Site icon Vistara News

Rajyotsava Awards : ವಿಸ್ತಾರ ಕಾಯಕಯೋಗಿ ಪ್ರಶಸ್ತಿ ಪಡೆದ ಹುಚ್ಚಮ್ಮ ಚೌದ್ರಿಗೆ ರಾಜ್ಯೋತ್ಸವ ಪುರಸ್ಕಾರ

Huchchamma Chowdri koppala Rajyotsava Awards

ಬೆಂಗಳೂರು: ರಾಜ್ಯ ಸರ್ಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ (Rajyotsava Awards) ಪ್ರಕಟಿಸಿದ್ದು, ಒಟ್ಟು 68 ಮಂದಿ ಸಾಧಕರು ಹಾಗೂ 10 ಸಂಸ್ಥೆಗಳನ್ನು ಗುರುತಿಸಿ ಗೌರವಿಸಿದೆ. 2022ರ ನವೆಂಬರ್‌ನಲ್ಲಿ ನಡೆದ ವಿಸ್ತಾರ ಸಾಹಿತ್ಯ ಸಂಭ್ರಮ (Vistara Sahithya Sambhrama)ದಲ್ಲಿ ಕಾಯಕ ಯೋಗಿ ಪ್ರಶಸ್ತಿ (Kayakayogi Award) ಪಡೆದವರಲ್ಲಿ ಒಬ್ಬರಾದ ಕೊಪ್ಪಳದ ಹುಚ್ಚಮ್ಮ ಚೌದ್ರಿ (Huchchamma Chowdri Koppala) ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಹುಚ್ಚಮ್ಮ ಚೌದ್ರಿ

ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ಹುಚ್ಚಮ್ಮ ಚೌದ್ರಿ ಅವರು ಬಿಸಿಯೂಟ ತಯಾರಕಿ. ಇವರು ಮಕ್ಕಳ ಶಿಕ್ಷಣಕ್ಕಾಗಿ ಎರಡು ಎಕರೆ ಭೂಮಿ ದಾನ ಮಾಡಿದವರು. ಪರರ ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಿ, ಅವರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಮಹಾತಾಯಿ.

ಹುಚ್ಚಮ್ಮ ಚೌದ್ರಿ ಅವರು ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪಡೆದ ಕ್ಷಣ

ಹುಚ್ಚಮ್ಮ ಚೌದ್ರಿ ಅವರು ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ಇವರು ತಮ್ಮೂರ ಶಾಲೆಗೆ ಲಕ್ಷಾಂತರ ರೂ. ಬೆಲೆಬಾಳುವ ಎರಡು ಎಕರೆ ಸ್ವಂತ ಭೂಮಿಯನ್ನು ದಾನ ಮಾಡಿ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. 40 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಹುಚ್ಚಮ್ಮ ಚೌದ್ರಿ ಅವರಿಗೆ ಮಕ್ಕಳಿಲ್ಲ. ಅನಾಥ ಹೆಣ್ಣು‌ ಮಗುವನ್ನು ಸಾಕಿ ಸಲಹುತ್ತಿದ್ದಾರೆ‌. ಜತೆಗೆ ಶಾಲೆಯ ಎಲ್ಲ ಮಕ್ಕಳು ತಮ್ಮ ಮಕ್ಕಳು ಎಂಬ ಭಾವನೆಯಿಂದ ನೋಡುತ್ತ, ಅವರ ಕಲಿಕೆಯನ್ನು ನೋಡಿ ತಾವು ಖುಷಿಪಡುತ್ತಿದ್ದಾರೆ.

ಅನಕ್ಷರಸ್ಥೆಯಾಗಿರುವ ಹುಚ್ಚಮ್ಮ ಭೂದಾನ ಮಾಡಿದ ಶಾಲೆಯಲ್ಲಿಯೇ ಬಿಸಿಯೂಟ ಯೋಜನೆಯ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. 60 ವರ್ಷವಾಗಿದ್ದರಿಂದ ಅವರಿಗೆ ನಿವೃತ್ತಿ ನೀಡಲಾಗಿದ್ದರೂ, ಇವರ ಕಾಯಕ ನಿಂತಿಲ್ಲ. ಮಕ್ಕಳ ಮೇಲಿನ ಪ್ರೇಮದಿಂದ ಸೇವೆ ಮುಂದುವರಿಸಿದ್ದಾರೆ. ಈ ನಿಜ ಶಿಕ್ಷಣ ಪ್ರೇಮಿಯನ್ನು ಗುರುತಿಸಿ ವಿಸ್ತಾರ ನ್ಯೂಸ್‌ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ರಾಜ್ಯ ಸರ್ಕಾರವೂ ಅವರ ಸೇವೆಯನ್ನು ಗೌರವಿಸಿ ಪುರಸ್ಕರಿಸಿದೆ.

ಇದನ್ನೂ ಓದಿ: Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಪತ್ರಿಕಾ ವಿತರಕರ ಶ್ರಮ ಗುರುತಿಸಿ ಗೌರವಿಸಿದ ರಾಜ್ಯ ಸರ್ಕಾರ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದಿಂದ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇಡಿ ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿದೆ, ಗೌರವಿಸಿದೆ. ತುಮಕೂರಿನಲ್ಲಿ ಇತ್ತೀಚಿಗೆ ಜರುಗಿದ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ್ದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು, “ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಪತ್ರಿಕಾ ವಿತರಕರನ್ನೂ ಪರಿಗಣಿಸಲಾಗುವುದು” ಎನ್ನುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಜವರಪ್ಪ ಅವರು ಕೆ.ಆರ್‌. ಮೊಹಲ್ಲಾದ ಮೇದರಕೇರಿ ನಿವಾಸಿಯಾಗಿದ್ದಾರೆ. ಇವರು ಕಳೆದ 56 ವರ್ಷಗಳಿಂದ ಮನೆಗೆ ಮನೆಗೆ ಸೈಕಲ್‌ ಮೂಲಕವೇ ಹೋಗಿ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಇವರಿಗೆ ಮತ್ತು ಮೂವರು ಮಕ್ಕಳಿದ್ದಾರೆ.

Exit mobile version