ಬೆಂಗಳೂರು: ನಾವೆಲ್ಲ ಸೇರಿ ವಿಸ್ತಾರ ಜ್ಯೋತಿ ಬೆಳಗಿಸಿದ್ದೇವೆ. ಈ ಜ್ಯೋತಿ ಮಂಗಳ ಉಂಟು ಮಾಡಲಿ, ಶುಭವಾಗಲಿ, ಆರೋಗ್ಯವಾಗಲಿ, ಐಶ್ವರ್ಯವಾಗಲಿ. ಇಡೀ ನಾಡಿಗೆ ಬೆಳಕಾಗಲಿ ಎಂದು ವಿಸ್ತಾರ ನ್ಯೂಸ್ ಚಾನೆಲ್(Vistara News Launch)ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಸ್ತಾರ ನ್ಯೂಸ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ನ್ಯೂಸ್ ಚಾನೆಲ್ ಆರಂಭಿಸುವುದು ಬಹಳ ದೊಡ್ಡ ರಿಸ್ಕ್. ಅದೊಂದು ಸಾಹಸ. ಉದ್ಯೋಗಿಗಿಂತ ಉದ್ಯೋಗದಾತ ಮುಖ್ಯ. ಉದ್ಯೋಗಿಗೆ ಏನೇ ಸಮಸ್ಯೆಯಾದರೂ ಆತನ ವೈಯಕ್ತಿಕ ಸಮಸ್ಯೆಯಾಗಿರುತ್ತದೆ. ಆದರೆ, ಉದ್ಯೋಗದಾತ ಮಾತ್ರ ಎಲ್ಲರಿಗೂ ಕೆಲಸ ನೀಡಿ, ಎಲ್ಲರ ಜವಾಬ್ದಾರಿಯನ್ನು ತಮ್ಮ ಮೇಲೆ ಹಾಕಿಕೊಂಡಿರುತ್ತಾರೆ. ಹಾಗಾಗಿ, ಇದೊಂದು ದೊಡ್ಡ ರಿಸ್ಕಿನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಶಕ್ತ ಪ್ರಜಾಪ್ರಭುತ್ವಕ್ಕೆ ನಾಲ್ಕು ಕಂಬಗಳು ಅಗತ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಪ್ಪಿದಾಗ ಒಂದಕ್ಕೊಂದು ನಿಯಂತ್ರಣ ಮಾಡುತ್ತವೆ. ಈ ಮೂರೂ ಅಂಗಗಳು ದಾರಿ ತಪ್ಪಿದಾಗ, ಕಿವಿ ಹಿಂಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಆ ಕೆಲಸವನ್ನು ವಿಸ್ತಾರನ್ಯೂಸ್ ಮಾಡಲಿದೆ ಎಂದು ನಾನು ನಂಬುತ್ತೇನೆ ಎಂದು ಡಿಕೆಶಿ ಹೇಳಿದರು.
ನ್ಯೂಸ್ ಚಾನೆಲ್‌ಗಳಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳದ್ದೇ ಸುದ್ದಿ ಇರುತ್ತದೆ. ಇಂದಿನ ರಾಜಕಾರಣಿಗಳ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ರಾಜಕಾರಣಿಗಳೆನ್ನೆಲ್ಲ ಕಳ್ಳ ಕಳ್ಳ ಎಂದು ಕರೆಯುವ ಹಂತಕ್ಕೆ ಪರಿಸ್ಥಿತಿ ಬಂದಿದೆ. ಹಾಗಾಗಿ, ತೆರೆಯ ಮರೆಯಲ್ಲಿ ತಾವಾದರೂ(ವಿಸ್ತಾರನ್ಯೂಸ್) ರಾಜಕಾರಣಿಗಳ ಗೌರವ ಕಾಪಾಡಿ. ಈಗ ಖಾದಿ, ಖಾಕಿ ಮತ್ತು ಕಾವಿಗೆ ಗೌರವವೇ ಇಲ್ಲ. ಎಲ್ಲವೂ ಹೊರಟು ಹೋಗಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಇದನ್ನೂ ಓದಿ | Vistara News Launch | ಕನ್ನಡಿಗರ ಮನ, ಮನೆ ತಲುಪುವುದೇ ವಿಸ್ತಾರನ್ಯೂಸ್ ಆಶಯ: ಹರಿಪ್ರಕಾಶ್ ಕೋಣೆಮನೆ