ಬೆಂಗಳೂರು: ಮಾಧ್ಯಮಗಳು ಸಮಾಜಕ್ಕೆ ಗುರುವಾಗಿಯೂ ಕೆಲಸ ಮಾಡಬಹುದು ಅಥವಾ ಕಿರುಕುಳ ನೀಡುವ ನಿಟ್ಟಿನಲ್ಲಿಯೂ ಕೆಲಸ ಮಾಡಬಹುದು. ಸಮಾಜಕ್ಕೆ ಸದಭಿರುಚಿಯಾದಂತಹ ಸುದ್ದಿಯನ್ನು ಬಿತ್ತರಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ವಿಸ್ತಾರ ನ್ಯೂಸ್ (Vistara news launch) ತಂಡಕ್ಕೆ ನಾನು ಶುಭಕೋರುತ್ತೇನೆ. ಈ ಚಾನೆಲ್ ನಂಬರ್ ೧ ಸ್ಥಾನಕ್ಕೆ ಏರಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹಾರೈಸಿದರು.
ವಿಸ್ತಾರ ನ್ಯೂಸ್ ಚಾನೆಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜಕೀಯ ಪಕ್ಷಗಳು ಮೂರು ಇದ್ದರೂ, ಸುದ್ದಿ ಚಾನೆಲ್‌ಗಳು ನೂರಾರು ಇವೆ. ಈ ಚಾನೆಲ್ ನಂಬರ್ ಒನ್ ಸ್ಥಾನಕ್ಕೆ ಬರಬೇಕೆಂದರೆ ನೂರು ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಆ ತಾಳ್ಮೆ, ಪರಿಶ್ರಮ ಇರಲಿ, ಆ ಮೂಲಕ ನಂಬರ್ ಒನ್ ಸ್ಥಾನ ತಲುಪಲಿ, ಜನರ ಸಹಕಾರವೂ ಸಿಗಲಿ ಎಂದು ಆರ್. ಅಶೋಕ್ ಶುಭ ಹಾರೈಸಿದರು.
ವಿಭಿನ್ನವಾಗಿ ಮೂಡಿಬರಲಿ
ಈಗಾಗಲೇ ವಿಸ್ತಾರ ಪ್ರಾರಂಭದ ನುಡಿಯಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಕೂಗುವುದಕ್ಕಿಂತ, ಧ್ವನಿಯನ್ನು ಎತ್ತರ ಮಾಡುವುದಕ್ಕಿಂತ ವಿಚಾರವು ಮುಖ್ಯವಾಗಿ ಇರಬೇಕು. ಜನರಿಗೆ ಅದರಿಂದ ಏನು ಸಹಾಯ ಆಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ನಡುವೆ ಸುದ್ದಿ ಮಾಧ್ಯಮಗಳಲ್ಲಿ ಕೂಗಾಟವೇ ಹೆಚ್ಚಾಗಿದೆ. ಈ ಸುದ್ದಿ ಸಂಸ್ಥೆ ಭಿನ್ನವಾಗಿ ಮೂಡಿಬರಲಿ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Vistara News Launch | ಮಾಧ್ಯಮಗಳಿಗೆ ವಿಸ್ತಾರ ನ್ಯೂಸ್ ಮೇಲ್ಪಂಕ್ತಿ ಆಗಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ
ಬಂಡೆ ಬಗ್ಗೆ ಅಶೋಕ್ ಪ್ರಸ್ತಾಪ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಾಯಲ್ಲಿ ವೇದ, ಉಪನಿಷತ್ತು ಬಂದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ರಾಜಕಾರಣಿಗಳು ರಸ್ತೆ ಮಧ್ಯೆ ನಿಂತಿರುತ್ತಾರೆ. ಅಲ್ಲಿ ಹಾರವನ್ನೂ ಹಾಕಲಾಗುತ್ತದೆ. ಕಲ್ಲನ್ನೂ ಹೊಡೆಯಲಾಗುತ್ತದೆ. ಆದರೆ, ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು. ಇಲ್ಲದಿದ್ದರೆ ರಾಜಕಾರಣಕ್ಕೆ ಬರಲೇಬಾರದು. ಶಿವಕುಮಾರ್ ಅವರಿಗೆ ಬಂಡೆ.. ಬಂಡೆ ಎಂದು ಹೇಳಲಾಗುತ್ತದೆ. ಬಂಡೆಗಳನ್ನು ಕೆತ್ತಿದಾಗ ಶಿಲ್ಪಿಯಾಗುತ್ತದೆ ಎಂಬ ಉತ್ತರವನ್ನೂ ಕೊಡುತ್ತಾರೆ. ಹೀಗಾಗಿ ನಾವು ವಿಚಾರಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.
ಸಂಪಾದಕರಿಂದ ಉತ್ತಮ ಸಲಹೆ ಪಡೆಯುವೆ
ನಾನು ಮಾಧ್ಯಮಗಳ ಹಲವಾರು ಸಂಪಾದಕರ ಸಂಪರ್ಕದಲ್ಲಿದ್ದೇನೆ. ಆದರೆ, ಅವರ ಸಲಹೆಗಳನ್ನು ಯಾವ ಸಮಯದಲ್ಲಿ ಹಾಗೂ ಯಾವ ಕಾರಣಕ್ಕಾಗಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾನು ಗ್ರಾಮ ವಾಸ್ತವ್ಯ ಮಾಡಬೇಕಿದ್ದಾಗ ಹಲವು ಸಂಪಾದಕರ ಸಲಹೆಗಳನ್ನು ಕೇಳಿದ್ದೆ. ಅವರು ಕೊಟ್ಟಂತಹ ಸಲಹೆಗಳು ನನಗೆ ಬಹಳವೇ ಉಪಯುಕ್ತವಾಯಿತು. ಆ ಮೂಲಕ ನಾವು ಜನರನ್ನು ಹೇಗೆ ತಲುಪಬಹುದು, ಅವರ ಸಮಸ್ಯೆಗಳಿಗೆ ಹೇಗೆ ಉತ್ತರವಾಗಬಹುದು ಎಂಬುದನ್ನು ಕಂಡುಕೊಂಡಿದ್ದೇನೆ ಎಂದು ಆರ್. ಅಶೋಕ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಹಲವರು ಮೃತದೇಹವನ್ನು ತೆಗೆದುಕೊಂಡು ಹೋಗಲೂ ಬಂದಿರುವುದಿಲ್ಲ. ಕೊನೆಗೆ ಅಸ್ಥಿಯನ್ನೂ ಪಡೆದುಕೊಂಡು ಹೋಗಿಲ್ಲದ ಸಂದರ್ಭವೂ ಇದೆ. ಈ ವಿಷಯವಾಗಿಯೂ ನಾನು ಮಾಧ್ಯಮಗಳ ಸಂಪಾದಕರ ಬಳಿ ಚರ್ಚೆ ನಡೆಸಿ ಅವರಿಂದ ಉಪಯುಕ್ತ ಸಲಹೆಗಳನ್ನು ಪಡೆದುಕೊಂಡಿದ್ದೇನೆ ಎಂದು ಅಶೋಕ್ ತಿಳಿಸಿದರು.
ಇದನ್ನೂ ಓದಿ | Vistara News Launch | ವಿಸ್ತಾರನ್ಯೂಸ್ ನಾಡಿಗೆ ಬೆಳಕಾಗಲಿ ಎಂದು ಹಾರೈಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ