ಚಾಮರಾಜನಗರ: ನಾವು ನೀವೆಲ್ಲ ಸೂಪರ್ ಫಾಸ್ಟ್ ರೈಲು, ವಿಮಾನಗಳನ್ನು ನೋಡುತ್ತಿರುವ ಕಾಲದಲ್ಲಿ, ಆ ಪುಟ್ಟ ಗ್ರಾಮದ ಜನರು, ಮಕ್ಕಳು ಬಸ್‌ನ ಮುಖವನ್ನೇ ನೋಡಿರಲಿಲ್ಲ. ಶಾಲೆಗೆ ಹೋಗಬೇಕು ಎಂದರೆ ಬಿಸಿಲಾದರೂ ಇರಲಿ, ಧಾರಾಕಾರವಾಗಿ ಮಳೆಯೇ ಸುರಿಯುತ್ತಿರಲಿ, ಹತ್ತಾರು ಕಿಲೋ ಮೀಟರ್ ನಡೆದೆ ಹೋಗಬೇಕಿತ್ತು. ಹೀಗಾಗಿ ಆ ಎಲ್ಲ ಮಕ್ಕಳು ವಿಸ್ತಾರ ನ್ಯೂಸ್ (Vistara Impact) ಮೂಲಕ ನೇರವಾಗಿ ಸಿಎಂಗೆ ಒಕ್ಕೊರಲ ಬೇಡಿಕೆಯನ್ನು ಇಟ್ಟರು. ಈಗ ಅವರ ಸಂಭ್ರಮಕ್ಕೆ ಪಾರವೇ ಇಲ್ಲ.
ಪುಟಾಣಿ ಮಕ್ಕಳ ಬೇಡಿಕೆಯನ್ನು ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ಈ ವರದಿ ಪ್ರಸಾರವಾದ 24 ಗಂಟೆ ಒಳಗೆ ಗ್ರಾಮಕ್ಕೆ ಬಸ್ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.
ಕೆಎಸ್‌ಆರ್‌ಟಿಸಿ ಬಸ್ ಕಂಡ ಕೂಡಲೇ ಇಡೀ ಗ್ರಾಮದ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಿಟಿ ಜಿಟಿ ಮಳೆಯ ನಡುವೆಯೂ ಮಕ್ಕಳು ಬಸ್ ಕಂಡು ಕುಣಿದು ಕುಪ್ಪಳಿಸಿದರು. ಬಳಿಕ ಗ್ರಾಮಸ್ಥರು ಸಹ ಸಂತಸ ವ್ಯಕ್ತಪಡಿಸಿದ್ದು, ಬಸ್‌ಗೆ ಬಾಳೆ ಕಂಬವನ್ನು ಕಟ್ಟಿ, ಪೂಜೆ ಸಲ್ಲಿಸಿದರು. ಜತೆಗೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹೂವು ನೀಡಿ ಬರಮಾಡಿಕೊಂಡರು.
ಇಲ್ಲಿನ ಹನೂರು ಗ್ರಾಮಕ್ಕೆ ಸಿಎಂ ಭೇಟಿ ಹಿನ್ನೆಲೆ ಶಾಲಾ ಮಕ್ಕಳು ಬಸ್ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದರು. ಮುದ್ದಾದ ಸರ್ಕಾರಿ ಶಾಲಾ ಮಕ್ಕಳು ʻʻಸಿಎಂ ಅಂಕಲ್ ನಮಗೆ ಶಾಲೆಗೆ ಹೋಗಲು ಬಸ್ ಇಲ್ಲ. ನೀವು ನಮ್ಮೂರಿಗೆ ಬಂದಾಗ ಬಸ್ ಸೌಲಭ್ಯದ ಘೋಷಣೆ ಮಾಡಬೇಕು. ಇಲ್ಲ ಅಂದರೆ ನಾವು ಯಾರೂ ಶಾಲೆಗೆ ಹೋಗುವುದಿಲ್ಲʼʼ ಎಂದು ಹನೂರಿನ ಬುಡಕಟ್ಟು ಸೋಲಿಗ ಮಕ್ಕಳು (CM Basavaraja bommai) ಹಠ ಹಿಡಿದಿದ್ದರು.
ನಿತ್ಯಾ ಹತ್ತಾರು ಕಿಲೋಮೀಟರ್ ಕಾಲ್ನಡಿಗೆ
ಊರಿಗೆ ಬಸ್ ಸಂಪರ್ಕ ಇಲ್ಲದ ಕಾರಣ ಶಾಲೆಗೆ ಹೋಗಬೇಕಾದರೆ ನಿತ್ಯ 6 ಕಿ.ಮೀ ನಡೆದುಕೊಂಡು ಹೋಗಿ ಬರಬೇಕು. ಮಳೆ, ಚಳಿ, ಬಿಸಿಲು ಏನಿದ್ದರೂ ತೂಕದ ಬ್ಯಾಗ್ ಹೊತ್ತುಕೊಂಡು ಹೋಗಬೇಕು. ನಡೆದುಕೊಂಡು ಹೋಗುವಾಗ ಮಳೆಗಾಲದಲ್ಲಂತೂ ಶಾಲಾ ಬ್ಯಾಗ್, ಬಟ್ಟೆ ಎಲ್ಲ ನೆನೆದುಕೊಂಡೆ ಹೋಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಜತೆಗೆ ನಡೆದಾಡುವ ಸುತ್ತಮುತ್ತ ಕಾಡು ಇರುವುದರಿಂದ ಕಾಡು ಪ್ರಾಣಿಗಳ ಭಯವೂ ಇದೆ. ಈ ತನಕ ನಾವು ಬಸ್‌ನ್ನೇ ಕಂಡಿಲ್ಲ ಎಂದು ಮಕ್ಕಳು ಬೇಸರದಿಂದ ಹೇಳಿದ್ದರು.
ರಸ್ತೆ ಚೆನ್ನಾಗಿದೆ. ಆದರೆ ಬಸ್ ಇಲ್ಲ ಎಂದು ಹನೂರು ತಾಲೂಕಿನ ಅರೆಕಡುವಿನದೊಡ್ಡಿ, ಕಂಬಿದೊಡ್ಡಿ ಸೋಲಿಗರ ಮಕ್ಕಳ ಅಳಲು ತೊಡಿಕೊಂಡಿದ್ದರು. 6 ರಿಂದ 10ನೇ ತರಗತಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳು, ಬೈಲೂರು ಶಾಲೆಗೆ ಹೋಗಬೇದಾರೆ ನಡಿಗೆಯಲ್ಲಿ ತಲುಪಬೇಕಿತ್ತು. ಹೀಗಾಗಿ ಊರಿಗೆ ಬಂದಾಗ ಬಸ್ ಸೌಲಭ್ಯವನ್ನು ಘೋಷಣೆ ಮಾಡುವಂತೆ ಮಕ್ಕಳು ಪಟ್ಟುಹಿಡಿದಿದ್ದರು. ಇದೀಗ ಸರ್ಕಾರ ಮಕ್ಕಳ ಬೇಡಿಕೆಯನ್ನು ಈಡೇರಿಸಿದೆ.
ಇದನ್ನೂ ಓದಿ | Kantara Movie | ಕಾಂತಾರವನ್ನು ಕೊಂಡಾಡಿದ ಬಾಲಿವುಡ್ ನಟ ಹೃತಿಕ್ ರೋಷನ್!