Site icon Vistara News

Vistara News: ಇಂದು ಅನಾವರಣಗೊಳ್ಳಲಿದೆ ವಿಸ್ತಾರ ನ್ಯೂಸ್‌ನ ಲೋಗೊ ಮತ್ತು ವೆಬ್‌ಸೈಟ್‌

Digital MEdia

ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಬಹು ನಿರೀಕ್ಷೆ ಹೊಂದಿರುವ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಲೋಗೊ ಮತ್ತು ವಿಸ್ತಾರ ನ್ಯೂಸ್‌ ವೆಬ್‌ ಸೈಟ್‌ ಅನಾವರಣ ಕಾರ್ಯಕ್ರಮ ಇಂದು (ಜುಲೈ 23) ನಡೆಯಲಿದೆ.

ಮಾಧ್ಯಮಕ್ಕೆ ಹೊಸ ರೂಪ ನೀಡುವ ಉದ್ದೇಶ, ನಿಖರ ಮತ್ತು ಜನಪರ ಸುದ್ದಿಯನ್ನು ಒದಗಿಸುವ ಧ್ಯೇಯ ಮತ್ತು ಸತ್ಯವನ್ನು ಎತ್ತಿ ಹಿಡಿಯುವ, ಸರ್ವ ಜನರ ಆಶೋತ್ತರಗಳಿಗೆ ಧ್ವನಿಯಾಗುತ್ತೇವೆ ಎಂಬ ವಾಗ್ದಾನದೊಂದಿಗೆ ಬರುತ್ತಿರುವ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ವೆಬ್‌ಸೈಟ್‌ ಇಂದು ಲೋಕಾರ್ಪಣೆಗೊಳ್ಳಲಿದ್ದು, ಕನ್ನಡ ನಾಡಿನ ಸರ್ವರಿಗೂ ಲಭ್ಯವಾಗಲಿದೆ.

ಮಾಧ್ಯಮ ಲೋಕದಲ್ಲಿ 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಹರಿಪ್ರಕಾಶ್ ಕೋಣೆಮನೆ ಅವರ ಸಾರಥ್ಯದ ಮಾಧ್ಯಮ ಸಂಸ್ಥೆ ಇದು. ಒಬ್ಬ ಯಶಸ್ವೀ ಸಂಪಾದಕರಾಗಿ, ಸಮಕಾಲೀನ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳ ಹರಿಕಾರ ಎಂದೇ ಹೆಸರಾದ ಹರಿಪ್ರಕಾಶ್ ಅವರು ಈಗ ವಿಸ್ತಾರ ನ್ಯೂಸ್‍ನ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುತ್ತಾರೆ. ಇವರಿಗೆ ಸಮರ್ಥ ಬೆಂಬಲವಾಗಿ ನಿಂತಿರುವವರು ಹಲವು ಯಶಸ್ವೀ ಉದ್ಯಮಗಳನ್ನು ಮುನ್ನಡೆಸುತ್ತಿರುವ ವಾಣಿಜ್ಯೋದ್ಯಮಿ ಎಚ್.ವಿ. ಧರ್ಮೇಶ್ ಅವರು. ಅವರು ವಿಸ್ತಾರ ನ್ಯೂಸ್‍ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿರುತ್ತಾರೆ. ಸಾರಿಗೆ ಉದ್ಯಮಿ ಮತ್ತು ಸಮಾಜಸೇವಕರಾದ ಶ್ರೀನಿವಾಸ್‌ ಹೆಬ್ಬಾರ್‌ ಅವರು ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಇವರ ನೇತೃತ್ವದಲ್ಲಿ ಬಹುದೊಡ್ಡ ಕನಸಿನೊಂದಿಗೆ ವಿಸ್ತಾರ ನ್ಯೂಸ್‌ ಸಮಾಜಕ್ಕೆ ತೆರೆದುಕೊಳ್ಳಲಿದೆ.

ಮುಖ್ಯಮಂತ್ರಿಗಳಿಂದ ಅನಾವರಣ

ಜನಪರ ನಿಲುವು, ಜನೋಪಯೋಗಿ ಸುದ್ದಿ, ಮಾಹಿತಿಗಳೊಂದಿಗೆ ಸಮಾಜದ ಎಲ್ಲರನ್ನೂ ಒಳಗೊಳ್ಳುವ ಈ ಮಾಧ್ಯಮ ಸಂಸ್ಥೆಯ ಲೋಗೊ ಮತ್ತು ವೆಬ್‌ಸೈಟ್‌ನ ಅನಾವರಣವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐಗೆ ಸೇರಿದ ಸರ್‌ ಎಂ ವಿಶ್ವೇಶ್ವರಯ್ಯ  ಸಭಾಂಗಣದಲ್ಲಿ ಮಧ್ಯಾಹ್ನ 12.15ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. ಗೌರವಾನ್ವಿತ ಅತಿಥಿಗಳಾಗಿ ಎಫ್‌ಕೆಸಿಸಿಐ ಅಧ್ಯಕ್ಷರಾದ ಡಾ.ಸಿಎ ಐ.ಎಸ್‌. ಪ್ರಸಾದ್‌ ಮತ್ತು ಓಪನ್‌ ಡಾಟ್‌ ಮನಿಯ ಸಹ ಸ್ಥಾಪಕರಾದ ಮೇಬಲ್‌ ಚಾಕೊ ಅವರು ಭಾಗವಹಿಸುವರು.

ಡಿಜಿಟಲ್‌ ಮಾಧ್ಯಮದ ಭವಿಷ್ಯ: ಸಂವಾದ

ವಿಸ್ತಾರ ನ್ಯೂಸ್‌ ಲೋಗೊ ಮತ್ತು ವೆಬ್‌ ಸೈಟ್‌ ಅನಾವರಣಕ್ಕೆ ಮುನ್ನ ಬೆಳಗ್ಗೆ 10.30ಕ್ಕೆ ʻಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯʼ ಎಂಬ ವಿಷಯದಲ್ಲಿ ಸಂವಾದ ನಡೆಯಲಿದೆ. ಕೂ ಸಂಸ್ಥೆಯ ಸಿಇಒ ಮತ್ತು ಸಹ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ, ಭಾರತದ 100ನೇ ಯೂನಿಕಾರ್ನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಓಪನ್‌ ಡಾಟ್‌ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್‌, ಫ್ರೀಡಂ ಆ್ಯಪ್‌ನ ಸಂಸ್ಥಾಪಕ ಮತ್ತು ಸಿಇಒ ಸಿ.ಎಸ್‌. ಸುಧೀರ್‌ ಅವರು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ ಆಗಿರುವ ಎನ್‌. ರವಿಶಂಕರ್‌ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ.

ವಿಸ್ತಾರ ವೆಬ್‌ಸೈಟ್‌ ವಿಶೇಷಗಳೇನು?

ಜನಸಾಮಾನ್ಯರಿಂದ ಹಿಡಿದು ಸಮಾಜದ ಅತ್ಯುನ್ನತ ಮಟ್ಟದ ವ್ಯಕ್ತಿಗಳವರೆಗೆ, ರೈತರಿಂದ ಆರಂಭಿಸಿ, ಉದ್ಯಮಿಗಳವರೆಗೆ ಸಮಾಜದ ಎಲ್ಲ ಜನರ ನಿರೀಕ್ಷೆಗೆ ತಕ್ಕಂತೆ, ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುವ ಮಹಾ ಉದ್ದೇಶವನ್ನು ವೆಬ್‌ ಸೈಟ್‌ ಹೊಂದಿದೆ. ಯಾವುದೇ ಗಿಮಿಕ್‌ಗಳನ್ನು ಮಾಡದೆ ಸಾಮಾಜಿಕ ಹೊಣೆಗಾರಿಕೆಯ ಬದ್ಧತೆ ಮೆರೆಯುವುದು ವಿಸ್ತಾರ  ನ್ಯೂಸ್‌ನ ನಿರ್ಧಾರ.

ಮಾಧ್ಯಮ ಲೋಕದಲ್ಲಿ ಹತ್ತಾರು ವರ್ಷಗಳ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು ಮತ್ತು ಹೊಸ ಹೊಸ ಕಲ್ಪನೆಗಳೊಂದಿಗೆ ಉತ್ಸಾಹದಲ್ಲಿರುವ ಯುವ ಜನರ ಪವರ್‌ಫುಲ್‌ ಟೀಮ್‌ ಗುಣಮಟ್ಟದ ಸುದ್ದಿಗಳ ಜತೆಗೆ ಮಾಹಿತಿ ಮತ್ತು ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ.

ರೈತರಿಗೆ ಸಂಬಂಧಿಸಿದ ಎಲ್ಲ ವಿಚಾರಗಳ ಮೇಲೆ ತೀಕ್ಷ್ಣ ಒಳನೋಟ, ಅವರ ಬದುಕನ್ನು ಹಸನುಗೊಳಿಸುವ ಹೊಸ ಹೊಸ ಅನ್ವೇಷಕ ಐಡಿಯಾಗಳನ್ನು ವಿಸ್ತಾರ ನ್ಯೂಸ್‌ ನೀಡಲಿದೆ.

ಯುವಜನರಲ್ಲಿ ಉದ್ಯಮಶೀಲತೆಯ ಕನಸು ಬಿತ್ತುವುದು, ಅದನ್ನು ಸಾಕಾರಗೊಳಿಸಲು ನೂರಾರು ಹೊಸ ಹಾದಿಗಳನ್ನು ತೆರೆದು ತೋರಿಸುವುದು ವಿಸ್ತಾರ ನ್ಯೂಸ್‌ ಅಜೆಂಡಾ. ಯುವಜನರಲ್ಲಿ ಸ್ಫೂರ್ತಿ ತುಂಬುವ,  ಅವರನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ವಿಸ್ತಾರ ನ್ಯೂಸ್‌ ನಿರ್ಧರಿಸಿದೆ.

ರಾಜ್ಯ, ದೇಶ, ದೇಶಾಂತರಗಳ ಸುದ್ದಿಯ ಜತೆಗೆ ನಾಡಿನ ಮೂಲೆ ಮೂಲೆಗಳಿಗೂ ವಿಸ್ತಾರ ನ್ಯೂಸ್‌ ಬೆಳಕು ಚೆಲ್ಲಲಿದೆ. ರಾಜಕೀಯದ ಸಂಪೂರ್ಣ ಒಳನೋಟಗಳು, ಕ್ರೀಡೆ, ಸಿನಿಮಾ ಲೋಕದ ರಸವತ್ತಾದ ಸುದ್ದಿಗಳು, ಅತ್ಯಂತ ಸರಳವಾಗಿ ನಿರೂಪಿಸಲ್ಪಡುವ ಜನೋಪಯೋಗಿ ವಾಣಿಜ್ಯ ಸುದ್ದಿಗಳು ನಮ್ಮ ವಿಶೇಷ.

ವಿದ್ಯಾರ್ಥಿಗಳಿಗೆ ಶಿಕ್ಷಣ ಲೋಕದ ಮಾರ್ಗದರ್ಶನ, ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಹಾಯ, ನೌಕರರ ಸಮಸ್ಯೆಗಳಿಗೆ ನೇರ ಪರಿಹಾರ, ಸರ್ವ ಧರ್ಮಗಳ ಸಮನ್ವಯ ದೃಷ್ಟಿ, ಜ್ಯೋತಿಷ-ಅಧ್ಯಾತ್ಮ ಪ್ರಭಾವಳಿ, ಸಾಹಿತ್ಯ ಲೋಕಕ್ಕೆ ಭಾವಸ್ಪರ್ಶ, ಎಲ್ಲರಲ್ಲೂ ಪ್ರೇರಣೆ ತುಂಬುವ ಸ್ಪೂರ್ತಿ ಕಥೆ, ವಿಜ್ಞಾನ-ತಂತ್ರಜ್ಞಾನ, ಆಟೊಮೊಬೈಲ್‌ಗಳ ಲೋಕದೊಳಗೆ ಸುಂದರ ಪಯಣ,  ವೈರಲ್‌ ಸುದ್ದಿಗಳ ಅಚ್ಚರಿ, ಮಕ್ಕಳ ಲೋಕದ ಕೌತುಕ, ಮಹಿಳಾ ಲೋಕದ ಭಾವನೆಗಳಿಗೆ ತೆರೆದ ಹೃದಯ.. ಹೀಗೆ ಸಮಗ್ರ, ಸಮೃದ್ಧ ಸುದ್ದಿಲೋಕವೊಂದು ವಿಸ್ತಾರ ನ್ಯೂಸ್‌ನಲ್ಲಿ ತೆರೆದುಕೊಳ್ಳಲಿದೆ.

Exit mobile version