ಕೋಲಾರ: ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳಾ ಸಿಬ್ಬಂದಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಜಿಲ್ಲಾ ಆಯುಷ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಆಯುಷ್ ಇಲಾಖೆ ಆದೇಶ ಹೊರಡಿಸಿದೆ. ಅಧಿಕಾರಿಯಿಂದ ಸಿಬ್ಬಂದಿ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ವಿಶೇಷ ವರದಿ (Vistara Impact) ಪ್ರಸಾರ ಮಾಡುವ ಮೂಲಕ ವಿಸ್ತಾರ ನ್ಯೂಸ್, ಮೇಲಧಿಕಾರಿಗಳ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿರುವ ಆಯುಷ್ ಇಲಾಖೆ, ಇದೀಗ ಜಿಲ್ಲಾ ಆಯುಷ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.
ಡಾ. ರಮೇಶ್ ಚಂದ್ರ ಆರ್.ಜಿ ವರ್ಗಾವಣೆಗೊಂಡ ಜಿಲ್ಲಾ ಆಯುಷ್ ಅಧಿಕಾರಿ. ಆಯುಷ್ ಇಲಾಖೆಯಲ್ಲಿ ಮಹಿಳಾ ವೈದ್ಯರು ಸೇರಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ ಅಧಿಕಾರಿ, ಅಟ್ರಾಸಿಟಿ ಪ್ರಕರಣ ದಾಖಲಿಸುವ ಬೆದರಿಕೆ ಕೂಡ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿಯಿಂದ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಕಳೆದ ಆರೇಳು ತಿಂಗಳುಗಳಿಂದ ಅಧಿಕಾರಿಯ ಕಿರುಕುಳದಿಂದ ಆಯುಷ್ ಇಲಾಖೆಯ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿದ್ದರು. ಹೀಗಾಗಿ ನೊಂದ ಸಿಬ್ಬಂದಿ ಕೋಲಾರದ ವಿಸ್ತಾರ ನ್ಯೂಸ್ ವರದಿಗಾರರನ್ನು ಸಂಪರ್ಕಿಸಿ ನೋವು ತೋಡಿಕೊಂಡಿದ್ದರು. ನಂತರ ಸಿಬ್ಬಂದಿ ಸಮಸ್ಯೆ ಬಗ್ಗೆ ವಿಸ್ತಾರ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಆಯುಷ್ ಇಲಾಖೆ, ತಕ್ಷಣದಿಂದಲೇ ಡಾ.ರಮೇಶ್ ಚಂದ್ರರವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ | Hemant Nimbalkar: ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಸುರಳ್ಕರ್ ವಿಕಾಸ್ ಕಿಶೋರ್ ನೇಮಕ; ಹೇಮಂತ್ ನಿಂಬಾಳ್ಕರ್ ವರ್ಗಾವಣೆ
ಆದೇಶದಲ್ಲಿ ವಿಸ್ತಾರ ನ್ಯೂಸ್ ವರದಿ ಬಗ್ಗೆ ಉಲ್ಲೇಖ
ಆಯುಷ್ ಇಲಾಖೆ ಸಿಬ್ಬಂದಿ ಸಮಸ್ಯೆ ಬಗ್ಗೆ ವಿಸ್ತಾರ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ವಿಸ್ತಾರ ವಾಹಿನಿಯಲ್ಲಿ ಪ್ರಸಾರವಾಗಿರುವ ವರದಿ ಮೇರೆಗೆ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಆಯುಷ್ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಮಸ್ಯೆ ಬಗ್ಗೆ ಶೀಘ್ರವಾಗಿ ಸ್ಪಂದಿಸಿ ಮೇಲಧಿಕಾರಿಗಳ ಗಮನಕ್ಕೆ ತರಲು ನೆರವಾದ ವಿಸ್ತಾರ ನ್ಯೂಸ್‌ಗೆ ಆಯುಷ್ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಅಭಿನಂದನೆ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಕೋಲಾರ ಜಿಲ್ಲಾ ಆಯುಷ್ ಅಧಿಕಾರಿ ಡಾ.ರಮೇಶ್ ಚಂದ್ರ ಆರ್.ಜಿ. ಅವರನ್ನು ಅನ್ಯಸೇವೆಗೆ ನೇಮಿಸಿ ಆಯುಷ್ ಇಲಾಖೆ ಆದೇಶ ಹೊರಡಿಸಿದೆ. ಮಾರ್ಚ್ 27ರಂದು ವಿಸ್ತಾರ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿರುವ ದೂರಿನ ಅನ್ವಯ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಲಾಗಿದೆ.
ಜಿಲ್ಲಾ ಆಯುಷ್ ಕಚೇರಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ. ರಮೇಶ್ ಚಂದ್ರ ಆರ್.ಜಿ ವಿರುದ್ಧ ಮಾರ್ಚ್ 27ರಂದು ವಿಸ್ತಾರ ಸುದ್ದಿ ವಾಹಿನಿಯಲ್ಲಿ ಅಕ್ರಮ ಆರೋಪಗಳು ಹಾಗೂ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಡಾ. ರಮೇಶ್ ಚಂದ್ರ ಆರ್.ಜಿ. ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಯುಷ್ ಆಸ್ಪತ್ರೆಗೆ ಅನ್ಯಸೇವೆಯ ಮೇರೆಗೆ ಕಾರ್ಯನಿರ್ವಹಿಸಲು ನೇಮಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ | KPSC: ಕೆಪಿಎಸ್‌ಸಿಯಲ್ಲಿ ನೇಮಕಾತಿ ಕಡತವೇ ನಾಪತ್ತೆ! ಅಕ್ರಮದ ಸಾಕ್ಷಿ ಅದರಲ್ಲಿತ್ತು!
ಅದೇ ರೀತಿ ಕೋಲಾರದ ಜಿಲ್ಲಾ ಆಯುಷ್ ಕಚೇರಿಯ ಜಿಲ್ಲಾ ಆಯುಷ್ ಅಧಿಕಾರಿ ಸ್ಥಾನಕ್ಕೆ ಕೋಲಾರ ಜಿಲ್ಲೆಯ ಸೀಸಂದ್ರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಶೆಟ್ಟಿಗಾರ್ ಅವರನ್ನು ಹೆಚ್ಚುವರಿ ಪ್ರಭಾರರಾಗಿ ಕಾರ್ಯನಿರ್ವಹಿಸಲು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.