ʻʻನಮ್ಮೂರ ಶಾಲೆ… ನಮ್ಮೆಲ್ಲರ ಶಾಲೆʼʼ ಇದು ʻವಿಸ್ತಾರ ನ್ಯೂಸ್ʼನ ಸಾಮಾಜಿಕ ಕಳಕಳಿಯ ಅಭಿಯಾನ (Vistara Campaign). ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದೇ ನಮ್ಮ ಗುರಿ. ಸಮಾಜ ಸೇವಕರು, ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶ. ಇದಕ್ಕಾಗಿ ಈಗಾಗಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ʻಬಾಲ್ ಉತ್ಸವ್ʼ ಸಂಸ್ಥೆಯ ಸಹಯೋಗದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ.
ನ್ಯೂಸ್ ಚಾನೆಲ್ ಆರಂಭದ ಸಂದರ್ಭದಲ್ಲಿಯೇ ಅಂದಿನ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರಿಂದ ಈ ಅಭಿಯಾನ ಚಾಲನೆ ಪಡೆಯಿತು. ಕುಡಚಿ ಮಾಜಿ ಶಾಸಕ ಪಿ.ರಾಜೀವ್ ಅವರು ತಾವು ಓದಿದ, ಸೊರಬ ತಾಲೂಕಿನ ಕುಪ್ಪಗಡ್ಡೆ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವ ಪಣತೊಟ್ಟು, ಈ ಶಾಲೆಯನ್ನು ಆಂದೋಲನದ ಉದ್ಘಾಟನೆಯ ದಿನದಂದೇ ದತ್ತು ಪಡೆದುಕೊಂಡಿದ್ದರು.
ಕಳೆದ ಜನವರಿಯಲ್ಲಿ ವಿಧಾನಸೌಧದಲ್ಲಿ ನಡೆದ ಶಿಕ್ಷಣ ತಜ್ಞರ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಅಭಿಯಾನ ಜಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಅನುಷ್ಠಾನಕ್ಕೆ ತರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಸ್ತಾರ ನ್ಯೂಸ್ ಮತ್ತು ಬಾಲ ಉತ್ಸವ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.
ಪ್ರೊ. ಎಂ. ಆರ್. ದೊರೆಸ್ವಾಮಿ, ಡಾ. ಎಂ. ಆರ್. ಜಯರಾಂ ಸೇರಿದಂತೆ ಶಿಕ್ಷಣ ಕ್ಷೇತ್ರದ ಅನೇಕ ಗಣ್ಯರು, ಶಾಸಕರು, ಮಾಜಿ ಸಚಿವರು, ನಾಡಿನ ಹೆಸರಾಂತ ಉದ್ಯಮಿಗಳು, ಕನ್ನಡ ನಟ-ನಟಿಯರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಮ್ಮ ಈ ಆಂದೋಲನದ ಭಾಗವಾಗಿದ್ದಾರೆ ಎಂಬುದು ನಮ್ಮ ಹೆಮ್ಮೆ.
ವಿಸ್ತಾರ ವಾಹಿನಿಯು ತನ್ನ ಈ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರ ಮೂಲಕ ಜನರರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದೆ. ನಮ್ಮ ಸಾಮಾಜಿಕ ಕಳಕಳಿಗೆ ನಟಿಯರಾದ ಪ್ರಣೀತಾ ಸುಭಾಷ್, ಪ್ರಿಯಾಂಕಾ ಉಪೇಂದ್ರ, ಪೂಜಾ ಗಾಂಧಿ ಸಹ ಸಾಥ್ ನೀಡಿದ್ದಾರೆ. ಅಲ್ಲದೇ 300 ಕ್ಕೂ ಅಧಿಕ ಎಪಿಸೋಡ್‌ಗಳ ಮೂಲಕ ʻನಮ್ಮೂರ ಶಾಲೆ… ನಮ್ಮೆಲ್ಲರ ಶಾಲೆʼ ಅಭಿಯಾನವು ಜನರಿಗೆ ಸಮಾಜ ಸೇವೆಗೆ ಪ್ರೇರಣೆ ನೀಡುತ್ತಾ ಬರುತ್ತಿದೆ.
ಇದೇ ರೀತಿ ಈ ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಅನು ಎಂಬುವರ ಕಾರ್ಯವನ್ನು ಮೆಚ್ಚಿ, ಅವರ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನವನ್ನೂ ವಿಸ್ತಾರ ವಾಹಿನಿ ಅಕ್ಟೋಬರ್ 10 ರಂದು ಮಾಡಿದೆ. ವಿಸ್ತಾರ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯ ತುಣುಕನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಆರಂಭದಲ್ಲಿ ಶೇರ್ ಮಾಡಿಕೊಂಡ ಅನು ಅವರು ನಂತರ ತಮ್ಮ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅನ್ನುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ಈ ಕಾರ್ಯಕ್ರಮದ ಕೊನೆಯಲ್ಲಿ ತೋರಿಸಲಾಗುವ ಬಾಲ ಉತ್ಸವ್ ಎನ್ಜಿಓದ ʻಚೈಲ್ಡ್ ಎಂಪವರ್ಮೆಂಟ್ ಫೌಂಡೇಷನ್ʼನ ಅಕೌಂಟ್ಗೆ ಬಹಳಷ್ಟು ಅಭಿಮಾನಿಗಳು ಹಣ ಕಳಿಸಿ ಸ್ಕ್ರೀನ್ ಶಾಟ್ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಪಡೆಯುತ್ತಿದ್ದಾರೆ ಎಂದೆಲ್ಲ ದೂರಿದ್ದಾರೆ.
ಆದರೆ, ನಾವು ಅನು ಅವರ ಹೆಸರಲ್ಲಿ ಎಲ್ಲಿಯೂ ಯಾರಲ್ಲೂ ಹಣ ಕೇಳಿಲ್ಲ. ದಾನಿಗಳು ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಅಭಿಯಾನಕ್ಕೆ ಹಣ ನೀಡೋ ಉದ್ದೇಶವಿದ್ದರೆ ಸ್ವಯಂಪ್ರೇರಿತರಾಗಿ ಕೊಡಬಹುದೇ ವಿನಃ ಯಾರನ್ನೂ ನಾವು ಕೇಳುವುದಿಲ್ಲ. ಅದರಂತೆ ಚೈಲ್ಡ್ ಎಂಪವರ್ಮೆಂಟ್ ಅಕೌಂಟ್ಗೆ ಅನು ಅವರ ಅಭಿಮಾನಿ ಎನ್ನಲಾದ ಏಕೈಕ ವ್ಯಕ್ತಿಯೊಬ್ಬರಿಂದ 10 ಸಾವಿರ ರೂ. ಜಮೆಯಾಗಿದ್ದು ಅದನ್ನ ಅವರದೇ ಅಕೌಂಟ್ಗೆ ರಿಟರ್ನ್ ಮಾಡಿಸಲಾಗಿದೆ.
ಅನು ಅವರಿಗೆ ಈ ಬಗ್ಗೆ ಖುದ್ದು ವಾಹಿನಿಯಿಂದಲೇ ಸ್ಪಷ್ಟನೆ ನೀಡಿದ ನಂತರವೂ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಿತ ವಿಸ್ತಾರ ನ್ಯೂಸ್ ಗೌರವಕ್ಕೆ ಚ್ಯುತಿ ಬರುವಂತಹ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವಂತಹ ವಿಚಾರವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದು, ಅನು ಅವರಿಗೆ ಲೀಗಲ್ ನೋಟಿಸ್ ಕಳಿಸಲಾಗಿದೆ. ಸಮಾಜದ ಅಭಿವೃದ್ಧಿಗಾಗಿ ಹಾಗೂ ಜಾಗೃತಿಗಾಗಿ ಮಾಡುವ ಉತ್ತಮ ಕಾರ್ಯವನ್ನ ಅರ್ಥ ಮಾಡಿಕೊಳ್ಳದೆ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಪ್ರಚಾರದ ಹಪ ಹಪಿಗಾಗಿ ಒಂದು ವ್ಯವಸ್ಥೆಯನ್ನೇ ದೂರುವ ಇಂತಹವರ ಪೋಸ್ಟ್ಗಳು ವಿಶ್ವಾಸಾರ್ಹವಲ್ಲ. ಹಾಗಾಗಿ ಯಾರಿಗಾದರೂ ಈ ವಿಚಾರದಲ್ಲಿ ಯಾವುದೇ ಅನುಮಾನಗಳಿದ್ದಲ್ಲಿ ನೇರವಾಗಿ ʻವಿಸ್ತಾರ ನ್ಯೂಸ್ʼ ಕಚೇರಿಯನ್ನ ಸಂಪರ್ಕಿಸಬಹುದು.
ಇನ್ನು ವಿಸ್ತಾರ ವಾಹಿನಿಯ ಕೊನೆಯ ಸ್ಪಷ್ಟೋಕ್ತಿ ಏನೇಂದರೆ ಶ್ರೇಷ್ಠವಾದ ದಾನ ವಿದ್ಯಾದಾನ ಎಂಬ ಮಾತಿನಂತೆ ಸರ್ಕಾರಿ ಶಾಲೆಯಲ್ಲಿ ಕಲಿವ ನಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಯಾವುದೇ ಸ್ವಹಿತಾಸಕ್ತಿ ಅಥವಾ ಲಾಭದ ನಿರೀಕ್ಷೆಯೂ ಇಲ್ಲದೇ ಕೈ ಗೊಂಡಿರೋ ಅಭಿಯಾನ ʻʻನಮ್ಮೂರ ಶಾಲೆ… ನಮ್ಮೆಲ್ಲರ ಶಾಲೆʼʼ ಈ ಅಭಿಯಾನ ಇಡೀ ದೇಶಕ್ಕೆ ಮಾದರಿಯ ಕಾರ್ಯಕ್ರಮ ಎಂಬುದು ನಮ್ಮ ವಾಹಿನಿಯ ಹೆಮ್ಮೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಮತ್ತೊಬ್ಬರ ಹೆಸರು ಬಳಸಿಕೊಂಡು ಹಣವನ್ನ ಪಡೆಯುವ ಅನಿವಾರ್ಯವಾಗಲಿ ಅಥವಾ ಅಗತ್ಯವಾಗಲಿ ವಿಸ್ತಾರ ವಾಹಿನಿಗೆ ಎಂದಿಗೂ ಇಲ್ಲ.
ಸಮಾಜದ ಗಣ್ಯರೇ ನಮ್ಮ ಈ ಸಮಾಜಿಕ ಜವಾಬ್ದಾರಿಯನ್ನ ಮನಸಾರೆ ಕೊಂಡಾಡಿ ಬೆನ್ನುತಟ್ಟಿ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಿರುವಾಗ ವಾಹಿನಿಯ ಸಾಮಾಜಿಕ ಅಭಿಯಾನಕ್ಕೆ ತಮ್ಮ ಹೆಸರನ್ನ ಬಳಸಿಕೊಂಡು ಹಣ ಪಡೆಯಲಾಗಿದೆ ಎಂಬ ಆರೋಪ ಮಾಡಿರುವ ಸನ್ಮಾನ್ಯ `ಅನು ಅಕ್ಕ’ರಿಗೆ ಈ ಕುರಿತು ಸಾಮಾನ್ಯ ಜ್ಞಾನವಿದ್ದರೆ ಒಳಿತು ಎಂಬುದು ನಮ್ಮ ಕಳಕಳಿ.
ಕೊನೆಯದಾಗಿ ನೆನಪಿರಲಿ ʻವಿಸ್ತಾರ ನ್ಯೂಸ್ʼ ಎಂದೆಂದಿಗೂ ನಿಖರ ಮತ್ತು ಜನಪರ.