ಶ್ರೀ ಆರ್.ಕೆ ಬಾಲಚಂದ್ರ ಅವರ ಕಿರು ಪರಿಚಯ ಇಲ್ಲಿದೆ;
ಆರ್. ಕೆ. ಬಾಲಚಂದ್ರ ಅವರು ಕನ್ನಡಿಗರಿಗೆ ಬ್ಯಾಂಕಿಂಗ್ ಪರೀಕ್ಷೆ ಉಚಿತ ತರಬೇತಿ ನೀಡಿದವರು. ಬ್ಯಾಂಕ್ ಸೇರಿದಂತೆ ಕೇಂದ್ರ ಸರ್ಕಾರದ ಹುದ್ದೆಗಳನ್ನು ಕನ್ನಡಿಗರೂ ಪಡೆಯುವಂತಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರು ಹಿಂದೆ ಬೀಳಬಾರದು ಎಂಬ ಕಾಳಜಿಯನ್ನು ಹೊತ್ತವರು ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಆರ್.ಕೆ. ಬಾಲಚಂದ್ರ. ಕಳೆದ 40 ವರ್ಷಗಳಿಂದ ವಿವಿಧ ಬ್ಯಾಂಕ್ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳನ್ನು ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ, ಗ್ರಾಮೀಣ ಭಾಗದ ಅಭ್ಯರ್ಥಿಗಳನ್ನು ಉಚಿತ ತರಬೇತಿ ಮೂಲಕ ಸಜ್ಜುಗೊಳಿಸಿದ ಖ್ಯಾತಿ ಇವರದು(Vistara News Launch).
ಬಿಡುವಿನ ವೇಳೆಯನ್ನೆಲ್ಲಾ ಅಭ್ಯರ್ಥಿಗಳ ತರಬೇತಿಗೆ ಮೀಸಲಿಟ್ಟ ಶ್ರೀ ಬಾಲಚಂದ್ರ ಇದುವರೆಗೆ ಮಾರ್ಗದರ್ಶನ ಮಾಡಿದ ಅಭ್ಯರ್ಥಿಗಳ ಸಂಖ್ಯೆ 4 ಲಕ್ಷಕ್ಕೂ ಹೆಚ್ಚು. ಕೊಡಗಿನ ಲೀಡ್ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಇವರು ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ತರಬೇತಿ ಕಾರ್ಯಾಗಾರ, ಉಪನ್ಯಾಸ ನಡೆಸಿಕೊಟ್ಟಿದ್ದಾರೆ. ಇವರು ಕೆಲಸ ಮಾಡುತ್ತಿದ್ದ ಕಾರ್ಪೋರೇಷನ್ ಬ್ಯಾಂಕ್ ʼಸೋಶಿಯಲ್ ಬ್ಯಾಂಕಿಂಗ್ ಹೀರೋʼ ಎಂದು ಪ್ರಶಂಸಿಸಿದೆ.
ಇವರು ಚಿಕ್ಕಮಗಳೂರಿನಲ್ಲಿ ಕಟ್ಟಿದ ಸ್ವ ಉದ್ಯೋಗ ತರಬೇತಿ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ. ಕನ್ನಡದ ಕಾಯಕ ಮಾಡುತ್ತಿರುವ ಶ್ರೀ ಆರ್. ಕೆ. ಬಾಲಚಂದ್ರ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್ ಸಿದ್ಧತೆಗೆ ಮೆಚ್ಚುಗೆ