Site icon Vistara News

Vistara News Launch | ವಿಸ್ತಾರ ಪ್ರತಿ ಕನ್ನಡಿಗನ ಧ್ವನಿಯಾಗಲಿದೆ: ಹರಿಪ್ರಕಾಶ್‌ ಕೋಣೆಮನೆ

hariprakash konemane

ಬೆಂಗಳೂರು: ವಿಸ್ತಾರ ನ್ಯೂಸ್‌ ಕನ್ನಡ ಟಿವಿ ವಾಹಿನಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಕನ್ನಡಿಗನ ಧ್ವನಿಯಾಗಲಿದೆ ಎಂದು ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಕಾರ್ಯದರ್ಶಿ ಹರಿಪ್ರಕಾಶ್‌ ಕೋಣೆಮನೆ ನುಡಿದರು.

ಕನ್ನಡ ಕೇವಲ ಆಡುವ ಭಾಷೆಯಲ್ಲ, ಅದೊಂದು ಸಂಸ್ಕೃತಿ, ಅದೊಂದು ಜನಜೀವನ. ಶ್ರೇಷ್ಠ ಸಂಸ್ಕೃತಿಯಿಂದಾಗಿಯೇ ಅದು ಜಗತ್ತಿನಲ್ಲಿ ಛಾಪನ್ನು ಮೂಡಿಸಿದೆ. ಖ್ಯಾತಿ ಗಳಿಸಿದೆ. ಈ ಶ್ರೇಷ್ಠ ಸಂಸ್ಕೃತಿಯನ್ನು ಮೆರೆಸಬೇಕು ಎನ್ನುವುದೇ ʼವಿಸ್ತಾರ ಕನ್ನಡ ಸಂಭ್ರಮʼದ ಉದ್ದೇಶ.

ʼಕಾಯಕ ಯೋಗಿ ಪುರಸ್ಕಾರʼ ಎಂಬುದು ಕಾಯಕ ಮಾಡುವವರು ಮತ್ತು ಯೋಗಿಗಳ ಸಮ್ಮಿಲನ. ನಡೆಯುವವನ ಹಿಂದೆ ಗುರು, ಮುಂದೆ ಗುರಿ ಇರಬೇಕು ಎಂಬುದು ಆರ್ಷವಾಕ್ಯ. ನಮ್ಮ ಹಿಂದೆ ಗುರು ಪರಂಪರೆಯಿದೆ. ಕಾಯಕಯೋಗಿಗಳೇ ನಮ್ಮ ಗುರುಗಳು. ಇವರೇ ಆದರ್ಶ. ಕೃಷಿ ಉದ್ಯಮ ಶಿಕ್ಷಣ ಸೇರಿದಂತೆ ಈ ಸಮಾಜದ ಎಲ್ಲ ಕ್ಷೇತ್ರಗಳು ಇದ್ದರೆ ರಾಜ್ಯವನ್ನು ಸಶಕ್ತವಾಗಿ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಶ್ರೇಷ್ಠ ಸಾಧಕರ ಸಮ್ಮುಖದಲ್ಲಿ ನಾವು ಸಂಕಲ್ಪ ಮಾಡುತ್ತಿದ್ದೇವೆ. ಕರ್ನಾಟಕದ ಹಿರಿಮೆ ಎಲ್ಲ ಸಾಧಕರ ಪರಿಶ್ರಮದ ಫಲ. ನಮಗದು ಅಡಿಪಾಯವಾಗಿದೆ. ಹೀಗಾಗಿ ಇದೊಂದು ಸಾಂಕೇತಿಕ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ನಾಡಿಗಾಗಿ ಬದುಕಿದ, ಒಳಿತಿಗಾಗಿ ಕೆಲಸ ಮಾಡಿದ ಎಲ್ಲರನ್ನೂ ಮಾಧ್ಯಮವಾಗಿ ನಾವು ಗೌರವಿಸುತ್ತೇವೆ. ಈ ಪಯಣ ನಿತ್ಯ ನಿರಂತರವಾಗಿರಲಿದೆ ಎಂದು ಕೋಣೆಮನೆ ನುಡಿದರು.

ಮಾಧ್ಯಮದ ಕೆಲಸ ಈ ಸಮಾಜದ ಎಲ್ಲ ಸ್ತರಗಳಲ್ಲಿ ಒಂದಾಗಿ ಅದರ ಟೀಕೆ ಟಿಪ್ಪಣಿ, ವಿಶ್ಲೇಷಣೆ ಮಾಡುವುದು. ನಮಗೆ ಹೊಣೆಗಾರಿಕೆ ಇದೆ. ಈ ಹೊಣೆಗಾರಿಕೆಯ ಪ್ರಜ್ಞೆ ನಮಗೆ ಬರುವುದು ಎಲ್ಲಿಂದ ಎಂದು ಮೂಲಭೂತವಾಗಿ ಆಲೋಚನೆ ಮಾಡಿದ್ದೇವೆ, ವ್ಯಕ್ತಿಯಿಂದ ಸಮಾಜ, ಸಮಾಜದಿಂದ ರಾಜ್ಯ, ರಾಜ್ಯದಿಂದ ದೇಶ ಎಂಬ ಪರಿಕಲ್ಪನೆ ನಮ್ಮದು. ಹೀಗಾಗಿ ಹತ್ತರ ನಡುವೆ ಇನ್ನೊಂದು ಚಾನೆಲ್‌ ನಮ್ಮದಾಗಿ ಉಳಿಯುವುದಿಲ್ಲ. ನಮಗೆ ಬರುತ್ತಿರುವ ಅಭಿನಂದನೆ, ಬೆನ್ನು ತಟ್ಟುವಿಕೆಯೇ ನೀವು ನಮ್ಮಲ್ಲಿ ನಂಬಿಕೆ ಇಟ್ಟಿದ್ದೀರಿ ಎಂದು ಸೂಚಿಸುತ್ತದೆ. ಜನತೆಯ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡುವ ಭರವಸೆಯನ್ನು ನಮ್ಮ ತಂಡ ನೀಡುತ್ತದೆ. ನಾಡಿನ ಎಲ್ಲರ ಆಶಯಗಳೊಂದಿಗೆ ಸ್ಪಂದಿಸುವ ಸಂಕಲ್ಪ ನಮ್ಮದು ಎಂದು ನುಡಿದರು.

ʼವಿಸ್ತಾರʼ ಎಂದರೆ ವಿಶಾಲ ವೃಕ್ಷ. ನಾವು ನಾಡಿನ ಜನತೆಗೆ ನೆರಳಾಗಿ ನಿಲ್ಲಲಿದ್ದೇವೆ. ಡಿಜಿಟಲ್‌ ಮಾಧ್ಯಮ ಭವಿಷ್ಯದ ಮಾಧ್ಯಮವಾಗಿದ್ದು, ಅದರ ಮೂಲಕ ಪ್ರತಿಯೊಬ್ಬ ಕನ್ನಡಿಗನ ಮನೆಗೆ ಮುಟ್ಟುವ ಕೆಲಸವನ್ನು ಮಾಡಲಿದ್ದೇವೆ. ನಮ್ಮ ನಡೆ ನುಡಿ ಅತ್ಯಂತ ಪಾರದರ್ಶಕವಾಗಿದೆ. ನಮ್ಮ ಹೂಡಿಕೆದಾರರು ಯಾರು, ನಮ್ಮ ತಂಡ ಯಾವುದು, ಎಷ್ಟು ಹೂಡಿಕೆಯಿದೆ ಎಲ್ಲ ವಿವರವನ್ನೂ ಸಾರ್ವಜನಿಕ ಡೊಮೈನ್‌ನಲ್ಲಿ ಇಟ್ಟಿದ್ದೇವೆ, ಹಾಗೆ ಇಟ್ಟ ಮೊದಲ ಮಾಧ್ಯಮ ನಮ್ಮದು. ಆ ನಿಟ್ಟಿನಲ್ಲಿ ಪಾರದರ್ಶಕತೆ ಮೆರೆದಿದ್ದೇವೆ. ಮುಂದೆಯೂ ಹಾಗೇ ನಡೆದುಕೊಳ್ಳಲಿದ್ದೇವೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ, ಶ್ರೀ ಮಾದಾರ ಚೆನ್ನಯ್ಯ ಗುರುಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ವಿಸ್ತಾರ ಮೀಡಿಯಾದ ಎಂಡಿ ಹಾಗೂ ಚೇರ್ಮನ್‌ ಎಚ್.ವಿ ಧರ್ಮೇಶ್‌, ನಿರ್ದೇಶಕ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ಟಿವಿಯ ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ಜನಪದ ಸಂಭ್ರಮದೊಂದಿಗೆ ಉಲ್ಲಾಸದ ಆರಂಭ

Exit mobile version