ್ಚೇತನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?”

ಈಗಿನ ತೋಟಗಾರಿಕಾ ಸಚಿವರ ಉತ್ತರ:

“ಅಡಿಕೆ ಬೆಳೆಗಾರರಿಗೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಪ್ರತಿ ಫಲಾನುಭವಿಗೆ ಪ್ರತಿ ಹೆಕ್ಟೇರ್‌ಗೆ 4000 ರೂ.ಗಳಂತೆ 1.5 ಹೆಕ್ಟೇ‌ರ್‌ವರೆಗೆ 6000 ರೂ. ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದಡಿ 2023-24ನೇ ಸಾಲಿನಲ್ಲಿ 6250 ಹೆಕ್ಟೇರ್ ಪ್ರದೇಶಕ್ಕೆ 250 ಲಕ್ಷ ರೂ. ವಿನಿಯೋಗಿಸಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಉಚಿತವಾಗಿ ನೀಡಲಾಗಿರುತ್ತದೆ”.

ಹಿಂದಿನ ಸರ್ಕಾರದ ಹೇಳಿಕೆ ಏನು?

ರಾಜ್ಯದ ಹಿಂದಿನ ಸರಕಾರದ ಗೃಹ ಮಂತ್ರಿಗಳ ಹೇಳಿಕೆ ಅಕ್ಟೋಬರ್ 3, 2022ರಂದು ಪ್ರಕಟವಾಗಿರುವಂತೆ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು 8 ಕೋಟಿ ರೂಪಾಯಿಗಳಷ್ಟು ಅನುದಾನ ನಿಗದಿ ಮಾಡಿ, 4 ಕೋಟಿ ರೂಪಾಯಿಗಳನ್ನು ರೈತರಿಗೆ ವಿತರಿಸಲು, ಬಿಡುಗಡೆ ಮಾಡಲಾಗಿದೆ.

ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಎಲೆಚುಕ್ಕಿ ರೋಗದ ಬಗ್ಗೆ ಕೇಳಲಾದ ಪ್ರಶ್ನೆಗೆ ಸರ್ಕಾರ ನೀಡಿದ್ದ ಉತ್ತರ

ರೋಗ ನಿಯಂತ್ರಣಕ್ಕೆ, ಉತ್ತಮ ಗುಣಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು, ಪ್ರತಿ ಹೆಕ್ಟೇರ್‌ಗೆ 4000 ರೂ. ಅನುದಾನವನ್ನು, ಮೊದಲ ಸಿಂಪಡಣೆಗಾಗಿ 1.5 ಹೆಕ್ಟೇರ್ ತೋಟಗಾರಿಕೆ ಪ್ರದೇಶ ಮಿತಿಗೊಳಪಟ್ಟು ರೈತರಿಗೆ ಅನುದಾನ ಒದಗಿಸಲಾಗಿದೆ”.

ಈಗ ಹೇಳಿದ್ದೇನು?:

ಅಕ್ಟೋಬರ್ 22 ಮುಗಿದು, ಅಕ್ಟೋಬರ್ 23 ಮುಗಿದು, ಫೆಬ್ರವರಿ 24ಕ್ಕೆ ಬಂದು, ಈ ಬಗ್ಗೆ ವಾಸ್ತವ ವಿಚಾರವನ್ನು ಅಡಿಕೆ ಬೆಳೆಗಾರರ ಪರವಾಗಿ ವಿಧಾನ ಪರಿಷತ್ತಿನಲ್ಲಿ ಪ್ರಶ್ನಿಸಲಾಯಿತು. ಈಗಿನ ವಿಧಾನ ಪರಿಷತ್‌ನ ಚುಕ್ಕಿ ಗುರುತಿನ ಪ್ರಶ್ನೆಯ ಉತ್ತರದಲ್ಲಿ ಅಡಿಕೆ ಬೆಳೆಗಾರರಿಗೆ ಎಲೆ ಚುಕ್ಕೆ ರೋಗದ ನಿಯಂತ್ರಣೆಗಾಗಿ ಪ್ರತಿ ಫಲಾನುಭವಿಗೆ ಪ್ರತಿ ಹೆಕ್ಟೇರ್‌ಗೆ 4000 ರೂ. ಗಳಂತೆ 1.5 ಹೆಕ್ಟೇ‌ರ್‌ವರೆಗೆ 6000 ರೂ. ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು ನೀಡಲಾಗುತ್ತಿದೆʼʼ ಎಂದಿದೆ!

ಎರಡೂ ಸರಕಾರಗಳು ಔಷಧ ನೀಡಿದ್ದು ಸತ್ಯ, ಆದರೆ?

ವಾಸ್ತವವಾಗಿ ಸಲ್ಫರ್ ಮಿಲ್ಸ್ ಲಿಮಿಟೆಡ್ ಕಂಪನಿಯ Flo Max ಬ್ರಾಂಡಿನ ಹೆಕ್ಸಾಕೊನಾಜೋಲ್ ಔಷಧಿಯನ್ನು ಪ್ರತಿ ರೈತರಿಗೆ ಎರಡು ಲೀಟರ್‌ನಂತೆ ಉಚಿತವಾಗಿ ಕೊಡಲಾಗಿದೆ. ಇದರ MRP ಲೀಟರ್‌ಗೆ ₹563. ಎರಡು ಲೀಟರ್‌ಗೆ ಯಾವ ಕ್ಯಾಲಿಕ್ಯುಲೇಟರ್‌ನಲ್ಲಿ ಲೆಕ್ಕ ಹಾಕಿದರೂ ₹ 1,126 ಮಾತ್ರ. ಸರಕಾರವೇ ನೇರವಾಗಿ ಕಂಪನಿಯಿಂದ ಪಡೆದು, ತೋಟಗಾರಿಕೆ ಇಲಾಖೆ ಮೂಲಕ ಕೊಡುತ್ತಿರುವುದರಿಂದ ಯಾವುದೇ ಟ್ಯಾಕ್ಸ್, ಡ್ಯುಟಿ ಇಲ್ಲದೇನೆ ಕಂಪನಿಯಿಂದ ಪಡೆದು ರೈತರಿಗೆ ನೀಡುತ್ತಿರಬಹುದು ಅಲ್ಲವೆ? ಆಗ 1,126 ರೂ.ಗಿಂತ ಕಡಿಮೆ ಮೊತ್ತವಾಗುತ್ತದೆ. ಹೆಚ್ಚೆಂದರೆ ಎರಡು ಬಾಟಲಿಗೆ 600 ರೂ. ಆಗಬಹುದು!

ಅದು ಹೇಗೆ ನೋಡೋಣ

ಅದರ MRP 563 ರೂ. per ltr. ಆದರೆ, ಅದೇ ದಿನ ಹೆಕ್ಸಾಕೊನಾಸೋಲ್ ಆನ್‌ಲೈನ್‌ನಲ್ಲಿ MRP per ltr. 300 ರೂ. ಇತ್ತು!. ಆ 300ರೂ.ನಲ್ಲಿ ಲಾಭ, ಎಕ್ಸೈಜ್ ಡ್ಯುಟಿ, GST ಎಲ್ಲ ಸೇರಿತ್ತು. ಉಚಿತವಾಗಿ ಸರ್ಕಾರ ರೈತರಿಗೆ ಕೊಟ್ಟಿದ್ದರಿಂದ ಅದರ ನಿಜವಾದ ಬೆಲೆ, ಮಿನಿಮಮ್ ರೀಟೈಲ್ ಪ್ರೈಸ್, ಎಷ್ಟು ಗೊತ್ತಿಲ್ಲ. ಹೇಗೆ ಲೆಕ್ಕ ಹಾಕಿದರೂ 300 ರೂ. ಮೇಲಂತೂ ಇರುವುದಿಲ್ಲ! ಎರಡು ಬಾಟಲಿಗೆ 600 ರೂ. ದಾಟಲು ಸಾಧ್ಯವೇ ಇಲ್ಲ!

ಈ ವರ್ಷದ ಆರಂಭದಲ್ಲಿ, ಈಗಿನ ಸರಕಾರದಿಂದ ಅದೇ ಬೆಲೆಯ ಎರಡು ಬಾಟಲಿ ಪ್ರೋಪಿಕೊನಾಸೋಲ್ ಔಷಧಿಯನ್ನು ಎಲೆಚುಕ್ಕಿಗಾಗಿ ಉಚಿತವಾಗಿ ರೈತರಿಗೆ ಕೊಡಲಾಯಿತು. ಅಲ್ಲಿಗೆ ಒಟ್ಟು ಮೊತ್ತ 1,200 ರೂ. ಮೌಲ್ಯದ ಔಷಧಿಯನ್ನು ಕೊಡಲಾಗಿದೆ.

ಘೋಷಣೆಯಾದ ಮತ್ತು ವಿತರಣೆ ಆಗಿದೆ ಎಂದು ಹೇಳಲಾದ ಹೆಕ್ಟೇರ್‌ಗೆ 4,000 ರೂ.ದಂತೆ ಒಂದೂವರೆ ಹೆಕ್ಟೇರ್‌ಗೆ 6,000 ರೂ. ಕೊಡುವಲ್ಲಿ ಕೇವಲ 1,200 ರೂ. ಮೌಲ್ಯದ ನಾಲ್ಕು ಬಾಟಲಿ ಔಷಧಿ ಮಾತ್ರ ಎರಡು ವರ್ಷದಲ್ಲಿ ಕೊಡಲಾಗಿದೆ. ಇದು ರಿಯಾಲಿಟಿ ಚೆಕ್ ಫ್ಯಾಕ್ಟ್. 6,250 ಹೆಕ್ಟೇರ್‌ಗೆ ಔಷಧಿ ಕೊಡಲಾಗಿದೆ ಎಂದಿದೆ. ಅಲ್ಲಿಗೆ ಔಷಧಿ ಕೊಟ್ಟಿರುವುದು 75 ಲಕ್ಷ ರೂ. ಮಾತ್ರ ಆಗುತ್ತದೆಯಲ್ಲ?‌

ಆ ಹಣಗಳೆಲ್ಲ ಎಲ್ಲಿ ಹೋದವು?

ಹಾಗಾದರೆ, ವಿಧಾನ ಪರಿಷತ್‌ನಲ್ಲಿ ದಾಖಲಾದ, ಹಿಂದಿನ/ಇಂದಿನ ಸಚಿವರು ಹೇಳಿಕೆಯಲ್ಲಿ ನೀಡಿದ “ಪ್ರತಿ ಹೆಕ್ಟೇರ್‌ಗೆ 4,000 ರೂ. ಎಲ್ಲಿ ಹೋಯಿತು? ₹ 4,000 – ₹1,200 ಅಂದರೂ ಪ್ರತಿ ಹೆಕ್ಟೇರ್‌ನ 2,800 ರೂ. ಎಲ್ಲಿ ಹೋಯಿತು?
ಅದೇ ಲೆಕ್ಕದಲ್ಲಿ ಈಗಿನ ಸಚಿವರು ಕೊಟ್ಟ ಚುಕ್ಕಿ ಪ್ರಶ್ನೆಯ ಉತ್ತರದಲ್ಲಿನ ಬಿಡುಗಡೆಯಾದ 250 ಲಕ್ಷ (ಅಥವಾ 2.5 ಕೋಟಿ) ಏನಾಯ್ತು? 75 ಲಕ್ಷದ ಔಷಧಿ ವಿತರಣೆ ಆಗಿದೆ ಎಂದು ಭಾವಿಸಿದರೂ, 1.75 ಕೋಟಿ ರೂ. ಎಲ್ಲಿದೆ? ಇದೇ ಉಚಿತ ಔಷಧಿ ಲೆಕ್ಕಕ್ಕೆ, ಹಿಂದಿನ ಸರ್ಕಾರದಲ್ಲಿ ಸಚಿವರು ಬಿಡುಗಡೆ ಮಾಡಿದ 4 ಕೋಟಿಯ ಕತೆ ಏನು? ಅದರಲ್ಲೂ 75 ಲಕ್ಷ ಕಳೆದರೆ, 3.25 ಕೋಟಿ ರೂ. ಕತೆ ಏನು?

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ವಿಚಾರ ಬಂದಾಗ ಜನಪ್ರತಿನಿಧಿಗಳು ಕೈಕಟ್ಟಿಕೊಂಡು ಮೌನವಾಗುವುದೇಕೆ?

ಸಚಿವರುಗಳು (ಈಗಿನ ಸರಕಾರದ ಮತ್ತು ಹಿಂದಿನ ಸರಕಾರದ) ಹೇಳಿದ್ದು, ಅಧಿಕಾರಿಗಳು ಸಚಿವರಿಗೆ ಕೊಟ್ಟ ಲೆಕ್ಕ? ಮಾಧ್ಯಮ ವರದಿಗಳು, ವಿಧಾನ ಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಕೊಟ್ಟ ಉತ್ತರ, ವಾಸ್ತವವಾಗಿ ರೈತರಿಗೆ ಉಚಿತವಾಗಿ ಸಿಕ್ಕ ಔಷಧಿಗಳ ಮೇಲಿನ ಬೆಲೆ ಯಾವುದೂ ಒಂದಕ್ಕೊಂದು ಟ್ಯಾಲಿ ಆಗುವುದಿಲ್ಲ!
ಎಲ್ಲೋ ಒಂದಿಷ್ಟು ಸುಳ್ಳುಗಳಿವೆ! ಹೆಕ್ಸಾಕೊನಾಸೋಲ್, ಪ್ರಾಪಿಕೊನಾಸೋಲ್ ಔಷಧಿಗಳ ಲೆಕ್ಕದಲ್ಲಿ ಏನೋ ವಾಸನೆ ಸ್ಪಷ್ಟವಾಗಿ ಬರ್ತಾ ಇದೆ!

Exit mobile version