ಶಿರಸಿ: ಕೆರೆ ಹೆಬ್ಬಾರ್ ಎಂದೇ ಪ್ರಸಿದ್ಧರಾಗಿರುವ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ, ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಈಗ ಜೈನ ಮಠದ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.
ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ತಾಲೂಕಿನ ಸೋಂದಾ ಜೈನ ಮಠ ಸಮೀಪದ ಕೆರೆಯ ಹೂಳೆತ್ತಲು ಶ್ರೀನಿವಾಸ ಹೆಬ್ಬಾರ್ ಅವರು ಮುಂದಾಗಿದ್ದು, ಭಾನುವಾರ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಕೆಲಸಕ್ಕೆ ಚಾಲನೆ ನೀಡಿದರು.
ಸುಮಾರು 30 ಗುಂಟೆ ಜಾಗದಲ್ಲಿ ಹರಡಿಕೊಂಡಿರುವ ಕೆರೆ ಅಭಿವೃದ್ಧಿಯಿಂದ ಹತ್ತಾರು ಎಕರೆ ಅಡಿಕೆ ತೋಟ, ಭತ್ತದ ಗದ್ದೆಗೆ ನೀರಾವರಿ ಅನುಕೂಲ ಆಗಲಿದೆ. ಈ ಬಗ್ಗೆ ಶ್ರೀನಿವಾಸ ಹೆಬ್ಬಾರ್ ಅವರ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಾನುಷ್ಠಾನಕ್ಕೆ ಮುಂದಾಗಿದ್ದಾರೆ. ಜೈನ ಮಠದ ಗುರುಗಳ ಆಶೀರ್ವಾದದೊಂದಿಗೆ ಶ್ರೀನಿವಾಸ ಹೆಬ್ಬಾರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ, ಟ್ರ್ಯಾಕ್ಟರ್ ಬಳಸಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದೇ ವೇಳೆ ಮಾತನಾಡಿದ ಶ್ರೀನಿವಾಸ ಹೆಬ್ಬಾರ್, ಶಿರಸಿ ಜೀವಜಲ ಕಾರ್ಯಪಡೆಯಿಂದ ಹಲವಾರು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಈಗ ಜೈನ ಮಠದ ಆವರಣದಲ್ಲಿರುವ ಕೆರೆ ಹೂಳೆತ್ತುವ ಕಾರ್ಯ ಆರಂಭವಾಗಿದೆ. ಅಂದಾಜು 30-35 ಅಡಿ ಹೂಳು ಇರುವ ಸಾಧ್ಯತೆಯಿದೆ. ಹಿಟಾಚಿಯ ಮೂಲಕ ಸ್ವಚ್ಛಗೊಳಿಸುವ ಕೆಲಸ ಆಗಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಪಿ. ಹೆಗಡೆ ವೈಶಾಲಿ, ನಾಗರಾಜ ಶೆಟ್ಟಿ, ಅಶೋಕ ಭಟ್ಟ ಮುಂತಾದವರು ಇದ್ದರು.
ನೀರಿನ ಮೂಲವನ್ನು ಉಳಿಸಿಕೊಳ್ಳೋಣ-ಹೆಬ್ಬಾರ್
ಹಲವು ಕೆರೆಗಳನ್ನು ಸ್ವಚ್ಛಗೊಳಿಸಿದ ನಂತರ ತ್ಯಾಜ್ಯವನ್ನು ಆ ನೀರಿಗೆ ಬಿಡಲಾಗುತ್ತಿದೆ. ಅದನ್ನು ಮಾಡದೇ ನೀರಿನ ಮೂಲವನ್ನು ಎಲ್ಲರೂ ಸರಿಯಾಗಿ ಉಳಿಸಿಕೊಂಡು ಹೋಗಬೇಕು. ಕೆರೆ ಹೂಳೆತ್ತುವುದರಿಂದ ಸಮೀಪದ ಜಮೀನುಗಳಿಗೆ ಅನುಕೂಲ ಆಗಲಿದೆ. ಅಲ್ಲದೆ, ಅಂತರ್ಜಲ ಮಟ್ಟದಲ್ಲೂ ಸುಧಾರಣೆಯನ್ನು ಕಾಣಬಹುದಾಗಿದೆ. ಎಲ್ಲರಿಂದಲೂ ಹೆಚ್ಚೆಚ್ಚು ಈ ರೀತಿಯ ಸಾಮಾಜಿಕ ಕೆಲಸ ಆಗಬೇಕು ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.